Hindenburg Report: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸರಣಿ ಪ್ರಶ್ನೆ
ನವದೆಹಲಿ, ಆಗಸ್ಟ್ 13: ಅಮೇರಿಕಾ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ಅದಾನಿ ಗ್ರೂಪ್ ಕುರಿತು ಪ್ರಕಟಿಸಿದ್ದ ವರದಿ ಭಾರತದ ಶೇರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಎಬ್ಬಿಸಿದ್ದು, ಹೂಡಿಕೆದಾರರು ತೀವ್ರ ಆತಂಕಗೊಳ್ಳುವಂತೆ ಆಗಿದೆ.
ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ಶನಿವಾರ ಸಂಭವನೀಯ ಹೊಸ ಭಾರತ-ಕೇಂದ್ರಿತ ವರದಿಯ ಬಗ್ಗೆ ಸುಳಿವು ನೀಡುವ ರಹಸ್ಯ ಸಂದೇಶವನ್ನು ಪೋಸ್ಟ್ ಮಾಡಿದೆ. ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ, ಅದಾನಿ ಷೇರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹಿಂಡನ್ ಬರ್ಗ್ ವರದಿ ಆರೋಪಿಸಿದೆ. ಈ ಪೋಸ್ಟ್ ಬಹಳ ತಲ್ಲಣ ಉಂಟು ಮಾಡಿದ್ದು, ಷೇರುಗಳ ಮೌಲ್ಯದಲ್ಲಿ ಭಾರೀ ಕುಸಿತವಾಗುತ್ತಿದೆ.

ಹಿಂಡೆನ್‌ಬರ್ಗ್ ಈ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿ ಎಲ್ಲಾ ಪ್ರತಿಪಕ್ಷಗಳು ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಅವರ ರಾಜೀನಾಮೆಗೆ ಮತ್ತು ಅವರ ವಿರುದ್ಧ ತನಿಖೆಗೆ ಆಗ್ರಹಿಸಿದೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಕೂಡ ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ವಿಡಿಯೋ ಮೂಲಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
2015ರಲ್ಲಿ ಮಾಧವಿ ಬುಚ್ ಹಾಗೂ ಅವರ ಪತಿ ಧವಲ್ ಬುಚ್ ಅವರು ವಿನೋದ್ ಅದಾನಿ ಭಾರತಕ್ಕೆ ಹಣ ತರಲು ಉಪಯೋಗಿಸಿರುವ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಅಲ್ಲದೇ ಫೆಬ್ರವರಿ 2017ರಲ್ಲಿ ಜಂಟಿಯಾಗಿದ್ದ ಎಲ್ಲಾ ಹೂಡಿಕೆಗಳನ್ನು ಮಾಧವಿ ಬುಚ್ ತಮ್ಮ ಪತಿಯ ಖಾತೆಗೆ ಸಂಪೂರ್ಣವಾಗಿ ವರ್ಗಾವಣೆ ಮಾಡಿದ್ದಾರೆ. ನಂತರ ಮಾರ್ಚ್ 2017ರಲ್ಲಿ ಸೆಬಿಯ ಪೂರ್ಣಾವಧಿಯ ಸದಸ್ಯರಾದರು ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ.
ಏಪ್ರಿಲ್ 2019ರಲ್ಲಿ ಅಮೇರಿಕಾ ಮೂಲದ ಸಂಸ್ಥೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ ಪ್ರಾರಂಭಿಸಲು ಅನುಮತಿಯನ್ನು ಪಡೆಯುತ್ತದೆ. ಬಳಿಕ ಸಂಸ್ಥೆಗೆ ಮಾಧವಿ ಬುಚ್ ಪತಿ ಧವಲ್ ಬುಚ್ ಈ ಸಂಸ್ಥೆಗೆ ಸೇರುತ್ತಾರೆ. ಈ ಬಳಿಕ ಮಾಧವಿ ಬುಚ್ ಸೆಬಿ ಅಧ್ಯಕ್ಷೆಯಾಗುತ್ತಾರೆ. ಹೀಗಿರುವಾಗ ಮಹುವಾ ಮೊಯಿತ್ರಾ , ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಹಿಂಡೆನ್‌ಬರ್ಗ್ ಮಾಡಿದ ಆರೋಪಗಳ ಬಗ್ಗೆ ಸೆಬಿ ತನಿಖೆ ನಡೆಸಿ, ವಿದೇಶದಿಂದ ಆಗುತ್ತಿರುವ ಹೂಡಿಕೆಗಳ ಮಾಲೀಕತ್ವ ಯಾರದ್ದು ಅಂತಾ ತಿಳಿದಿಲ್ಲ ಎಂದಿರುವ ವಿಚಾರವನ್ನು ಪ್ರಸ್ತಾಪಿಸಿರುವ ಮಹುವಾ , 2015ರಲ್ಲಿ ನಿವೇ ಹೂಡಿಕೆ ಮಾಡಿದ ಫಂಡ್‌ನ ಮಾಲೀಕತ್ವ ನಿಮಗೇ ತಿಳಿದಿರಲಿಲ್ವಾ ಅಂತಾ ಮಾಧವಿ ಬುಚ್‌ಗೆ ಪ್ರಶ್ನಿಸಿದ್ದಾರೆ. ಅಲ್ಲದೇ ಮಾಧವಿ ಬುಚ್ ಅವರ ರಾಜೀನಾಮೆಗೆ ಮತ್ತು ಅವರ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.












Click it and Unblock the Notifications