ಹಿಜಾಬ್ ಧರಿಸಿದರೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಯೇ ಎಂದು ಶಿಕ್ಷಕರಿಗೆ ಹೇಗೆ ತಿಳಿಯುತ್ತದೆ?: ಅಸ್ಸಾಂ ಸಿಎಂ
ಗುವಾಹಟಿ, ಫೆಬ್ರವರಿ 11: ಕರಾವಳಿ ಕರ್ನಾಟಕದಲ್ಲಿ ಭುಗಿಳೆದ್ದ ಹಿಜಾಬ್ ವಿವಾದವು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈಗಾಗಲೇ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ. ಈ ನಡುವೆ ಹಲವಾರು ರಾಷ್ಟ್ರೀಯ ನಾಯಕರುಗಳು ಈ ಬಗ್ಗೆ ಪರ-ವಿರೋಧ ಹೇಳಿಕೆಯನ್ನು ನೀಡುತ್ತಿದ್ದಾರೆ. "ಹಿಜಾಬ್ ಧರಿಸಿದರೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಯೇ ಎಂದು ಶಿಕ್ಷಕರಿಗೆ ಹೇಗೆ ತಿಳಿಯುತ್ತದೆ?," ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ಕರ್ನಾಟಕದ ಈ ಹಿಜಾಬ್ ವಿವಾದದಲ್ಲಿ ದೇಶವೇ ಹೋರಾಡುತ್ತಿದೆ," ಅಭಿಪ್ರಾಯಿಸಿದರು. ಹಾಗೆಯೇ ಈ ಹಿಜಾಬ್ ವಿವಾದದ ವಿಚಾರದಲ್ಲಿ ಕಾಂಗ್ರೆಸ್ ಅನ್ನು ದೂಷಿಸಿದರು. ಕಾಂಗ್ರೆಸ್ ದೇಶದನ್ನೇ ಹಾಳು ಮಾಡುತ್ತಿದೆ ಎಂದು ಆರೋಪ ಮಾಡಿದರು.
"ಕಾಂಗ್ರೆಸ್ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ರೀತಿ ಕಳವಳಕಾರಿ ಆಗಿದೆ. ಇದು 'ತುಕ್ಡೆ ತುಕ್ಡೆ' ಗ್ಯಾಂಗ್ ಅನ್ನು ಪ್ರತಿನಿಧಿಸುತ್ತದೆ. ಅವರು 1947 ರ ಹಿಂದಿನ ಪರಿಸ್ಥಿತಿಯನ್ನು ಪುನರಾವರ್ತಿಸಲು ಒಂದೇ ಒಂದು ಗುರಿಯನ್ನು ಹೊಂದಿದ್ದಾರೆ," ಎಂದು ದೂರಿದ್ದಾರೆ.

ವಿದ್ಯಾರ್ಥಿಗಳಿಗೆ ಕಲಿಯುತ್ತಿದ್ದರೆಯೇ ಎಂದು ಹೇಗೆ ತಿಳಿಯುತ್ತದೆ?
"ಆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರೆ, ವಿದ್ಯಾರ್ಥಿನಿಯರು ಪಾಠವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೋ ಇಲ್ಲವೋ, ಕಲಿಯುತ್ತಿದ್ದಾರೆಯೇ ಇಲ್ಲವೇ ಎಂದು ಶಿಕ್ಷಕರಿಗೆ ಹೇಗೆ ತಿಳಿಯುತ್ತದೆ?. 3 ವರ್ಷಗಳ ಹಿಂದೆ ಹಿಜಾಬ್ ಧರಿಸಬೇಕೆಂದು ಯಾರೂ ಹೇಳಲಿಲ್ಲವೇ?," ಎಂದು ಪ್ರಶ್ನಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇದು ಕಾಂಗ್ರೆಸ್ ಪ್ರಾಯೋಜಿತ ಕೃತ್ಯ ಎಂದು ಆರೋಪಿಸಿದರು. "ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಬೇಕು, ಹಿಜಾಬ್ ಅಲ್ಲ. ಈ ಇಸ್ಲಾಂ ರಾಜಕೀಯವು ಕಾಂಗ್ರೆಸ್ ಪ್ರಾಯೋಜಿತವಾಗಿದೆ," ಎಂದು ಉತ್ತರಾಖಂಡದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಕರ್ನಾಟಕದಲ್ಲಿ ಉಂಟಾದ ಈ ಹಿಜಾಬ್ ವಿವಾದವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಕುರಿತಾಗಿ ನೆರೆಯ ಪಾಕಿಸ್ತಾನ ಮತ್ತೊಮ್ಮೆ ಕ್ಯಾತೆ ತೆಗೆದಿದೆ. ತನ್ನ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉಪ ಅಧಿಕಾರಿಗಳನ್ನು ಕರೆಸಿಕೊಂಡ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಪ್ರಶ್ನಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮಾಜಿ ಸಂಸದೆ ಕವಿತಾ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ತಮ್ಮ ಕೈಬರಹದಲ್ಲಿ ಕವಿತೆ ರಚಿಸಿದ್ದಾರೆ. "ಹಮ್ ಸಬ್ ಹಿಂದೂಸ್ತಾನಿ" ಎಂಬ ಹೆಸರಿನಲ್ಲಿ ಬರೆದಿರುವ ಕವಿತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ ಸದಸ್ಯೆ ಹಾಗೂ ಮಾಜಿ ಸಂಸದೆ ತಮ್ಮ ಕವಿತೆಯಲ್ಲಿ ವಿಭಜಕ ಶಕ್ತಿಗಳ ಕೃತ್ಯಗಳ ನಡುವೆಯೂ ನಾವೆಲ್ಲರೂ ಒಂದೇ ಮತ್ತು ನಾವು ಭಾರತೀಯರು ಹೇಗೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
"ಗಡ್ಡ ಮತ್ತು ಟೋಪಿಯೊಂದಿಗೆ ಸಂಸತ್ತಿಗೆ ಹೋಗಬಹುದಾದರೆ, ಮುಸ್ಲಿಂ ಹುಡುಗಿಯರು ಹಿಜಾಬ್ ಅಥವಾ ನಿಖಾಬ್ ಧರಿಸಿ ಶಾಲೆಗೆ ಏಕೆ ಹೋಗಬಾರದು?" ಎಂದು ಪ್ರಶ್ನಿಸಿದ ಅಸಾದುದ್ದೀನ್ ಓವೈಸಿಯು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಖಂಡಿಸಿದ್ದಾರೆ. ಹಿಜಾಬ್ ವಿಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ, "ಶಾಲೆಗಳಲ್ಲಿ ಸಮವಸ್ತ್ರವಿದ್ದರೆ, ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉಡುಗೆಗೆ ಅವಕಾಶ ನೀಡಬಾರದು. ಶಾಲೆಗಳು ಮತ್ತು ಕಾಲೇಜುಗಳು ಶಿಕ್ಷಣದ ಕೇಂದ್ರಗಳಾಗಿವೆ, ಅಲ್ಲಿ ಶಿಕ್ಷಣವನ್ನು ಮಾತ್ರ ನೀಡಬೇಕು," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications