ಉತ್ತರ ಭಾರತದಲ್ಲಿ ಮಳೆಯ ಆರ್ಭಟ; 25 ಬಲಿ
ನವದೆಹಲಿ, ಆಗಸ್ಟ್ 19 : ಉತ್ತರ ಭಾರತದ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ವಿವಿಧ ರಾಜ್ಯಗಳಲ್ಲಿ ಇದುವರೆಗೂ 25ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.
ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರ್ಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶನಿವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿವೆ.
ಶಿಮ್ಲಾ, ಕುಲು, ಛಾಂಬಾ, ಸೋಲನ್ ಸೇರಿದಂತೆ ಹಿಮಾಚಲ ಪ್ರದೇಶವ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇಬ್ಬರು ನೇಪಾಳದವರು ಸೇರಿ ರಾಜ್ಯದಲ್ಲಿ ಇದುವರೆಗೂ 18 ಜನರು ಮೃತಪಟ್ಟಿದ್ದಾರೆ.

ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕಾಗಿ ಆಗಮಿಸಿದ್ದ ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ರಕ್ಷಣಾ ಕಾರ್ಯವನ್ನು ತ್ವರಿತವಾಗಿ ನಡೆಸುವಂತೆ ಸಿಎಂ ಜೈರಾಮ್ ಠಾಕೂರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
8 ಮಂದಿ ನಾಪತ್ತೆ : ಉತ್ತರಾಖಂಡದಲ್ಲಿ ಮಳೆಯಿಂದಾಗಿ 8 ಜನರು ನಾಪತ್ತೆಯಾಗಿದ್ದಾರೆ. 20ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ರಸ್ತೆಗಳು ಕೊಚ್ಚಿ ಹೋಗಿವೆ. ಕುಸಿದ ಮನೆಗಳ ಅವಶೇಷಗಳನ್ನು ತೆರವುಗೊಳಿಸಿ, ಜನರನ್ನು ರಕ್ಷಣೆ ಮಾಡಲಾಗಿದೆ.
ಯಮುನಾ ಸೇರಿದಂತೆ ಉತ್ತರ ಭಾರತದ ಅನೇಕ ನದಿಗಳು ಅಪಾಯಮಟ್ಟವನ್ನು ಮೀರಿ ಹರಿಯುತ್ತಿವೆ. ವಿವಿಧ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನವದೆಹಲಿಯಲ್ಲಿಯೂ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
3 ದಿನ ಮಳೆ : ಉತ್ತರಾಖಂಡದ ವಿವಿಧ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡು, ಪುದುಚೆರಿ, ಕರ್ನಾಟಕದ ದಕ್ಷಿಣ ಒಳನಾಡು, ಆಂಧ್ರಪ್ರದೇಶ ಕರಾವಳಿ ತೀರದಲ್ಲಿ ಇನ್ನೂ 48 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ.












Click it and Unblock the Notifications