Jharkhand Election: ಧೈರ್ಯವಿದ್ದರೆ ಎದುರು ನಿಂತು ಹೋರಾಡಿ; ಬಿಜೆಪಿ ವಿರುದ್ಧ ಹೇಮಂತ್ ಸೋರೆನ್ ಆಕ್ರೋಶ
ಜಾರ್ಖಂಡ್ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ, ಬಿಜೆಪಿ ಮತ್ತು ಆಡಳಿತಾರೂಢ ಜೆಎಂಎಂ ನಾಯಕರ ನಡುವೆ ಮಾತಿನ ಸಮರ ಶುರುವಾಗಿದೆ. ಇತ್ತೀಚೆಗೆ ಜಾರ್ಖಂಡ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಳಿತಾರೂಢ ಜೆಂಎಂಎಂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ಚುನಾವಣಾ ರ್‍ಯಾಲಿ ಸಂದರ್ಭದಲ್ಲಿ ಭದ್ರತಾ ಕಾರಣ ನೀಡಿ ಸಿಎಂ ಹೇಮಂತ್ ಸೋರೆನ್ ಅವರ ಹೆಲಿಕ್ಯಾಪ್ಟರ್ ಟೇಕ್ ಆಫ್ ಆಗುವುದನ್ನು ತಡೆ ಹಿಡಿಯಲಾಗಿತ್ತು, ಇದು ಜೆಂಎಂಎಂ ನಾಯಕರನ್ನು ಕೆರಳಿಸಿತ್ತು. ಇದೀಗ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರು ಹೇಮಂತ್ ಸೊರೇನ್ ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಬ್ರಿಟೀಷರ ರೀತಿ ಹೇಡಿಗಳಂತೆ ಹಿಂದಿನಿಂದ ದಾಳಿ ಮಾಡುವ ಬದಲು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ವಿರುದ್ಧ ಹೋರಾಟ ಮಾಡಿ ಗೆಲ್ಲಲಿ ಎಂದು ಸವಾಲು ಹಾಕಿದರು. 'ನಿಮಗೆ ಧೈರ್ಯವಿದ್ದರೆ ಮುಂಭಾಗದಿಂದ ಹೋರಾಡಿ - ಹೇಡಿಗಳ ಬ್ರಿಟಿಷರಂತೆ ಹಿಂದಿನಿಂದ ಏಕೆ ನಿರಂತರವಾಗಿ ದಾಳಿ ಮಾಡುತ್ತೀರಿ? ಕೆಲವೊಮ್ಮೆ ಇಡಿ, ಕೆಲವೊಮ್ಮೆ ಸಿಬಿಐ, ಕೆಲವೊಮ್ಮೆ ಮತ್ತೊಂದು ಸಂಸ್ಥೆಗಳನ್ನು ಇಟ್ಟುಕೊಂಡು ದಾಳಿ ಮಾಡುವುದು ಏಕೆ? ಈಗ ನನ್ನ ಹೆಸರು ಹಾಳು ಮಾಡಲು ಹೊರಟಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ 11 ವರ್ಷಗಳಿಂದ ಅಧಿಕಾರದಲ್ಲಿದೆ, ಜಾರ್ಖಂಡ್‌ನಲ್ಲಿ ಐದು ವರ್ಷಗಳ ಕಾಲ ಆಡಳಿತದಲ್ಲಿತ್ತು, ಡಬಲ್ ಇಂಜಿನ್ ಸರ್ಕಾರ ಎಂದು ಕರೆದುಕೊಳ್ಳುತ್ತಿತ್ತು. ಹಾಗಾದರೆ ಐದು ವರ್ಷಗಳ ರಘುಬರ ಸರ್ಕಾರದ ಅವಧಿಯಲ್ಲಿ ನೀವು ಮಾಡಿದ್ದು ಏನು? ಐದು ವರ್ಷದಲ್ಲಿ 13000 ಶಾಲೆಗಳನ್ನು ಏಕೆ ಮುಚ್ಚಲಾಯಿತು? ಐದು ವರ್ಷಗಳಲ್ಲಿ 11 ಲಕ್ಷ ಪಡಿತರ ಚೀಟಿಗಳನ್ನು ಏಕೆ ರದ್ದುಗೊಳಿಸಲಾಯಿತು? ಐದು ವರ್ಷಗಳಲ್ಲಿ ಜೆಪಿಎಸ್‌ಸಿ ಪರೀಕ್ಷೆ ಏಕೆ ನಡೆಸಲಿಲ್ಲ? ಐದು ವರ್ಷಗಳಲ್ಲಿ ವೃದ್ಧಾಪ್ಯ-ವಿಧವಾ ಪಿಂಚಣಿಯನ್ನು ಏಕೆ ಹೆಚ್ಚಿಸಲಿಲ್ಲ ಮತ್ತು ಸ್ವೀಕರಿಸಲಿಲ್ಲ? ರಾಜ್ಯದಲ್ಲಿ ಐದು ವರ್ಷಗಳಲ್ಲಿ ಹಸಿವಿನಿಂದ ನೂರಾರು ಸಾವುಗಳು ಸಂಭವಿಸಿದ್ದು ಏಕೆ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಐದು ವರ್ಷದಲ್ಲಿ ಯುವಕರಿಗೆ ಸೈಕಲ್ ತಯಾರಿ ಮಾಡಿ, ಬಾಳೆಹಣ್ಣು ಮಾರಿ ಎಂದು ಸಲಹೆ ನೀಡಿದ್ದೇಕೆ ಎಂದು ಪ್ರಶ್ನಿಸಿದ ಅವರು, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಏಕೆ ನೀಡಿಲ್ಲ? ಜಾರ್ಖಂಡ್‌ನ ವಿದ್ಯುತ್ ಅನ್ನು ಬಾಂಗ್ಲಾದೇಶಕ್ಕೆ ಏಕೆ ಮಾರಾಟ ಮಾಡಲಾಯಿತು? ಸೇವಿಕಾ, ಸಹಿಯಾ ಮತ್ತು ಪ್ಯಾರಾ ಶಿಕ್ಷಕರ ಮೇಲೆ ಏಕೆ ನಿರಂತರವಾಗಿ ಲಾಠಿಚಾರ್ಜ್ ಮಾಡಲಾಯಿತು? ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಏಕೆ ಯೋಜನೆ ತಂದಿಲ್ಲ? ಸಹೋದರಿಯರಿಗಾಗಿ ಮೈನಿಯ ಸಮ್ಮಾನ್ ಯೋಜನೆ ಏಕೆ ತಂದಿಲ್ಲ? ವಿದ್ಯುತ್ ಬಿಲ್ ಅನ್ನು ನಿರಂತರವಾಗಿ ಏಕೆ ಹೆಚ್ಚಿಸಲಾಯಿತು? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
"ನಾವು ನಮ್ಮ ಕೆಲಸವನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಜಾರ್ಖಂಡ್ ಜನರನ್ನು ವಿಮಾನದಲ್ಲಿ ವಾಪಸ್ ಕರೆತರುವ ಕೆಲಸ ಮಾಡಿದ್ದೇವೆ. ಬಿಜೆಪಿ ಸರ್ಕಾರದ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ಅವರು ಎಂದಿಗೂ ಯೋಚಿಸದ ಎಲ್ಲವನ್ನೂ ಮಾಡಿದ್ದೇವೆ. ಭವಿಷ್ಯದಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ' ಎಂದು ಭರವಸೆ ನೀಡಿದರು.
ಎರಡು ಹಂತಗಳಲ್ಲಿ ಚುನಾವಣೆ
81 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಾರ್ಖಂಡ್‌ನಲ್ಲಿ ಎರಡು ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗುತ್ತದೆ. ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು 2.6 ಕೋಟಿ ಮತದಾರರು ಮತದಾನ ಮಾಡಲು ಅರ್ಹಯೆ ಹೊಂದಿದ್ದಾರೆ. 1.31 ಕೋಟಿ ಪುರುಷ ಮತದಾರರಿದ್ದು, 1.29 ಕೋಟಿ ಮಹಿಳಾ ಮತದಾರರಿದ್ದಾರೆ. 11.84 ಲಕ್ಷ ಮತದಾರರು ಇದೇ ಮೊದಲ ಬಾರಿಗೆ ಮತ ಹಾಕಲು ಸಜ್ಜಾಗಿದ್ದಾರೆ.
2020ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 30 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಬಿಜೆಪಿ 25 ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 16 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಜೆಎಂಎಂ ಮತ್ತು ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆ ಮಾಡಿದ್ದವು. ಈ ಬಾರಿ ಕೂಡ ಇಂಡಿಯಾ ಒಕ್ಕೂಟದ ಅಡಿಯಲ್ಲಿ ಕಾಂಗ್ರೆಸ್, ಜೆಎಂಎಂ ಮತ್ತು ಮಿತ್ರಪಕ್ಷಗಳು ಸ್ಪರ್ಧಿಸುತ್ತಿವೆ.












Click it and Unblock the Notifications