Old Pension Scheme: ಹಿಮಾಚಲ ಪ್ರದೇಶದಲ್ಲಿ ಹಳೆಯ ಪಿಂಚಣಿ ಯೋಜನೆ ಜಾರಿ
ಶಿಮ್ಲಾ, ಏಪ್ರಿಲ್. 18: ಹಿಮಾಚಲ ಪ್ರದೇಶದಲ್ಲಿ ಏಪ್ರಿಲ್ 1, 2023 ರಿಂದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಅನ್ನು ಮತ್ತೆ ಜಾರಿಗೆ ತರಲಾಗುತ್ತದೆ. ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅಡಿಯಲ್ಲಿ ಕಡಿತವನ್ನು ಎದುರಿಸಬೇಕಾದ 1.36 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನ ಸಿಗಲಿದೆ.
ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಒಪಿಎಸ್ ಜಾರಿ ಸಂಬಂಧ ಹಿಮಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿ ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ. ಹಳೆಯ ಪಿಂಚಣಿ ಯೋಜನೆಯ ಅನುಷ್ಠಾನಕ್ಕಾಗಿ ಕ್ಯಾಬಿನೆಟ್ ನಿರ್ಧಾರದ ಪ್ರಕಾರ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಒಳಗೊಂಡಿರುವ ರಾಜ್ಯ ಸರ್ಕಾರಿ ನೌಕರರ (ನೌಕರ ಮತ್ತು ಉದ್ಯೋಗದಾತರ ಪಾಲು) ಕೊಡುಗೆಗಳನ್ನು ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗುವುದು ಎಂದು ತಿಳಿಸಿದೆ.

2022 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳಲ್ಲಿ ಹಳೆ ಪಿಂಚಣಿ ಯೋಜನೆ ಮರುಸ್ಥಾಪನೆಯು ಒಂದಾಗಿದ್ದು, ಜನವರಿ 13, 2023 ರಂದು ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸರ್ಕಾರದ ಈ ನಿರ್ಧಾರವು ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ನೌಕರರಿಗೆ ಪ್ರಯೋಜನವನ್ನು ನೀಡುತ್ತದೆ. 20 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸೇವೆಯನ್ನು ಹೊಂದಿರುವ ನೌಕರರು ಮೂಲ ವೇತನದ 50 ಪ್ರತಿಶತ ಮತ್ತು ಡಿಎಯನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಜನವರಿ 2004 ರಿಂದ ಹಳೆ ಪಿಂಚಣಿ ಯೋಜನೆ ಅನ್ನು ನಿಲ್ಲಿಸಲಾಗಿತ್ತು. ಜನವರಿ 1, 2004 ರ ನಂತರ ಸೇವೆಗೆ ಸೇರುವ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ವ್ಯಾಪ್ತಿಗೆ ಒಳಪಡುತ್ತಾರೆ.

ಇನ್ನು, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಹರಿಯಾಣದಲ್ಲಿ ಸರ್ಕಾರಿ ನೌಕರರು ಭಾನುವಾರ ಹಿಸಾರ್, ಸಿರ್ಸಾ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
"ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಸರ್ಕಾರ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ನೌಕರರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮತ್ತೆ ಜಾರಿ ಮಾಡಲು ಸಾಧ್ಯವಾದರೆ, ಹರಿಯಾಣ ಸರ್ಕಾರ ಮಾತ್ರ ಏಕೆ ಈ ವಿಷಯದ ಬಗ್ಗೆ ಏಕೆ ಮೌನವಾಗಿದೆ" ಎಂದು ಪ್ರತಿಭಟನಾನಿರತರು ಪ್ರಶ್ನಿಸಿದ್ದರು.
ಹರಿಯಾಣದ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮಾತನಾಡಿ, ಹೊಸ ಪಿಂಚಣಿ ಯೋಜನೆ ನೌಕರರು ಒಪ್ಪುತ್ತಿಲ್ಲ, ಸರ್ಕಾರ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು. ಬಿಜೆಪಿ-ಜೆಜೆಪಿ ಸರ್ಕಾರ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಒಪ್ಪದಿದ್ದರೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಹೇಳಿದ್ದಾರೆ.












Click it and Unblock the Notifications