Get Updates
Get notified of breaking news, exclusive insights, and must-see stories!

ವಾಯುಮಾಲಿನ್ಯ ಬಿಕ್ಕಟ್ಟು: ಹರಿಯಾಣದಲ್ಲಿ ಶಾಲೆ, ಕಚೇರಿ ಬಂದ್, ನಿರ್ಮಾಣ ಚಟುವಟಿಕೆ ರದ್ದು

ನವದೆಹಲಿ, ನವೆಂಬರ್ 15: ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆ ನವದೆಹಲಿ ಬೆನ್ನಲ್ಲೇ ಹರಿಯಾಣದಲ್ಲೂ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವುದಕ್ಕೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸರ್ಕಾರ ನಿರ್ಧರಿಸಿದೆ.

ಹರಿಯಾಣದಲ್ಲಿ ನವೆಂಬರ್ 17ರವರೆಗೂ ಯಾವುದೇ ರೀತಿ ನಿರ್ಮಾಣ ಕಾಮಗಾರಿ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧಿಸಲಾಗಿದೆ. ಜೊತೆಗೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ(ವರ್ಕ್ ಫ್ರಮ್ ಹೋಮ್) ಸೂಚಿಸಲಾಗಿದೆ.

ನವದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುವುದಕ್ಕೆ ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು ಬೆಳೆ ನಂತರ ಅದರ ಹುಲ್ಲು ಸುಡುವುದೇ ಕಾರಣ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಎದುರು ವಾದ ಮಂಡಿಸಿತ್ತು. ಈ ವೇಳೆ ರೈತರನ್ನು ದೋಷಿಸುವ ಮೊದಲು ನವದೆಹಲಿಯಲ್ಲಿ ಗಾಳಿ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಶಿಸ್ತುಕ್ರಮ ತೆಗೆದುಕೊಳ್ಳಿ ಎಂದು ಕೋರ್ಟ್ ಚಾಟಿ ಬೀಸಿತ್ತು.

Haryana: No Construction Activity, Schools Close Till Nov 17th To Face Air Pollution Crisis

ದೆಹಲಿಯಲ್ಲೂ ನ.17ರವರೆಗೂ ಕಠಿಣ ನಿಯಮ ಜಾರಿ:

ನವದೆಹಲಿಯ ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ತುರ್ತು ಕ್ರಮಗಳನ್ನು ಘೋಷಿಸಿದ್ದರು. ಮುಂದಿನ ಒಂದು ವಾರದವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಎಲ್ಲ ರೀತಿ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆ ಎಲ್ಲ ಸರ್ಕಾರಿ ಕಚೇರಿಗಳ ಸಿಬ್ಬಂದಿ ಮತ್ತು ಅಧಿಕಾರಿಗಳು ಮನೆಗಳಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡುವಂತೆ ಸೂಚನೆ ನೀಡಲಾಗಿದೆ. ಶನಿವಾರ ತುರ್ತು ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸುಪ್ರೀಂಕೋರ್ಟ್ ಸೂಚಿಸುವುದಕ್ಕೂ ಮೊದಲೇ ರಾಜ್ಯ ಸರ್ಕಾರ ಲಾಕ್‌ಡೌನ್ ಪ್ರಸ್ತಾವನೆಯನ್ನು ಇಟ್ಟಿತ್ತು ಎಂದಿದ್ದರು.

ಶಾಲೆಗೆ ರಜೆ, ಆನ್‌ಲೈನ್‌ನಲ್ಲಿ ತರಗತಿ:

ದೆಹಲಿಯಲ್ಲಿ ವಾಯು ಮಾಲಿನ್ಯ ಮಟ್ಟವನ್ನು ಗಮನದಲ್ಲಿ ಇಟ್ಟುಕೊಂಡು ಸೋಮವಾರದಿಂದ ಮುಂದಿನ ಒಂದು ವಾರದವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. "ಸೋಮವಾರದಿಂದ ಒಂದು ವಾರದವರೆಗೆ, ಶಾಲೆಗಳು ಮುಚ್ಚಿರುತ್ತವೆ; ಮಕ್ಕಳು ಕಲುಷಿತ ಗಾಳಿಯನ್ನು ಉಸಿರಾಡದಂತೆ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದ್ದು, ಆನ್‌ಲೈನ್‌ನಲ್ಲಿ ತರಗತಿಗಳು ಮುಂದುವರಿಯುತ್ತವೆ," ಎಂದು ಕೇಜ್ರಿವಾಲ್ ಹೇಳಿದರು.

ಮನೆಗಳಿಂದಲೇ ಕೆಲಸ ಮಾಡಲು ಸಲಹೆ:

ಸರ್ಕಾರಿ ಕಚೇರಿ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದ್ದು, ಖಾಸಗಿ ಕಚೇರಿಗಳಿಗೆ ಪ್ರತ್ಯೇಕ ಸಲಹೆಯನ್ನು ನೀಡಲಾಗುವುದು ಎಂದು ಕೇಜ್ರಿವಾಲ್ ಹೇಳಿದರು. ದೆಹಲಿಯಲ್ಲಿ ನಾಲ್ಕು ದಿನಗಳ ಕಾಲ ಅಂದರೆ ನವೆಂಬರ್ 14 ರಿಂದ 17 ರವರೆಗೆ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ನೆರೆಯ ರಾಜ್ಯಗಳಲ್ಲಿ ಈರುಳ್ಳಿ ಮಾರಾಟದ ಬಳಿಕ ಅದರ ಹುಲ್ಲು ಸುಡುವುದರಿಂದ ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಹೆಚ್ಚುತ್ತಿದೆ. ಇದನ್ನು ಎದುರಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೇಜ್ರಿವಾಲ್ ಕರೆ ನೀಡಿದರು.

ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ:

ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು "ತುರ್ತು" ಪರಿಸ್ಥಿತಿ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು. ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್, ವಾಹನಗಳ ಸಂಚಾರಕ್ಕೆ ಕಡಿವಾಣ ಮತ್ತು ಕ್ಲ್ಯಾಂಪ್ ಮಾಡುವಂತಹ ಕಠಿಣ ಕ್ರಮಗಳಿಗೆ ಕೋರ್ಟ್ ಸಲಹೆ ನೀಡಿತ್ತು.

ವಾಯು ಗುಣಮಟ್ಟವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಬಗ್ಗೆ ಸೋಮವಾರದೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾ. ಎನ್ ವಿ ರಮಣ ನೇತೃತ್ವದ ಪೀಠ ಸೂಚಿಸಿದೆ. "ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ನೀವು ಹೇಗೆ ಯೋಜಿಸುತ್ತೀರಿ ಎಂದು ನಮಗೆ ತಿಳಿಸಿ? ಎರಡು ದಿನಗಳ ಲಾಕ್‌ಡೌನ್? AQI (ವಾಯು ಗುಣಮಟ್ಟ ಸೂಚ್ಯಂಕ) ಮಟ್ಟವನ್ನು ಕಡಿಮೆ ಮಾಡಲು ನಿಮ್ಮ ಯೋಜನೆ ಏನು?," ಎಂದು ಕೋರ್ಟ್ ಪ್ರಶ್ನಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ವಾಯುವಿನ ಗುಣಮಟ್ಟ

ಭಾನುವಾರದ ವೇಳೆಗೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ಮಟ್ಟದಿಂದ ಸುಧಾರಿಸಿದಂತೆ ಗೋಚರಿಸಿದೆ. ರಾಷ್ಟ್ರ ರಾಜಧಾನಿಯನ್ನು ಆವರಿಸಿರುವ ಹೊಗೆ ಮತ್ತು ಮಬ್ಬಿನ ದಟ್ಟವಾದ ಪದರದಿಂದ ಜನರು ಜಾಗೃತರಾಗಿದ್ದಾರೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಒದಗಿಸಿದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾನುವಾರ 4 ಗಂಟೆಗೆ ಹೊತ್ತಿಗೆ 36 ಮೇಲ್ವಿಚಾರಣಾ ಕೇಂದ್ರಗಳಿಂದ ಪಡೆದ ಮಾಹಿತಿ ಆಧಾರದಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 330 ಆಗಿದೆ. ಶನಿವಾರ ಇದೇ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಮಾಣ 437 ಆಗಿದ್ದು, ಶುಕ್ರವಾರ 471ರ ಗಡಿ ತಲುಪಿದ್ದು, ಹೊಸ ದಾಖಲೆಯಾಗಿತ್ತು. ಮಾಲಿನ್ಯಕಾರಕಗಳನ್ನು ಚದುರಿಸುವ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಗಾಳಿ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+