ಅವ್ಯವಹಾರ : ಲಾಲೂ, ರಾಬ್ಡಿ ಮೇಲೆ ಸಿಬಿಐ ದಾಳಿ
ನವದೆಹಲಿ, ಜುಲೈ 07 : 2006ರಲ್ಲಿ ಲಾಲೂ ಪ್ರಸಾದ್ ಯಾದವ್ ರೈಲು ಮಂತ್ರಿಯಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿ ಹೋಟೆಲ್ ಟೆಂಡರ್ ವಿಷಯದಲ್ಲಿ ನಡೆಸಲಾಗಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ ಅವರು ಮತ್ತಿತರ ನಾಲ್ವರ ಮೇಲೆ ಶುಕ್ರವಾರ ಸಿಬಿಐ ಕೇಸನ್ನು ದಾಖಲಿಸಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್, ಅವರ ಪತ್ನಿ ರಾಬ್ಡಿ ದೇವಿ, ಅವರಿಬ್ಬರ ಮಗ ತೇಜಸ್ವಿ, ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನ ಮಾಜಿ ನಿರ್ದೇಶಕ ಪಿಕೆ ಗೋಯೆಲ್, ಲಾಲೂ ಅವರ ಅತ್ಯಾಪ್ತ ಪ್ರೇಮ್ ಚಂದ್ ಗುಪ್ತಾ ಅವರ ಪತ್ನಿ ಸರಳಾ ಗುಪ್ತಾ ಅವರ ಮೇಲೆ ಕೇಸನ್ನು ಹಾಕಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಪಟ್ನಾದಲ್ಲಿರುವ ಲಾಲೂ ಪ್ರಸಾದ್ ಯಾದವ್, ರಾಬ್ಡಿ ದೇವಿ ಅವರ ನಿವಾಸ, ದೆಹಲಿ, ಪಟ್ನಾ, ರಾಂಚಿ, ಪುರಿ, ಗುರ್ ಗಾಂವ್ ಗಳಲ್ಲಿರುವ ಕಚೇರಿ ಮತ್ತು ಪಿಕೆ ಗೋಯೆಲ್ ಅವರ ನಿವಾಸ ಸೇರಿದಂತೆ 12 ಸ್ಥಳಗಳ ಮೇಲೆ ಸಿಬಿಐ ತನಿಖಾಧಿಕಾರಿಗಳು ದಾಳಿ ಮಾಡಿ ದಾಖಲೆಗಳಿಗಾಗಿ ಶೋಧ ನಡೆಸಿದರು.
ಬಿಎನ್ಆರ್ ಹೋಟೆಲುಗಳು ರೈಲ್ವೆ ಇಲಾಖೆಗೆ ಸೇರಿದ ಪಾರಂಪರಿಕ ಹೋಟೆಲುಗಳಾಗಿದ್ದು, ಅವುಗಳ ಅಭಿವೃದ್ಧಿ, ನಿರ್ವಹಣೆಯನ್ನು ಖಾಸಗಿ ಹೋಟೆಲಾದ ಸುಜಾತಾ ಹೋಟೆಲಿಗೆ ನೀಡಲಾಗಿತ್ತು.
ಕೆಲ ದಿನಗಳ ಹಿಂದೆ ಕೋಟಿಗಟ್ಟಲೆ ಬೇನಾಮಿ ಆಸ್ತಿ ಮಾಡಿದ್ದಾರೆಂದು ರಾಬ್ಡಿ ದೇವಿ, ಅವರ ಮಗಳು ಮೀಸಾ, ಮಗ ತೇಜಸ್ವಿ ಮತ್ತಿತರ ಸಂಬಂಧಿಕರ ಮನೆಗಳ ಮೇಲೆ ದಾಳಿ ಮಾಡಿದ್ದ ಸಿಬಿಐ, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈಗ ಲಾಲೂ ಅವರ ಮೇಲೆಯೇ ಕೇಸನ್ನು ಜಡಿಯಲಾಗಿದೆ.












Click it and Unblock the Notifications