Heavy Rain: ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ, ಹೀಗಿದ್ದರೂ ಕಾವೇರಿ ನೀರಿಗಾಗಿ ಕಿರಿಕ್!
ದಕ್ಷಿಣ ಭಾರತದಲ್ಲಿ ಹಿಂಗಾರು ಮಳೆ ಫುಲ್ ಅಲರ್ಟ್ ಆಗಿದೆ, ಹಲವು ರಾಜ್ಯಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಅದರಲ್ಲೂ ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಮುಂಗಾರು ಮಳೆಯನ್ನೇ ಮೀರಿಸಿ ಹಿಂಗಾರು ಮಳೆ ಬೀಳುತ್ತಿದೆ. ಪರಿಸ್ಥಿತಿ ಹೀಗಿದ್ರು, ಕಾವೇರಿ ನೀರಿಗಾಗಿ ನಡೆಯುತ್ತಿರುವ ಯುದ್ಧ ನಿಂತಿಲ್ಲ. ಈ ಸಮಯದಲ್ಲೇ ಕರ್ನಾಟಕ್ಕೆ ಆಘಾತ ಎದುರಾಗಿದೆ. ಹಾಗೇ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.
ಮುಂಗಾರು ಕೈಕೊಟ್ಟಿದ್ದ ಕಾರಣಕ್ಕೆ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಬಹುತೇಕ ಭಾಗಗಳು ನಲುಗಿವೆ. ಆದ್ರೆ ಈಗ ಕೇರಳ & ತಮಿಳುನಾಡು ರಾಜ್ಯಗಳಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದ್ದು ತುಸು ನೆಮ್ಮದಿ ನೀಡಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಈಗ ಮಳೆಯಾಗುತ್ತಿದೆ. ಅದ್ರಲ್ಲೂ ಕಾವೇರಿ ಕೊಳ್ಳದಲ್ಲಿ ಹೊಸ ಉತ್ಸಾಹ ಮೂಡಿದ್ದು, ತಮಿಳುನಾಡಿನ ನೀರಿನ ದಾಹ ಇದೀಗ ನಿಧಾನವಾಗಿ ನೀಗುತ್ತಿತ್ತು. ಹೀಗಿದ್ದಾಗಲೇ ಕರ್ನಾಟಕಕ್ಕೆ ದೊಡ್ಡ ಆಘಾತ ಎದುರಾಗಿದೆ.

ಕನ್ನಡಿಗರಿಗೆ ಕುಡಿಯುವ ನೀರೂ ಸಿಗಲ್ವಾ?
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೆ ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗಿದೆ. ನೆರೆ ರಾಜ್ಯ ತಮಿಳುನಾಡಲ್ಲಿ ಭಾರಿ ಮಳೆ ಸುರಿಯುತ್ತಿದ್ದರೂ ಕಾವೇರಿ ನೀರು ಬಿಡಲು ಕರ್ನಾಟಕದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದೀಗ ಮತ್ತೊಮ್ಮೆ ಅಂತಹದ್ದೇ ಆದೇಶ ಹೊರಬಿದ್ದಿದ್ದು, ಕನ್ನಡಿಗರಿಗೆ ಈ ವರ್ಷ ಕುಡಿಯುವ ನೀರಿಗು ಭೀಕರ ಪರಿಸ್ಥಿತಿ ನಿರ್ಮಾಣ ಆಗುವುದು ಬಹುತೇಕ ಪಕ್ಕಾ ಅಂತ ಹೇಳಲಾಗುತ್ತಿದೆ. ತಮಿಳುನಾಡಿಗೆ ಡಿಸೆಂಬರ್ 31ರ ತನಕ ಪ್ರತಿದಿನ 3,216 ಕ್ಯೂಸೆಕ್ ನೀರನ್ನು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಇದೀಗ ಶಿಫಾರಸು ಮಾಡಿದೆ. ಆದ್ರೆ ತಮಿಳುನಾಡಿನ ಮೆಟ್ಟೂರು ಜಲಾಶಯ ಈಗ ಭಾರಿ ಮಳೆಗೆ ತುಂಬುತ್ತಿದೆ. ಹಾಗಾದರೆ ಈಗ ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ಎಷ್ಟಿದೆ ಗೊತ್ತಾ ನೀರಿನ ಪ್ರಮಾಣ?
ಮಳೆ ಬರುತ್ತಿದ್ದರೂ ಒತ್ತಡ?
ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾದ ಹಿನ್ನೆಲೆ & ಇದರ ಜೊತೆಗೆ ಹಿಂಗಾರು ಮಾರುತಗಳು ಬಲಿಷ್ಠವಾದ ಕಾರಣಕ್ಕೆ ತಮಿಳುನಾಡು ಮತ್ತು ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಹೀಗಾಗಿ ಸುಮಾರು 120 ಅಡಿಯ ಮೆಟ್ಟೂರು ಜಲಾಶಯದಲ್ಲಿ 63.40 ಅಡಿ ನೀರು ಸಂಗ್ರಹವಾಗಿದೆ. 4,000 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, 3,800 ಕ್ಯುಸೆಕ್‌ಗೂ ಹೆಚ್ಚು ನೀರು ಹೊರ ಬಿಡಲಾಗುತ್ತಿದೆ. ಇಷ್ಟಾಗಿದ್ದರೂ ಈಗ ಕರ್ನಾಟಕದಿಂದ ನೀರು ಬಿಡುವಂತೆ ಒತ್ತಡ ಹಾಕಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
5,000 ಕ್ಯೂಸೆಕ್ ಕೇಳಿದ್ದ ತಮಿಳುನಾಡು!
ಕರ್ನಾಟಕದಲ್ಲಿ ಎದುರಾಗಿರುವ ಸಂಕಷ್ಟ ಈಗ ತಮಿಳುನಾಡು ಸರ್ಕಾರಕ್ಕೆ ಅರ್ಥವಾದಂತೆ ಕಾಣ್ತಿಲ್ಲ. ಈ ಕಾರಣಕ್ಕೆ ನೀರಿಗಾಗಿ ಒತ್ತಡವನ್ನು ಹಾಕುತ್ತಿರುವ ಆರೋಪವು ಕೇಳಿಬಂದಿದೆ. ಮುಂದಿನ 30 ದಿನ ಕರ್ನಾಟಕಕ್ಕೆ 5000 ಕ್ಯೂಸೆಕ್ ನೀರು ಹರಿಸಲು ಶಿಫಾರಸು ಮಾಡಿ ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಎದುರು ತಮಿಳುನಾಡು ಬೇಡಿಕೆ ಇಟ್ಟಿತ್ತು. ಕರ್ನಾಟಕದ ಅಧಿಕಾರಿಗಳು ಕಾವೇರಿ ಕೊಳ್ಳದ ಸ್ಥಿತಿ ವಿವರಿಸಿದ್ದರು. ಕರ್ನಾಟಕದಲ್ಲಿನ 4 ಡ್ಯಾಂಗೆ ಒಳಹರಿವು ನಿಂತಿದೆ. 2023 ನವೆಂಬರ್ 21 ರಂತೆ ಈ ನಾಲ್ಕೂ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಕುಸಿತ ಕಂಡಿದೆ. ಹೀಗಾಗಿ ನೀರಾವರಿ ಸೇರಿದಂತೆ ಕುಡಿವ ನೀರು & ಇತರ ಅವಶ್ಯಕತೆಗೆ ನೀರಿನ ಕೊರತೆ ಎದುರಾಗಿದೆ. ನೀರು ಬಿಡುವಂತೆ ಆದೇಶ ನೀಡಬೇಡಿ ಎಂದು ಕರ್ನಾಟಕ ಬೇಡಿಕೆ ಇಟ್ಟಿತ್ತು.

ಒಟ್ನಲ್ಲಿ ಕರ್ನಾಟಕ ತನ್ನ ಪರಿಸ್ಥಿತಿ ಹೇಳಿಕೊಂಡು ಅದೆಷ್ಟೇ ಮನವಿ ಮಾಡಿದರೂ ಇದನ್ನ ತಮಿಳುನಾಡು ಅರ್ಥ ಮಾಡಿಕೊಂಡಂತೆ ಕಾಣ್ತಿಲ್ಲ. ಹೀಗಾಗಿ ಕಿರಿಕ್ ಕೂಡ ಜೋರಾಗಿದ್ದು, ಕರ್ನಾಟಕದಲ್ಲಿ ಈ ಕಾರಣಕ್ಕೆ ಮತ್ತೊಮ್ಮೆ ಆಕ್ರೋಶ ಭುಗಿಲೆದ್ದು ಪ್ರತಿಭಟನೆ ನಡೆಯುತ್ತಾ ಅನ್ನೋ ಆತಂಕ ಕೂಡ ಮನೆಮಾಡಿದೆ. ಹಿಂಗಾರು ಮಳೆ ಕೃಪೆ ತೋರಿದ್ರೂ ತಮಿಳುನಾಡು ತನ್ನ ಕಿರಿಕ್ ಮುಂದುವರಿಸಿದೆ.












Click it and Unblock the Notifications