ರಾಮನವಮಿ ಘರ್ಷಣೆಗಳ ಬೆನ್ನಲ್ಲೇ ಹನುಮ ಜಯಂತಿ ಆಚರಣೆಗೆ ರಾಜ್ಯಗಳಿಗೆ ಸಲಹೆ ನೀಡಿದ ಕೇಂದ್ರ
ನವದೆಹಲಿ, ಏಪ್ರಿಲ್.05: ಇತ್ತೀಚೆಗೆ ನಡೆದ ರಾಮನವಮಿ ವೇಳೆ ಮತ್ತು ನಂತರದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡ ಗೃಹ ಸಚಿವಾಲಯ ರಾಜ್ಯಗಳಿಗೆ ಸಲಹೆ ನೀಡಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮತ್ತು 'ಕೋಮು ಸೌಹಾರ್ದತೆಗೆ ಭಂಗ ತರುವಂತಹ' ಅಂಶಗಳ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದೆ.
ದೇಶದೆಲ್ಲೆಡೆ ಏಪ್ರಿಲ್ 6 ರಂದು (ಗುರುವಾರ) ಹನುಮ ಜಯಂತಿ ಉತ್ಸವ ನಡೆಯಲಿದ್ದು, ಇದಕ್ಕು ಮೊದಲು, ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.

ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 1 ರಂದು ರಾಮ ನವಮಿಯ ಸಂದರ್ಭದಲ್ಲಿ ವರದಿಯಾದ ಕೋಮು ಹಿಂಸಾಚಾರದ ಸರಣಿಯ ಘಟನೆಗಳ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ಸಲಹೆ ನೀಡಿದೆ. ಸಚಿವಾಲಯವು ಬುಧವಾರ ಟ್ವೀಟ್‌ನಲ್ಲಿ, "ಹನುಮಾನ್ ಜಯಂತಿಯ ತಯಾರಿಗಾಗಿ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸಲಹೆಯನ್ನು ನೀಡಿದೆ" ಎಂದು ತಿಳಿಸಿದೆ.
"ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದು ಮತ್ತು ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವ ಯಾವುದೇ ಅಂಶಗಳ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳಿಗೆ ತಿಳಿಸಲಾಗಿದೆ" ಎಂದು ಮಾಹಿತಿ ನೀಡಿದೆ. ಇನ್ನು, ರಾಮನವಮಿ ಆಚರಣೆ ವೇಳೆ ರಾಜ್ಯದಲ್ಲಿ ಹಿಂಸಾಚಾರದ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಬಿಹಾರ ಮತ್ತು ಪಶ್ಚಿಮ ಬಂಗಾಳದಿಂದ ವರದಿ ನೀಡುವಂತೆ ಸೂಚನೆ ನೀಡಿದೆ.
ಹನುಮ ಜಯಂತಿಯ ಸಂದರ್ಭದಲ್ಲಿ ದೇಶಾದ್ಯಂತ ಧಾರ್ಮಿಕ ಮತ್ತು ನಾಗರಿಕ ಗುಂಪುಗಳಿಂದ ಹಲವಾರು ರ‍್ಯಾಲಿಗಳು ಮತ್ತು ಮೆರವಣಿಗೆಗಳನ್ನು ಯೋಜಿಸಲಾಗಿದೆ. ಪ್ರತಿ ವರ್ಷವೂ ದೇಶದ ಹಲವು ಭಾಗಗಳಲ್ಲಿ ಜನರು ರಾಮ ಭಕ್ತ ಹನುಮನ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ರಸ್ತೆಗಳಲ್ಲಿ ಪಾನಕ, ಮಜ್ಜಿಗೆ, ಹೆಸರುಬೆಳೆ, ಊಟವನ್ನು ಹಂಚುಲಾಗುತ್ತದೆ. ರಾಮ ನವಮಿಯಂತೇ ಈ ದಿನವನ್ನು ಆಚರಿಸಲಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ, ಕಳೆದ ಶುಕ್ರವಾರ (ಮಾರ್ಚ್ 30 ರಂದು ) ಹೌರಾದಲ್ಲಿ ರಾಮನವಮಿ ರ‍್ಯಾಲಿ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದು ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿದೆ. ಎರಡು ದಿನಗಳ ಕಾಲ ನಡೆದ ಹಿಂಸಾಚಾರದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಹತ್ತಾರು ಮನೆಗಳಿಗೆ ಹಾನಿಯಾಗಿದೆ. ಒಂದೆರಡು ದಿನಗಳ ನಂತರ, ರಿಶ್ರಾ ಮತ್ತು ಸೀರಂಪೋರ್ ಪ್ರದೇಶಗಳಲ್ಲಿ ಮತ್ತೆ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದ್ದಿತ್ತು.
ಇನ್ನು, ಏಪ್ರಿಲ್ 3 ರಂದು ಹನುಮ ಜಯಂತಿಯನ್ನು ರಾಷ್ಟ್ರವು ಸಂಭ್ರಮದಿಂದ ಆಚರಿಸುವ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂಶಯ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರದ ಬಗ್ಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ನಂತರ ಸಚಿವಾಲಯವು ಏಪ್ರಿಲ್ 4 ರಂದು ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರವಾದ ವರದಿಯನ್ನು ಕೇಳಿದೆ.
ರಾಜ್ಯದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವೀಯ ಅವರು ಅಲ್ಪಸಂಖ್ಯಾತ ಸಮುದಾಯದ ಕ್ರಿಮಿನಲ್‌ಗಳು ಮತ್ತು ಅಪರಾಧಿಗಳ ವಿರುದ್ಧ ಕಣ್ಣು ಮುಚ್ಚಿ ಹಿಂದೂ ಸಮುದಾಯದ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ.












Click it and Unblock the Notifications