
ಹಿಮಾಚಲ ಪ್ರದೇಶ ಚುನಾವಣೆ: ಕಾಂಗ್ರೆಸ್, ಬಿಜೆಪಿ ಇಬ್ಬರಿಗೂ ಈಗ ‘ಧುಮಾಲ್' ಚಿಂತೆ
ಶಿಮ್ಲಾ, ನ. 01: ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಅವರ ಹೆಸರನ್ನು ಬಳಸಿಕೊಳ್ಳಲು ಹಲವು ನಾಯಕರು ಪ್ರಯತ್ನಿಸುತ್ತಿದ್ದಾರೆ.
ಮಂಗಳವಾರ ಹಮೀರ್‌ಪುರ ಜಿಲ್ಲೆಯ ನದೌನ್ ವಿಧಾನಸಭಾ ಕ್ಷೇತ್ರದ ಸೆರಾ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಕಾಂಗ್ರೆಸ್ ಅಭ್ಯರ್ಥಿ ಸುಖ್ವಿಂದರ್ ಸಿಂಗ್ ಸುಖು, "ಬಿಜೆಪಿಯು ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಜಿ ಅವರನ್ನು ಬದಿಗಿಟ್ಟಿದೆ" ಆರೋಪಿಸಿದ್ದಾರೆ.
ಹಿಮಾಚಲದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸೇರಿ ಐವರ ಅಮಾನತು
78 ವರ್ಷ ವಯಸ್ಸಿನ ಪ್ರೇಮ್ ಕುಮಾರ್ ಧುಮಾಲ್ ಅವರ ಹೆಸರನ್ನು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಬಳಸಿಕೊಳ್ಳುತ್ತಿರುವುದು ಅವರ ಪ್ರಾಮುಖ್ಯತೆಯನ್ನು ತೋರಿಸುತ್ತವೆ. ವಿಶೇಷವಾಗಿ ಹೊಸ ಹಿಮಾಚಲ ಪ್ರದೇಶದ ಜಿಲ್ಲೆಗಳಾದ ಹಮೀರ್‌ಪುರ, ಮಂಡಿ, ಉನಾ ಮತ್ತು ಕಾಂಗ್ರಾದಲ್ಲಿ ಪ್ರೇಮ್ ಕುಮಾರ್ ಧುಮಾಲ್ ಅವರ ಹೆಸರಿಗೆ ವಿಶೇಷ ಮನ್ನಣೆಯಿದೆ. ಇಲ್ಲಿಂದ 68 ಸದಸ್ಯರ ಹಿಮಾಚಲ ವಿಧಾನಸಭೆಗೆ 35 ಶಾಸಕರು ಆಯ್ಕೆಯಾಗುತ್ತಾರೆ.

ಸಿಎಂ ಅಭ್ಯರ್ಥಿಯಾಗಿದ್ದ ಧುಮಾಲ್‌ಗೆ ಸ್ವಕ್ಷೇತ್ರದಲ್ಲಿ ಸೋಲು
ಕಳೆದ ಚುನಾವಣೆಯಲ್ಲಿ ಮತದಾನಕ್ಕೆ ಕೆಲವು ದಿನಗಳ ಮೊದಲು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಧುಮಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದರು. ಈ ಘೋಷಣೆಯ ನಂತರ 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಪಾಲು 44 ವಿಧಾನಸಭಾ ಸ್ಥಾನಗಳನ್ನು ಗೆದ್ದ ಜಿಲ್ಲೆಗಳು ಧುಮಾಲ್ ಅವರ ಪ್ರಭಾವವಿದ್ದವೇ ಆಗಿದ್ದವು. ಆದರೆ, ಚುನಾವಣೆಯಲ್ಲಿ ಧುಮಾಲ್ ತನ್ನ ಸ್ವಂತ ಸ್ಥಾನವನ್ನು ಕಳೆದುಕೊಂಡರು. ಹೀಗಾಗಿ, ಜೈರಾಮ್ ಠಾಕೂರ್ ಮಂಡಿ ಜಿಲ್ಲೆಯಿಂದ ಮುಖ್ಯಮಂತ್ರಿಯಾದರು.

'ಪ್ರಭಾವಿ ನಾಯಕ ಧುಮಾಲ್‌ರನ್ನು ಸೈಡ್‌ಲೈನ್ ಮಾಡಿದ ಬಿಜೆಪಿ'
ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಸುಖ್ವಿಂದರ್ ಸಿಂಗ್ ಸುಖು ಆರೋಪಿಸಿದ್ದಾರೆ. "2017 ರಲ್ಲಿ ಧುಮಾಲ್ ಅವರು ಮುಖ್ಯಮಂತ್ರಿಯಾಗಲಿ ಎಂದು ಇಬ್ಬರು ಬಿಜೆಪಿ ಶಾಸಕರು ರಾಜೀನಾಮೆ ನೀಡಲು ಮುಂದಾದರು. ಆದರೆ, ಬಿಜೆಪಿಯು ಸಿಎಂ ಅಭ್ಯರ್ಥಿಯಾಗಿ ಸೋತ ನಾಯಕನನ್ನು ಮುಖ್ಯಮಂತ್ರಿ ಮಾಡಲಿಲ್ಲ. ಉತ್ತರಾಖಂಡದಲ್ಲಿ ಧಾಮಿ ಚುನಾವಣೆಯಲ್ಲಿ ಸೋತ ನಂತರವೂ ಸಿಎಂ ಆಗಿ ನೇಮಕಗೊಂಡಿದ್ದರು. ಬಿಜೆಪಿ ತನ್ನದೇ ಆದ ತತ್ವವನ್ನು ಅನುಸರಿಸುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿಲ್ಲ ಎಂದ ಧುಮಾಲ್!
ಹಮೀರ್‌ಪುರ ಜಿಲ್ಲೆಯ ಸಮೀರ್‌ಪುರ ಗ್ರಾಮದಲ್ಲಿದ್ದುಕೊಂಡೇ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಧುಮಾಲ್ ವಿವಾದದಿಂದ ದೂರ ಉಳಿದಿದ್ದಾರೆ. 1998ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರೂ ಬಿಜೆಪಿ ತನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಮುಖ್ಯಮಂತ್ರಿ ಮಾಡಿದೆ ಎಂದು ಹೇಳಿದ್ದರು.
2003 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿತು. ಆದರೆ 2007 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆಪಿ ನಡ್ಡಾ ಅವರು ಧುಮಾಲ್ ಅವರ 2007 ರ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ನಡ್ಡಾ ಶೀಘ್ರದಲ್ಲೇ 2010 ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ರಾಷ್ಟ್ರೀಯ ರಾಜಕೀಯಕ್ಕೆ ತೆರಳಿದರು.
ಈ ಬಾರಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲ ಎಂದು ಧುಮಾಲ್ ಅವರೇ ಹೇಳಿದ್ದರೂ ಅವರ ಕೆಲವು ನಿಷ್ಠಾವಂತರು ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. "ಟಿಕೆಟ್ ನಿರಾಕರಿಸುವುದು ಕೂಡ ರಾಜ್ಯದಲ್ಲಿ ಪಕ್ಷದ 'ಮಿಷನ್ ರಿಪೀಟ್' ಗುರಿಯ ಮೇಲೆ ಪ್ರಭಾವ ಬೀರುತ್ತದೆ. ಧುಮಾಲ್ ಅವರಿಗೆ ಏಕೆ ಟಿಕೆಟ್ ನಿರಾಕರಿಸಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈ ಬಾರಿ ವಯಸ್ಸನ್ನು ಮಾನದಂಡವಾಗಿ ಪರಿಗಣಿಸುವುದಿಲ್ಲ ಎಂದು ಪಕ್ಷವು ಮೊದಲೇ ಹೇಳಿತ್ತು,'' ಎಂದು ಅವರ ನಿಷ್ಠಾವಂತ ಮಾಜಿ ಶಾಸಕ ಇಂದರ್ ಸಿಂಗ್ ಹೇಳಿದ್ದಾರೆ.

ಧುಮಾಲ್ ಅವರಿಗೆ ಟಿಕೆಟ್ ನೀಡಬೇಕಿತ್ತು ಎನ್ನುವ ಬಿಜೆಪಿ ಕಾರ್ಯಕರ್ತರು
"ಧುಮಾಲ್ ಜಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ನಮಗೆ ಅವರಿಗೆ ಟಿಕೆಟ್ ನೀಡಬೇಕಿತ್ತು ಎಂದು ಅನಿಸುತ್ತಿದೆ. ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದರೆ ಪಕ್ಷದ ಹಿರಿಯ ನಾಯಕರಿಗೆ ಗೌರವವಿಲ್ಲ ಎಂಬ ಅರ್ಥ ಬರುತ್ತದೆ" ಎಂದು ಬಿಜೆಪಿ ಕಾರ್ಯಕರ್ತರಾಗಿರುವ, ಉದ್ಯಮಿಯೊಬ್ಬರು ಹೇಳಿದ್ದಾರೆ.
ಹೊಸ ಹಿಮಾಚಲ ಜಿಲ್ಲೆಗಳಲ್ಲಿ ಪ್ರೇಮ್ ಕುಮಾರ್ ಧುಮಾಲ್‌ನ ಮಹತ್ವವನ್ನು ಬಿಜೆಪಿ ಅರ್ಥಮಾಡಿಕೊಂಡಿದೆ. ಹೀಗಾಗಿ ಅವರ ಪುತ್ರರಾದ ಅನುರಾಗ್ ಮತ್ತು ಅರುಣ್ ಇಬ್ಬರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುರಾಗ್ ಠಾಕೂರ್ ಕೇಂದ್ರ ಸಚಿವರಾಗಿದ್ದಾರೆ ಮತ್ತು ಅರುಣ್ ಧುಮಾಲ್ ಅವರನ್ನು ಇತ್ತೀಚೆಗೆ ಪ್ರಬಲ ಭಾರತೀಯ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ.