ಏಪ್ರಿಲ್ 15ರಿಂದ ಕೆಲವು ರೈಲುಗಳ ಟಿಕೆಟ್ ದರ ಏರಿಕೆ
ನವದೆಹಲಿ, ಏಪ್ರಿಲ್ 04; ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ವಸ್ತುಗಳ ದರ ಏರಿಕೆಯಿಂದ ಜನರು ಈಗಾಗಲೇ ಕಂಗೆಟ್ಟಿದ್ದಾರೆ. ರೈಲು ಪ್ರಯಾಣಿಕರಿಗೂ ಈಗ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಏಪ್ರಿಲ್ 15ರಿಂದಲೇ ಜಾರಿಗೆ ಬರುವಂತೆ ಕೆಲವು ರೈಲುಗಳ ಪ್ರಯಾಣ ದರ ಏರಿಕೆಯಾಗುವ ನಿರೀಕ್ಷೆ ಇದೆ.
ದೂರ ಪ್ರದೇಶಗಳಿಗೆ ಸಂಚಾರ ನಡೆಸುವ ಡೀಸೆಲ್ ಇಂಜಿನ್ ಚಾಲಿತ ರೈಲುಗಳ ಪ್ರಯಾಣ ದರ ಏರಿಕೆಯಾಗಲಿದೆ. ಆದರೆ ಸಬ್ ಅರ್ಬನ್ ರೈಲುಗಳ ಪ್ರಯಾಣ ದರವನ್ನು ಏರಿಕೆ ಮಾಡದಿರಲು ತೀರ್ಮಾನಿಸಲಾಗಿದೆ.
ಭಾರತೀಯ ರೈಲ್ವೆ ರೈಲು ಟಿಕೆಟ್‌ಗಳ ಮೇಲೆ ಹೈಡ್ರೊಕಾರ್ಬನ್ ಸರ್ ಚಾರ್ಜ್ ಅಥವ ಡೀಸೆಲ್ ತೆರಿಗೆ ಹೇರಲು ಮುಂದಾಗಿದೆ. ಇದರಿಂದಾಗಿ ಏಪ್ರಿಲ್ 15 ರಿಂದಲೇ ಜಾರಿಗೆ ಬರುವಂತೆ ರೈಲು ಪ್ರಯಾಣ ದರ 10 ರಿಂದ 15 ರೂ. ಏರಿಕೆಯಾಗಲಿದೆ. ದೂರ ಪ್ರಯಾಣಲ್ಲಿ ಶೇ 50ಕ್ಕಿಂತ ಹೆಚ್ಚು ದೂರ ಡೀಸೆಲ್ ಇಂಜಿನ್ ಮೂಲಕ ಸಂಚಾರ ನಡೆಸುವ ರೈಲುಗಳಿಗೆ ಮಾತ್ರ ಈ ದರ ಏರಿಕೆ ಅನ್ವಯವಾಗಲಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಪರಿಣಾಮ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಕಳೆದ 10 ದಿನಗಳಿಂದ ಬೆಲೆ ಏರಿಕೆಯಾಗುತ್ತಲೇ ಇದ್ದು, ಡೀಸೆಲ್ ವಿವಿಧ ರಾಜ್ಯಗಳಲ್ಲಿ 8 ರೂ. ತನಕ ಹೆಚ್ಚಾಗಿದೆ. ಇದರಿಂದಾಗಿ ರೈಲ್ವೆ ದರ ಏರಿಕೆಗೆ ಮುಂದಾಗಿದೆ.
ಯಾವ ದರ್ಜೆಗೆ ಎಷ್ಟು?; ರೈಲು ಪ್ರಯಾಣ ದರ ಬೇರೆ ಬೇರೆ ದರ್ಜೆಗೆ ಬೇರೆ ಬೇರೆ ಮಾದರಿಯಲ್ಲಿ ಹೆಚ್ಚಳವಾಗಲಿದೆ. ಹವಾನಿಯಂತ್ರಿತ, ಸಾಮಾನ್ಯ ಹೀಗೆ ವಿವಿಧ ದರ್ಜೆಗಳಲ್ಲಿ ದರ ವ್ಯತ್ಯಾಸವಾಗಲಿದೆ. ಈ ಕುರಿತು ಅಂತಿಮ ಆದೇಶ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆ ಇದೆ.
ಹವಾನಿಯಂತ್ರಿತ ಬೋಗಿಗಳ ಪ್ರಯಾಣ ದರ 50 ರೂ. ಏರಿಕೆಯಾಗುವ ನಿರೀಕ್ಷೆ ಇದೆ. ಸ್ಲೀಪರ್ ಬೋಗಿಗಳ ದರ 25 ರೂ., ಸಾಮಾನ್ಯ ದರ್ಜೆಯ ಬೋಗಿಗಳ ದರ 10 ರೂ. ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ರೈಲ್ವೆ ಬೋರ್ಡ್ ಅಧಿಕಾರಿಗಳು ಈಗಾಗಲೇ ವಲಯದ ಅಧಿಕಾರಿಗಳಿಗೆ ಶೇ 50ರಷ್ಟು ಡೀಸೆಲ್ ಇಂಜಿನ್ ಮೂಲಕ ಸಂಚಾರ ನಡೆಸುವ ರೈಲುಗಳ ಪಟ್ಟಿಯನ್ನು ತಯಾರು ಮಾಡುವಂತೆ ಸೂಚನೆ ನೀಡಿದ್ದಾರೆ. ಏಪ್ರಿಲ್ 15ಕ್ಕಿಂತ ಮೊದಲು ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಹೆಚ್ಚಿನ ದರವನ್ನು ನೀಡಬೇಕಿಲ್ಲ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾದ ಬಳಿಕ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಭಾರತ ರಷ್ಯಾದಿಂದಲೇ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೂ ಸಹ ತೈಲ ಬಲೆ ನಿಯಂತ್ರಣಕ್ಕೆ ತರಲಾಗುತ್ತಿಲ್ಲ.
ಹೈಡ್ರೊಕಾರ್ಬನ್ ಸರ್ ಚಾರ್ಜ್ ಶುಲ್ಕವನ್ನು ಭಾರತೀಯ ರೈಲ್ವೆ ಘೋಷಣೆ ಮಾಡಿರುವ ವಿದ್ಯುದೀಕರಣ ಕಾಮಗಾರಿಗೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಡೀಸೆಲ್ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಲೇ ಇರುವುದರಿಂದ ಪ್ರಯಾಣಿಕರ ಮೇಲೆ ದರ ಏರಿಕೆ ಹೊರೆ ಹಾಕುವುದು ಅನಿವಾರ್ಯವಾಗಲಿದೆ.
ವಿದ್ಯುದೀಕರಣದಕ್ಕೆ ಆದ್ಯತೆ; ಭಾರತೀಯ ರೈಲ್ವೆ ಹಸಿರು ರೈಲ್ವೆಯಾಗಿ ಪರಿವರ್ತನೆ ಹೊಂದಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. 2030ಕ್ಕೂ ಮುನ್ನ ಶೂನ್ಯ ಇಂಗಾಲ ಹೊರ ಹಾಕುವ ಸಂಸ್ಥೆಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ರೈಲ್ವೆ ಮಾರ್ಗದ ವಿದ್ಯುದೀಕರಣಕ್ಕೆ ಆದ್ಯತೆ ನೀಡಲಾಗಿದೆ.
ಭಾರತೀಯ ರೈಲ್ವೆ ಬೃಹತ್ ಪ್ರಮಾಣದ ವಿದ್ಯುದೀಕರಣ, ನೀರು ಮತ್ತು ಕಾಗದ ಸಂರಕ್ಷಣೆ, ರೈಲು ಮಾರ್ಗದಲ್ಲಿ ಪ್ರಾಣಿಗಳು ಗಾಯಗೊಳ್ಳುವುದನ್ನು ತಡೆಯುವುದು ಸೇರಿದಂತೆ ಪರಿಸರಕ್ಕೆ ಸಹಾಯಕವಾಗುವ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಲಾಖೆಯ ಮೇಲಿನ ಡೀಸೆಲ್ ಹೊರೆ ತಪ್ಪಿಸಲು ವಿದ್ಯುದೀಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ.
ರೈಲ್ವೆ ಬ್ರಾಡ್ ಗೇಜ್ ಮಾರ್ಗಗಳಲ್ಲಿ 2023ರ ಡಿಸೆಂಬರ್‌ನೊಳಗೆ ವಿದ್ಯುದೀಕರಣ ಕಾರ್ಯ ಪೂರ್ಣಗೊಳಿಸುವ ಮೂಲಕ ಶೇ 100ರಷ್ಟು ಸಾಧನೆ ಮಾಡಲು ಯೋಜನೆ ಹಾಕಿಕೊಂಡಿದೆ.












Click it and Unblock the Notifications