ರಾಮ್ ರಹೀಮ್ ಸಾಮ್ರಾಜ್ಯದಲ್ಲಿ ಪುರುಷತ್ವ ಕಳೆದುಕೊಂಡ ನೂರಾರು ಸಾಧುಗಳು
ಡೇರಾ ಸಚ್ಛಾ ಸೌಧ ಎಂಬ ರಾಮ್ ರಹೀಮ್ ಸಿಂಗ್ ನ ಸಾಮ್ರಾಜ್ಯದಲ್ಲಿ ನಡೆದ ಅದೆಷ್ಟೋ ಅಪಸವ್ಯಗಳು ಏಕಾಏಕಿ ಹೊರಬೀಳುತ್ತಿವೆ. ಬಾಬಾ ರಾಮ್ ರಹೀಮ್ ಅತ್ಯಾಚಾರಿ ಎಂದು ಸಿಬಿಐ ಕೋರ್ಟ್ ಘೋಷಣೆ ಮಾಡಿದ ಕ್ಷಣದಿಂದಲೇ ಆತನ ಹೇಯ ಕೃತ್ಯಗಳು ಬಯಲಾಗುತ್ತಿವೆ.
Recommended Video

ಮಹಿಳೆಯರ ಮೇಲಿನ ಅತ್ಯಾಚಾರ ಆರೋಪ ಅಲ್ಲದೆ, ಆಶ್ರಮದೊಳಗೆ ಕೊಲೆ ಪ್ರಕರಣಗಳು ನಡೆದ ಬಗ್ಗೆ ಹಾಗೂ ಬಾಬಾ ಆಣತಿಯಂತೆ ನೂರಾರು ಭಕ್ತರ ಪುರುಷತ್ವ್ ಶಕ್ತಿಯನ್ನೇ ಹರಣ ಮಾಡಿದ ಬಗ್ಗೆ ವರದಿಗಳಾಗುತ್ತಿವೆ.

ರಾಮ್ ರಹೀಮ್ ನ ವಿವಾದಾತ್ಮಕ ಸಿನಿಮಾ 'ಮೆಸೆಂಜರ್ ಆಫ್ ಗಾಡ್' ಬಿಡುಗಡೆಗೆ ಮುನ್ನವೇ ಆಶ್ರಮದ ಮಾಜಿ ಸದಸ್ಯರೊಬ್ಬರು ಆರೋಪ ಮಾಡಿದ್ದರು. "ರಾಮ್ ರಹೀಮ್ ಸಿಂಗ್ ಬಲವಂತವಾಗಿ ನಾನೂರು ಮಂದಿಗೆ ಪುರುಷತ್ವ ಶಕ್ತಿ ಹರಣ ಚಿಕಿತ್ಸೆ ಮಾಡಿಸಿದ್ದಾರೆ" ಎಂದು ದೂರಿದ್ದರು.
ಹಂಸರಾಜ್ ಚೌಹಾನ್ ಎಂಬಾತ ತನಗಾದ ಅನುಭವವನ್ನೇ ಹೇಳಿಕೊಂಡಿದ್ದಾರೆ. "ಹದಿನೇಳು ವರ್ಷದ ಹಿಂದೆ ನಾನು ಹತ್ತೊಂಬತ್ತು ವಯಸ್ಸಿನವನಿದ್ದಾಗ ರಾಜಸ್ತಾನದ ಗಂಗಾನಗರದಲ್ಲಿನ ಆಶ್ರಮಕ್ಕೆ ತೆರಳಿದ್ದೆ. ಆಗ ಒಂದು ಲೋಟ ಪೆಪ್ಸಿಯೊಳಗೆ ಅದೇನೋ ಮದ್ದು ಹಾಕಿಕೊಟ್ಟರು. ಎರಡು ದಿನದ ನಂತರ ನನಗೆ ಎಚ್ಚರವಾಯಿತು. ನನಗೆ ಬ್ಯಾಂಡೇಜ್ ಹಾಕಿದ್ದರು. ಆ ನಂತರ ನನಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಕ್ಕೆ ಆಗ್ತಿಲ್ಲ" ಎಂದಿದ್ದಾರೆ.
ಇನ್ನು ಪುರುಷರ ಮಾನಸಿಕ ಸ್ತಿಮಿತ ಕಸಿಯುವಂಥ ಕೆಲವು ಔಷಧಗಳನ್ನು ನೀಡಲಾಗುತ್ತಿತ್ತು ಎಂಬುದು ಕೂಡ ಕೇಳಿಬಂದಿದೆ. ಆಶ್ರಮದಲ್ಲಿ ಮಹಿಳೆಯರಿಗೆ ಮೊಬೈಲ್ ಬಳಸಲು ಬಿಡುತ್ತಿರಲಿಲ್ಲ. ಪತ್ರಿಕೆಗಳನ್ನು ಓದಲು ಅವಕಾಶ ಇರಲಿಲ್ಲ. ಮಹಿಳೆಯರು ಗುಂಪು ಆಗಲು ಸಹ ಬಿಡುತ್ತಿರಲಿಲ್ಲ ಎಂಬ ಅಂಶ ಬಯಲಾಗಿದೆ.












Click it and Unblock the Notifications