Himani Narwal: ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಕೊಲೆ ಪ್ರಕರಣ; ಸಿಸಿಟಿವಿಯಲ್ಲಿ ಶಾಕಿಂಗ್ ದೃಶ್ಯಗಳು ಸೆರೆ
ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಕೊಲೆ ಪ್ರಕರಣದ ಬಗ್ಗೆ ದಿನಕ್ಕೊಂದು ಶಾಕಿಂಗ್ ವಿಚಾರಗಳು ಹೊರಬೀಳುತ್ತಿವೆ. ಇದೀಗ ಸಿಸಿಟಿವಿ ದೃಶ್ಯಾವಳಿಗಳು ಸೋಮವಾರ ಬಿಡುಗಡೆಯಾಗಿದ್ದು ಕೊಲೆ ಆರೋಪಿ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವವನ್ನು ತೆಗೆದುಕೊಂಡು ಹೋಗುವ ಭಯಾನಕ ದೃಶ್ಯಗಳು ಸೆರೆಯಾಗಿವೆ. ಕೃತ್ಯದ ಭೀಕರತೆಗೆ ಇದು ಸಾಕ್ಷಿಯಾಗಿದೆ.
ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ರೋಹ್ಟಕ್‌ನಲ್ಲಿ ಕೊಲೆಯಾಗಿದ್ದರು. ಸಚಿನ್ ಎನ್ನುವಾತ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ರೋಹ್ಟಕ್‌ನ ಬಸ್ ನಿಲ್ದಾಣದ ಬಳಿ ಶನಿವಾರ ಹಿಮಾನಿ ನರ್ವಾಲ್‌ರ ಶವ ಪತ್ತೆಯಾಗಿತ್ತು. ಮೊಬೈಲ್ ಫೋನ್ ಚಾರ್ಜಿಂಗ್ ವೈರ್‍ನಿಂದ ಆಕೆಯನ್ನು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಬಸ್ ಸ್ಟಾಂಡ್ ಬಳಿ ಬಿಸಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ವಿಡಿಯೋದಲ್ಲಿ ಆರೋಪಿಗಳು ಮಹಿಳೆಯ ಮನೆಯ ಹತ್ತಿರದ ಬೀದಿಯಲ್ಲಿ ಸೂಟ್‌ಕೇಸ್ ಎಳೆದುಕೊಂಡು ನಡೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದೇನು?
ಆರೋಪಿ ಸಚಿನ್ ಕೊಲೆಯಾಗಿರುವ ಹಿಮಾನಿ ನರ್ವಾಲ್ ಅವರ ಸ್ನೇಹಿತ ಎಂದು ಹೇಳಿದ್ದಾರೆ. ಹಣಕ್ಕಾಗಿ ಜಗಳ ನಡೆದಿದ್ದು ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸೋಮವಾರ ಮುಂಜಾನೆ ಪೊಲೀಸರು ಆರೋಪಿಯವನ್ನು ಬಂಧಿಸಿದ್ದಾರೆ.
ಸಚಿನ್ ಹರಿಯಾಣದ ಝಜ್ಜರ್ ನಿವಾಸಿಯಾಗಿದ್ದಾರೆ. ಹಣಕಾಸಿನ ಜಗಳವೇ ಈ ಕೊಲೆಗೆ ಕಾರಣ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ. ಆತ ಹಿಮಾನಿಯ ಸ್ನೇಹಿತನಾಗಿದ್ದು ಆಗಾಗ್ಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶವ ಪತ್ತೆಯಾಗುತ್ತಿದ್ದಂತೆ ನಾವು ಎಸ್‌ಐಟಿ ಸೇರಿದಂತೆ ಎಂಟು ತಂಡಗಳನ್ನು ರಚಿಸಿದ್ದೇವೆ. ಶವ ಪತ್ತೆಯಾಗುತ್ತಿದ್ದಂತೆ ಅವರನ್ನು ಗುರುತಿಸುವುದು ಮೊದಲ ಆದ್ಯತೆಯಾಗಿತ್ತು, ಕುಟುಂಬ ಆಕೆಯನ್ನು ಗುರುತಿಸಿದ ಬಳಿಕ ಆರೋಪಿಯನ್ನು ಪತ್ತೆಹಚ್ಚಲು ತಕ್ಷಣವೇ ತನಿಖೆಯನ್ನು ಆರಂಭಿಸಿದರು. ಕಳೆದ ಒಂದೂವರೆ ವರ್ಷಗಳಿಂದ, ಆರೋಪಿಯು ಸಾಮಾಜಿಕ ಮಾಧ್ಯಮಗಳ ಮೂಲಕ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದನು ಆಕೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದನು ಎಂದು ಹೆಚ್ಚುವರಿ ಡಿಜಿಪಿ ಕೆ.ಕೆ. ರಾವ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಫೆಬ್ರವರಿ 27 ರಂದು ಇಬ್ಬರ ನಡುವೆ ತೀವ್ರ ವಾಗ್ವಾದದ ನಂತರ ಕೊಲೆ ನಡೆದಿದೆ. ಇಬ್ಬರ ನಡುವೆ ಹಣಕಾಸಿನ ಸಮಸ್ಯೆ ಇತ್ತು, ಆದರೆ ಖಚಿತವಾಗಿ ಅದು ಏನು ಎನ್ನುವುದರ ಬಗ್ಗೆ ಪರಿಶೀಲಿಸಬೇಕು. ಇದು (ಕೊಲೆಗೆ) ಕಾರಣ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.












Click it and Unblock the Notifications