India Weather Updates: ದೇಶದ ಈ ರಾಜ್ಯಗಳಿಗೆ ಆ.10 ರವರೆಗೆ ಭಾರಿ ಮಳೆ, ಶುಷ್ಕ ವಾತಾವರಣ ನಿರೀಕ್ಷೆ
ಬೆಂಗಳೂರು, ಆಗಸ್ಟ್ 08: ಭಾರತದ ಈಶಾನ್ಯ, ಪೂರ್ವ ಭಾಗದ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಮುಂದುವರಿಯಲಿದೆ. ಮುಂದಿನ ಆಗಸ್ಟ್ 10ರವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬುಧವಾರ ಹಾಗೂ ಗುರುವಾರ ಈ ಎರಡು ದಿನಗಳಲ್ಲಿ ಉತ್ತರಾಖಂಡ, ಉತ್ತರ ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ ಮತ್ತು ಈಶಾನ್ಯ ಭಾರತದಲ್ಲಿ ಭರ್ಜರಿ ಮಳೆಯಾರ್ಭಟ ಕಂಡು ಬರಲಿದೆ. ಇನ್ನೂ ಮಣಿಪುರ, ನಾಗಾಲ್ಯಾಂಡ್, ಅಸ್ಸಾಮ್, ಮಿಜೋರಾಂ ಹಾಗೂ ತ್ರಿಪುರಾ, ಬಿಹಾರ, ಮೇಘಾಲಯ ಒಳಗೊಂಡಂತೆ ಪೂರ್ವ ಉತ್ತರ ಪ್ರದೇಶಗಳ ಹಲವೆಡೆ ಧಾರಾಕಾರ ಮಳೆ ಸುರಿಯಲಿದೆ. ಈ ಕಾರಣಕ್ಕೆ ಇಷ್ಟು ರಾಜ್ಯಗಳಲ್ಲಿ ಆರೆಂಜ್ ಅಲರ್ಟ್ ಘೊಷಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮುನ್ಸೂಚನೆ ನೀಡಿದೆ. ಇಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಂಡುಬರುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಆರೆಂಜ್ ಅಲರ್ಟ್ ನೀಡಿದ ಐಎಂಡಿ
ಇನ್ನೂ ನಾಳೆ ಬುಧವಾರ ಆಗಸ್ಟ್ 9ಕ್ಕೆ ದೇಶದ ಪೂರ್ವ ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ ಆಗಸ್ಟ್ 10ರವರೆಗೆ ಉತ್ತರಾಖಂಡ ಭಾಗದಲ್ಲಿ ಅತ್ಯಧಿಕ ಮಳೆ ಬರುವ ಸಂಭವಗಳು ಇವೆ. ಈ ಪೈಕಿ ನಾಳೆ ಬುಧವಾರ ವ್ಯಾಪಕ ಮಳೆ ಕಂಡು ಬರಲಿದೆ.

ಆಗಸ್ಟ್ 9 ರವರೆಗೆ ಪೂರ್ವ ಉತ್ತರ ಪ್ರದೇಶದಲ್ಲಿ ಮತ್ತು ಆಗಸ್ಟ್ 9ರಂದು ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶದ ಮೇಲೆ ಪ್ರತ್ಯೇಕವಾದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಮುಂದಿನ ಏಳು ದಿನ ಈ ಭಾಗಗಳಲ್ಲಿ ಮುಂಗಾರು ಮಳೆ ಸಕ್ರಿಯವಾಗಲಿದೆ ಎಂದು ಐಎಂಡಿ ತಿಳಿಸಿದೆ.
ಪೂರ್ವ ಭಾರತದ ರಾಜ್ಯಗಳಾದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ರಾಜ್ಯದಲ್ಲಿ ಇಂದು ಮಂಗಳವಾರ ಹಾಗೂ ಆಗಸ್ಟ್ 9ರವರೆಗೆ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ವಿವಿಧೆಡೆ ಭಾರೀ ಮಳೆ ಆಗುವ ಸಾಧ್ಯತೆಗಳು ಇವೆ.
ಈಶಾನ್ಯ ರಾಜ್ಯಗಳಲ್ಲಿ ಮಳೆ ಅಬ್ಬರ
ಇನ್ನೂ ಈಶಾನ್ಯ ಭಾರತದ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್, ತ್ರಿಪುರ ಹಾಗೂ ಮಿಜೋರಾಂನ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಅತ್ಯಧಿಕ ಭಾರಿ ಮಳೆಯಾಗುವ ಸಾಧ್ಯತೆಗಳು ಇವೆ. ಇದರಿಂದ ಆ ಭಾಗದ ಜನಜೀವನ ಅಸ್ತವೆಸ್ತವಾಗಲಿದೆ ಎಂದು ಅಂದಾಜಿಸಲಾಗಿದೆ.
ಅದೇ ರೀತಿ ಮುನ್ಸೂಚನೆ ಪ್ರಕಾರ ದೇಶದ ಮಧ್ಯ ಭಾರತ, ಪಶ್ಚಿಮ ಹಾಗೂ ದಕ್ಷಿಣದ ಇನ್ನೂ ಕೆಲವು ರಾಜ್ಯಗಳಲ್ಲಿ ಮುಂಗಾರಿನ ಪ್ರಭಾವ ಅಷ್ಟಾಗಿ ಕಂಡು ಬಾರದು. ಮುಂದಿನ ಏಳು ದಿನವು ಈ ಭಾಗದಲ್ಲಿ ಸಾಮಾನ್ಯ ಮಳೆ ಸ್ಥಿತಿ ಕಂಡು ಬರಲಿದೆ.
ಆಗಸ್ಟ್-ಸೆಪ್ಟಂಬರ್‌ನಲ್ಲಿ ಸಾಮಾನ್ಯ ಮಳೆ, ಬಿಸಿಲು ಅಧಿಕ
ಭಾರತವು ಆಗಸ್ಟ್ ಹಾಗೂ ನಂತರ ಸೆಪ್ಟಂಬರ್ ತಿಂಗಳ ದ್ವಿತೀಯಾರ್ಧದಲ್ಲಿ ಸಾಮಾನ್ಯ ಮುಂಗಾರು ಮಳೆ ಕಾಣಲಿದೆ. ಅಂದರೆ ಮುಂದಿನ ಒಂದು ವಾರದ ನಂತರ ಮಳೆಯ ತೀವ್ರತೆ ಇಳಿಕೆ ಆಗಲಿದೆ ಎಂದು ಹವಾಮಾನತ ತಜ್ಞರು ತಿಳಿಸಿದ್ದಾರೆ. ಈಗಾಗಲೇ ದೇಶದ ಹಲವಾರು ಭಾಗಗಳಲ್ಲಿ ಪ್ರವಾಹ ಸ್ಥಿತಿ ಕಂಡ ಪ್ರದೇಶಗಳು, ಜನ ಜೀವನ ಮತ್ತೆ ಸಹಜ ಜೀವನದತ್ತ ಮರಳಲಿದ್ದಾರೆ.
ವಾತಾವರದಲ್ಲಿನ ಎಲ್ ನಿನೋ ವಿದ್ಯಮಾನವು ಈ ಎರಡು ತಿಂಗಳ ಕೊನೆ ಎರಡು ವಾರ ಭಾರತದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಭಾರತದಲ್ಲಿ ಆಗಸ್ಟ್ ತಿಂಗಳ ಮುಂದಿನ ದಿನಗಳು ಶುಷ್ಕ ವಾತಾವರಣದಿಂದ ಕೂಡರಲಿವೆ. ಒಟ್ಟಾರೆ ಆಗಸ್ಟ್ ತಿಂಗಳಲ್ಲಿ ದೇಶದಾದ್ಯಂತ ಮಾಸಿಕ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications