Haryana Violence: ಗುರುಗ್ರಾಮದಲ್ಲಿ ಮಸೀದಿಗೆ ಬೆಂಕಿ, ಧರ್ಮಗುರು ಹತ್ಯೆ, ಒಟ್ಟು ನಾಲ್ಕು ಸಾವು- ಮುಂದುವರಿದ ಕೋಮುಗಲಭೆ
ಗುರುಗ್ರಾಮ, ಆಗಸ್ಟ್ 01: ಹರಿಯಾಣದ ನುಹ್‌ನಲ್ಲಿ ಕೋಮುಗಲಭೆ ಮುಂದುವರಿದಿದೆ. ವಿಶ್ವ ಹಿಂದೂ ಪರಿಷತ್ ( ವಿಎಚ್‌ಪಿ ) ಆಯೋಜಿಸಿದ್ದ ಮೆರವಣಿಗೆ ಮೇಲೆ ದುಷ್ಕರ್ಮಿಗಳ ಗುಂಪೊಂದು ಸೋಮವಾರ ಕಲ್ಲು ತೂರಾಟ ನಡೆಸಿತ್ತು. ಆ ನಂತರ ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಬಳಿಕ ನುಹ್‌ನಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷಗಳು ನಡೆದಿವೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗುರುಗ್ರಾಮ್ ಮತ್ತು ಫರಿದಾಬಾದ್‌ನ ಎಲ್ಲಾ ಶಾಲಾ-ಕಾಲೇಜುಗಳಿಗೆ ಹರಿಯಾಣ ಸರ್ಕಾರ ರಜೆ ಘೋಷಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳ ಕಚೇರಿ, 'ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಶಾಲೆಗಳು, ಕಾಲೇಜುಗಳು ಮತ್ತು ಕೋಚಿಂಗ್ ಸೆಂಟರ್‌ಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಂಗಳವಾರ ಮುಚ್ಚಲಾಗುವುದು. ಎಲ್ಲಾ ಶಿಕ್ಷಣ ಸಂಸ್ಥೆಗಳು ಈ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಾವು ಆದೇಶಿಸುತ್ತೇವೆ' ಎಂದು ಹೇಳಿದೆ.
ಸೋಮವಾರ ಸಂಜೆ ನುಹ್ ಜಿಲ್ಲೆಯಲ್ಲಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ನಡೆಸಿದ ಧಾರ್ಮಿಕ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಈ ವೇಳೆ, ಇಬ್ಬರು ಗೃಹರಕ್ಷಕರು ಸಾವನ್ನಪ್ಪಿದ್ದಾರೆ. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘರ್ಷಣೆಯ ಸಮಯದಲ್ಲಿ, ಕಲ್ಲು ತೂರಾಟ ನಡೆಸಲಾಯಿತು. ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಹಿಂಸಾಚಾರದಲ್ಲಿ ತೊಡಗಿರುವವರಲ್ಲಿ ಹೆಚ್ಚಿನವರು 18 ರಿಂದ 24 ವರ್ಷ ವಯಸ್ಸಿನವರು. ಹಿಂಸಾಚಾರದ ಬಗ್ಗೆ ಮಾಹಿತಿ ಪಡೆದ ತಕ್ಷಣ, ನೆರೆಹೊರೆಯ ಪೊಲೀಸ್ ಠಾಣೆಗಳಿಂದ ಪಡೆಗಳನ್ನು ಸಜ್ಜುಗೊಳಿಸಲಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರದೇಶದಲ್ಲಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಉದ್ವಿಗ್ನತೆ ಉಂಟಾಗುತ್ತಿದ್ದಂತೆ, ನುಹ್ ಮತ್ತು ಗುರುಗ್ರಾಮ್ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ನುಹ್, ಫರಿದಾಬಾದ್ ಮತ್ತು ಪಲ್ವಾಲ್ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಬುಧವಾರದವರೆಗೆ ಸ್ಥಗಿತಗೊಳಿಸಲಾಗಿದೆ.
ಗುರುಗ್ರಾಮದಲ್ಲಿ ಮಸೀದಿಗೆ ಬೆಂಕಿ, ಧರ್ಮಗುರು ಹತ್ಯೆ
ಗುರುಗ್ರಾಮದ ಮಸೀದಿಯೊಂದರ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿದೆ. ಆ ಸಮಯದಲ್ಲಿ ಧರ್ಮಗುರುವಿನ ಹತ್ಯೆ ನಡೆದಿದೆ. ಮಧ್ಯರಾತ್ರಿಯ ನಂತರ ನಡೆದ ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಕ್ಟರ್ 57ರಲ್ಲಿರುವ ಅಂಜುಮನ್ ಜಮಾ ಮಸೀದಿಗೆ ಬೆಂಕಿ ಹಚ್ಚಲಾಗಿದೆ. ಅಗ್ನಿಶಾಮಕ ನಿಯಂತ್ರಣ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಹತೋಟಿಗೆ ತಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಚಾರವಾಗಿ ಮಾಹಿತಿ ನೀಡಿರುವ ಕೇಂದ್ರ ಸಚಿವ ಹಾಗೂ ಗುರುಗ್ರಾಮ್ ಸಂಸದ ರಾವ್ ಇಂದರ್‌ಜಿತ್ ಸಿಂಗ್, ಗುರುಗ್ರಾಮದ ಮಸೀದಿಯೊಂದರ ಮೇಲೆ ದಾಳಿ ನಡೆದಿದೆ. ಈ ವೇಳೆ, ಇಮಾಮ್ ಸೇರಿದಂತೆ ಇಬ್ಬರಿಗೆ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.
'ನಿನ್ನೆ ನಾನು ಗೃಹ ಖಾತೆಯ ರಾಜ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ಇಪ್ಪತ್ತು ಅರೆಸೇನಾಪಡೆಗಳನ್ನು ಕಳುಹಿಸಲಾಗಿದೆ. ನುಹ್ ಘಟನೆಯು ಗುರುಗ್ರಾಮದ ಮೇಲೂ ಪರಿಣಾಮ ಬೀರಿದೆ. ಗುರುಗ್ರಾಮದ ಮಸೀದಿಯ ಮೇಲೆ ದಾಳಿ ನಡೆದಿದೆ. ಇದರಲ್ಲಿ ಇಮಾಮ್ ಸೇರಿದಂತೆ ಇಬ್ಬರ ಮೇಲೆ ಗುಂಡು ಹಾರಿಸಲಾಗಿದೆ. ಇಮಾಮ್ ಅವರು ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ಅನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ಕಂಡುಹಿಡಿಯಲು ವಿವಿಧೆಡೆ ದಾಳಿ ನಡೆಸಿದ್ದಾರೆ. ಹಲವು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಧಾರ್ಮಿಕ ಸ್ಥಳಗಳ ಸುತ್ತ ಭದ್ರತೆಯನ್ನು ಒದಗಿಸಲಾಗಿದೆ. ಶಾಂತಿ ಕಾಪಾಡಲು ಪೊಲೀಸರು ಎರಡೂ ಸಮುದಾಯದ ಧಾರ್ಮಿಕ ಮುಖಂಡರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸೋಹ್ನಾ, ಪಟೌಡಿ ಮತ್ತು ಮನೇಸರ್ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.












Click it and Unblock the Notifications