Haryana Violence: ಗುರುಗ್ರಾಮದಲ್ಲಿ 14 ಬಿರಿಯಾನಿ ಹೋಟೆಲ್ ಧ್ವಂಸ, 7 ಅಂಗಡಿಗಳಿಗೆ ಬೆಂಕಿ, ಐದು ಸಾವು
ಗುರುಗ್ರಾಮ, ಆಗಸ್ಟ್ 01: ಹರಿಯಾಣದ ನುಹ್‌ನಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದ ಒಂದು ದಿನದ ಬಳಿಕ ಗುರುಗ್ರಾಮದ ಬಾದ್‌ಶಹಪುರದಲ್ಲಿ ಹೊಸದಾಗಿ ಹಿಂಸಾಚಾರ ಭುಗಿಲೆದ್ದಿದೆ. ಕಾರುಗಳು ಹಾಗೂ ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಸುಮಾರು 200ಕ್ಕೂ ಹೆಚ್ಚು ಯುವಕರು ಬಿರಿಯಾನಿ ಹೋಟೆಲ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಈ ವರೆಗೂ ನಡೆದಿರುವ ಕೋಮುಗಲಭೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾಂಸದ ಆಹಾರ ಮಳಿಗೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗುತ್ತಿದೆ. ಗುರುಗ್ರಾಮದ ಪ್ರಮುಖ ಮಾರುಕಟ್ಟೆಯಲ್ಲಿ ಹದಿನಾಲ್ಕು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಸೆಕ್ಟರ್ 66ರಲ್ಲಿ ಏಳು ಮಳಿಗೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.

ಸೋಮವಾರ ತಡ ರಾತ್ರಿ ಸುಮಾರು 45 ಜನರ ಗುಂಪೊಂದು ಗುರುಗ್ರಾಮ್‌ನ ಸೆಕ್ಟರ್ 57 ರ ಮಸೀದಿಯೊಂದರಲ್ಲಿ ಗುಂಡಿನ ದಾಳಿ ನಡೆಸಿ ನಂತರ ಬೆಂಕಿ ಹಚ್ಚಿದೆ. ಘಟನೆಯಲ್ಲಿ ಮಸೀದಿಯ ಇಮಾಮ್ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣ ಸರ್ಕಾರ ಸೋಮವಾರ ಗುರುಗ್ರಾಮ ಮತ್ತು ನುಹ್‌ನಲ್ಲಿ ಸೆಕ್ಷನ್ 144 ಸಿಆರ್‌ಪಿಸಿಯನ್ನು ವಿಧಿಸಿದೆ. ಗುರುಗ್ರಾಮ, ಫರಿದಾಬಾದ್ ಮತ್ತು ಪಲ್ವಾಲ್‌ನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಂಗಳವಾರ ಮುಚ್ಚುವಂತೆ ಆದೇಶಿಸಿದೆ.
ನುಹ್ ಜಿಲ್ಲೆಯಲ್ಲಿ ನಡೆದಿರುವ ಘರ್ಷಣೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಪೊಲೀಸರು ಸೇರಿದಂತೆ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನುಹ್ ಮತ್ತು ಫರಿದಾಬಾದ್‌ನಲ್ಲಿ ಬುಧವಾರದವರೆಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಮುಂದಿನ ಆದೇಶದವರೆಗೆ ಸೋಹ್ನಾ, ಪಟೌಡಿ ಮತ್ತು ಮಾನೇಸರ್‌ನಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ್ದಾರೆ.
ರಾಹುಲ್ ವಾಗ್ದಾಳಿ
ಹಿಂಸಾಚಾರದ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಬಿಜೆಪಿ, ಮಾಧ್ಯಮಗಳು ಮತ್ತು ಅವರ ಜೊತೆ ನಿಂತಿರುವ ಶಕ್ತಿಗಳು ದೇಶಾದ್ಯಂತ ಹರಡಿರುವ ದ್ವೇಷದ ಬೆಂಕಿಗೆ ಸೀಮೆ ಎಣ್ಣೆಯನ್ನು ಸುರಿಯುತ್ತಿವೆ. ಪ್ರೀತಿಯಿಂದ ಮಾತ್ರ ದೇಶದಲ್ಲಿ ಈ ಬೆಂಕಿಯನ್ನು ನಂದಿಸಲು ಸಾಧ್ಯ' ಎಂದು ತಿಳಿಸಿದ್ದಾರೆ.
ಕಠಿಣ ಕ್ರಮದ ಭರವಸೆ: ಕಟ್ಟರ್
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
'ನುಹ್‌ನಲ್ಲಿ ನಡೆದ ಘಟನೆ ದುರದೃಷ್ಟಕರವಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ನಾನು ಎಲ್ಲ ಸಮುದಾಯದ ಜನರಿಗೆ ಮನವಿ ಮಾಡುತ್ತೇನೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸಿಎಂ ಕಟ್ಟರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೇಜ್ರಿವಾಲ್ ಮನವಿ
ಹರಿಯಾಣದಲ್ಲಿ ಶಾಂತಿ ಕಾಪಾಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ಕೋಮು ಹಿಂಸಾಚಾರವು ಆಳವಾದ ಗಾಯ ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಾಂತಿಯನ್ನು ಕಾಪಾಡುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.
'ಹರಿಯಾಣದ ನುಹ್‌ನಲ್ಲಿ ನಡೆದ ಕೋಮು ಹಿಂಸಾಚಾರವು ತೀವ್ರವಾಗಿ ಆತಂಕಕಾರಿಯಾಗಿದೆ. ಈಶಾನ್ಯದಲ್ಲಿ ಮಣಿಪುರದ ನಂತರ, ಈಗ ಹರಿಯಾಣದಲ್ಲಿ ಇಂತಹ ಘಟನೆಯು ಒಳ್ಳೆಯ ಲಕ್ಷಣವಲ್ಲ' ಎಂದು ಹೇಳಿದ್ದಾರೆ.

ಇಂತಹ ಸಮಯದಲ್ಲಿ ಶಾಂತಿ ಮತ್ತು ಪರಸ್ಪರ ಸಹೋದರತ್ವವನ್ನು ಕಾಪಾಡಿಕೊಳ್ಳಲು ನಾನು ಹರ್ಯಾಣದ ಸಾರ್ವಜನಿಕರಿಗೆ ಕೈ ಜೋಡಿಸಿ ಮನವಿ ಮಾಡುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications