ಜಾಮೀನಿನ ಮೇಲೆ ಹೊರಬಂದ ಯತಿ ನರಸಿಂಹಾನಂದ ಮತ್ತೆ ವಿವಾದಾತ್ಮಕ ಹೇಳಿಕೆ
ಉನಾ ಏಪ್ರಿಲ್ 18: ದ್ವೇಷದ ಹೇಳಿಕೆ ನೀಡಿ ಜೈಲು ಪಾಲಾಗಿ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದರೂ ಯತಿ ನರಸಿಂಹಾನಂದರ ನಾಲಿಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿಲ್ಲ. ಇವರು ಮತ್ತೊಮ್ಮೆ ಸಮಾಜಕ್ಕೆ ವಿಷ ಉಣಿಸುವ ಹೇಳಿಕೆ ನೀಡಿದ್ದಾರೆ.
ಭಾನುವಾರ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮುಬಾರಕ್‌ಪುರದಲ್ಲಿ ಆಯೋಜಿಸಿದ್ದ ಧರ್ಮ ಸಂಸದ್‌ನಲ್ಲಿ ಮಾತನಾಡಿದ ಅವರು, ಭಾರತ ಇಸ್ಲಾಮಿಕ್ ದೇಶವಾಗದಿರಲು ಹೆಚ್ಚು ಮಕ್ಕಳನ್ನು ಹೊಂದುವಂತೆ ಹಿಂದೂಗಳಿಗೆ ಕೇಳಿಕೊಂಡರು. ದೇಶವನ್ನು ಹಿಂದೂ ರಹಿತವಾಗದಂತೆ ಉಳಿಸಲು ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಕೇಳಿಕೊಂಡಿದ್ದಾರೆ.
ಮತ್ತೊಂದೆಡೆ ಇದೇ ಧರ್ಮ ಸಂಸದ್‌ನಲ್ಲಿ ಅಖಿಲ ಭಾರತ ಪರಿಷತ್ ಹಿಮಾಚಲ ಪ್ರದೇಶದ ಉಸ್ತುವಾರಿ ಯತಿ ಸತ್ಯಮೇವಾನಂದ ಸರಸ್ವತಿ ಮಾತನಾಡಿ, ಇಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದಿದ್ದಾರೆ. ಮುಸ್ಲಿಮರು ಉದ್ದೇಶಪೂರ್ವಕವಾಗಿ ಹೆಚ್ಚು ಮಕ್ಕಳನ್ನು ಹೇರುತ್ತಿದ್ದಾರೆ. ಜೊತೆಗೆ ಅವರು ಅದನ್ನು ಯೋಜಿತ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಸತ್ಯಂವಾನಂದ ಸರಸ್ವತಿ ಹೇಳಿದ್ದಾರೆ.

ಈ ಕಾರಣದಿಂದಲೇ ನಮ್ಮ ಸಂಘಟನೆ ಹಿಂದೂಗಳಿಗೆ ಹೆಚ್ಚು ಮಕ್ಕಳನ್ನು ಹುಟ್ಟಿಸಿ, ದೇಶ ಇಸ್ಲಾಂ ದೇಶವಾಗುವುದನ್ನು ತಡೆಯಲು ಮುಂದಾಗಿದೆ ಎಂದು ಸರಸ್ವತಿ ಹೇಳಿದ್ದಾರೆ. ನೆರೆಯ ಪಾಕಿಸ್ತಾನದಂತೆ ಭಾರತವನ್ನೂ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವನ್ನಾಗಿ ಮಾಡಲಾಗುವುದು ಎಂದು ಸರಸ್ವತಿ ಹೇಳಿದ್ದಾರೆ. ಅದಕ್ಕಾಗಿಯೇ ನಮ್ಮ ಸಂಸ್ಥೆಯು ಹೆಚ್ಚು ಮಕ್ಕಳನ್ನು ಹೊಂದಲು ಜನರನ್ನು ಕೇಳುತ್ತಿದೆ. ಜೊತೆಗೆ ಕೇವಲ ಎರಡು ಮಕ್ಕಳಿಗೆ ಜನ್ಮ ನೀಡುವ ಯಾವುದೇ ಕಾನೂನು ದೇಶದಲ್ಲಿಲ್ಲ ಎಂದು ಅವರು ಹೇಳಿದರು. ಯತಿ ನರಸಿಂಹಾನಂದ, ಅನ್ನಪೂರ್ಣ ಭಾರತಿ ಸೇರಿದಂತೆ ಹಲವು ಮಹಂತರು ಈ ಧರ್ಮ ಸಂಸದ್‌ನಲ್ಲಿ ಪಾಲ್ಗೊಂಡಿದ್ದರು.
ಉನಾ ಜಿಲ್ಲೆಯ ಅಂಬ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ನರಸಿಂಹಾನಂದ ಅವರ ವಿವಾದಾತ್ಮಕ ಹೇಳಿಕೆಗಾಗಿ ಪೊಲೀಸ್ ಕಾಯ್ದೆ 2007 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಕಳೆದ ವರ್ಷ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ವಿವಾದಾತ್ಮಕ ಹೇಳಿಕೆಗಾಗಿ ನರಸಿಂಹಾನಂದರನ್ನು ಬಂಧಿಸಲಾಗಿತ್ತು.

ಇದೇ ತಿಂಗಳು ಏಪ್ರಿಲ್ 4ರಂದು ಭಾನುವಾರ ದೆಹಲಿಯ ಬುರಾರಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತಿ ನರಸಿಂಹಾನಂದ ಅವರು ಮತ್ತೊಮ್ಮೆ ಹಿಂದೂಗಳು ಶಸ್ತ್ರಾಸ್ತ್ರ ಹಿಡಿಯುವಂತೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ದೇಶದಲ್ಲಿ ಒಬ್ಬ ಮುಸ್ಲಿಂ ಪ್ರಧಾನಿಯಾದರೆ ಆತನಿಂದ ಧಾರ್ಮಿಕ ಮತಾಂತರ, ಹಿಂಸಾಚಾರದ ಅಪಾಯ ಹೆಚ್ಚುತ್ತದೆ. ಹೀಗಾಗಿ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು ಎಂದು ನರಸಿಂಹಾನಂದರು ಹೇಳಿದ್ದರು. ಈ ಹೇಳಿಕೆ ವಿರುದ್ಧ ದೆಹಲಿಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿತ್ತಾದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಬಾರಿಯೂ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗುತ್ತಾರಾ? ಕಾದು ನೋಡಬೇಕಿದೆ.











Click it and Unblock the Notifications