ಲಸಿಕೆ ಕೊರತೆಗೆ ಯಾರು ಹೊಣೆ?; ಸರಣಿ ಟ್ವೀಟ್ ಮೂಲಕ ಉತ್ತರಿಸಿದ ಆರೋಗ್ಯ ಸಚಿವ
ನವದೆಹಲಿ, ಜುಲೈ 14: ಕೊರೊನಾ ಲಸಿಕೆಗಳ ಕೊರತೆ ಮತ್ತು ಲಭ್ಯತೆ ವಿಳಂಬದ ಕುರಿತು ಕೆಲವು ರಾಜ್ಯಗಳು ಮತ್ತು ರಾಜಕೀಯ ಪ್ರತಿನಿಧಿಗಳಿಂದ ಟೀಕೆ ಕೇಳಿಬಂದಿದ್ದು, ಈ ಕುರಿತು ಸರಣಿ ಟ್ವೀಟ್‌ಗಳ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಲಸಿಕೆ ಕೊರತೆ ಆರೋಪವನ್ನು ತಳ್ಳಿಹಾಕಿರುವ ಅವರು, "ಇಂಥ ಹೇಳಿಕೆಗಳು ಸತ್ಯಾಂಶವನ್ನು ಆಧರಿಸಿಲ್ಲ ಮತ್ತು ಜನರಲ್ಲಿ ಭೀತಿ ಉಂಟುಮಾಡುವ ಉದ್ದೇಶ ಹೊಂದಿವೆ" ಎಂದು ಹೇಳಿದ್ದಾರೆ.
"ಸಾಕ್ಷ್ಯಾಧಾರಗಳು ಮತ್ತು ವಾಸ್ತವದ ಆಧಾರದ ಮೇಲೆ ಪ್ರಸ್ತುತ ಪರಿಸ್ಥಿತಿಯ ವಿಶ್ಲೇಷಣೆಯಿಂದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು" ಎಂದಿದ್ದಾರೆ. ಮುಂದೆ ಓದಿ...

ಜುಲೈ ತಿಂಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಳ
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕಾ ಕಾರ್ಯಕ್ರಮವನ್ನು ಸಕ್ರಿಯಗೊಳಿಸಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜೂನ್ 2021 ರಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 11.46 ಕೋಟಿ ಲಸಿಕೆ ಡೋಸ್ ಗಳನ್ನು ಲಭ್ಯಗೊಳಿಸಿತ್ತು. ಜುಲೈ ತಿಂಗಳಲ್ಲಿ ಪ್ರಮಾಣವನ್ನು 13.50 ಕೋಟಿ ಡೋಸ್‌ಗೆ ಹೆಚ್ಚಿಸಲಾಗಿದೆ ಎಂದರು.

ರಾಜ್ಯಗಳಿಗೆ ಮೊದಲೇ ಲಸಿಕೆ ಕುರಿತು ಮಾಹಿತಿ
ಲಸಿಕಾ ಉತ್ಪಾದಕರೊಂದಿಗಿನ ಚರ್ಚೆಯ ಆಧಾರದ ಮೇಲೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜೂನ್ 19ರಂದು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಜುಲೈ ತಿಂಗಳಲ್ಲಿ ಲಭ್ಯವಾಗುವ ಲಸಿಕೆ ಡೋಸ್ ಗಳ ಬಗ್ಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿತ್ತು. ಜೂನ್ 27 ಮತ್ತು ಜುಲೈ 13 ರಂದು, ಜುಲೈ 2021ರ ಮೊದಲ ಮತ್ತು ಎರಡನೆಯ ಪಾಕ್ಷಿಕದಲ್ಲಿ ಪ್ರತಿದಿನ ಸಿಗುವ ಲಸಿಕೆಗಳ ಬಗ್ಗೆ ರಾಜ್ಯಗಳಿಗೆ ಮುಂಚಿತವಾಗಿ ತಿಳಿಸಲಾಯಿತು. ಲಸಿಕಾ ಅಭಿಯಾನವನ್ನು ರಾಜ್ಯ / ಜಿಲ್ಲಾ ಮಟ್ಟದಲ್ಲಿ ಉತ್ತಮ ಮತ್ತು ಪರಿಣಾಮಕಾರಿ ರೀತಿ ಯೋಜಿಸಲು ಈ ಮಾಹಿತಿ ನೀಡಲಾಗಿತ್ತು. ದೇಶದ ಜನರು ಯಾವುದೇ ಸಮಸ್ಯೆಯನ್ನು ಎದುರಿಸಬಾರದೆಂದು ಕೋವಿಡ್ ಲಸಿಕೆಗಳ ಲಭ್ಯತೆಯ ಆಧಾರದ ಮೇಲೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕೋವಿಡ್ -19 ಲಸಿಕೆ ಕಾರ್ಯಕ್ರಮ ಯೋಜಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಲಸಿಕೆ ಕೊರತೆಗೆ ಯಾರು ಹೊಣೆ?
ಲಸಿಕೆ ಲಭ್ಯತೆಯ ಬಗ್ಗೆ ರಾಜ್ಯಗಳಿಗೆ ಮುಂಗಡ ಮಾಹಿತಿ ನೀಡಿದ್ದರೂ, ಲಸಿಕೆ ಫಲಾನುಭವಿಗಳ ದೀರ್ಘ ಸರತಿ ಸಾಲುಗಳನ್ನು ನೋಡುತ್ತಿದ್ದರೆ, ನಿಜವಾದ ಸಮಸ್ಯೆ ಏನು ಮತ್ತು ಈ ಪರಿಸ್ಥಿತಿಗೆ ಯಾರು ಹೊಣೆಗಾರರಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಹೇಳಿದ್ದಾರೆ. ಜನರಲ್ಲಿ ತಪ್ಪು ಮಾಹಿತಿ ಮತ್ತು ಭೀತಿ ಉಂಟುಮಾಡುವ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೀಡುತ್ತಿರುವ ವ್ಯಕ್ತಿಗಳು, ಲಸಿಕೆಗಳ ಲಭ್ಯತೆಗೆ ಸಂಬಂಧಿಸಿದಂತೆ ಸರಿಯಾದ ಮುಂಗಡ ಮಾಹಿತಿಯ ಬಗ್ಗೆ ಅರಿವಿಲ್ಲದೆ, ಆಡಳಿತ ಪ್ರಕ್ರಿಯೆಗಳಿಂದ ಮತ್ತು ಅವರಿಗೆ ನೀಡಲಾಗುತ್ತಿರುವ ಸಂಬಂಧಿತ ಮಾಹಿತಿಯಿಂದ ಅವರು ಅಷ್ಟೊಂದು ವಿಮುಖರಾಗಿದ್ದಾರೆಯೇ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.

"ಲಸಿಕೆ ಕುರಿತು ಜನರಲ್ಲಿ ತಪ್ಪು ಮಾಹಿತಿ ಹರಡಬೇಡಿ"
"ಲಸಿಕಾ ಅಭಿಯಾನದ ಪರಿಣಾಮಕಾರಿ ಯೋಜನೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯತೆಯ ಬಗ್ಗೆ ಮುಂಚಿತವಾಗಿ ತಿಳಿಸಲಾಗಿದೆ. ಆದರೆ ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಜನರಲ್ಲಿ ತಪ್ಪು ಮಾಹಿತಿ ಹರಡಬೇಡಿ ಎಂದಿದ್ದಾರೆ.












Click it and Unblock the Notifications