ಉತ್ತರಾಖಂಡಕ್ಕೆ 11 ಕೋಟಿ ದೇಣಿಗೆ ನೀಡಿದ ಮನೋಹರ್ ಲಾಲ್ ಖಟ್ಟರ್
ಡೆಹ್ರಾಡೂನ್, ಫೆಬ್ರವರಿ.09: ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮಪಾತದಲ್ಲಿ ಸಿಲುಕಿರುವ ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯಕ್ಕಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆರ್ಥಿಕ ನೆರವು ನೀಡಿದ್ದಾರೆ. ಉತ್ತರಾಖಂಡ್ ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ 11 ಕೋಟಿ ರೂಪಾಯಿ ನೀಡುವುದಾಗಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.
ಉತ್ತರಾಖಂಡ್ ನಲ್ಲಿ ಸಂಭವಿಸಿದ ಹಿಮನದಿ ಸ್ಫೋಟ ಮತ್ತು ಪ್ರವಾಹ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯದಲ್ಲಿ ರಕ್ಷಣಾ ಕಾರ್ಯಾಚರಣೆ ಅನುಕೂಲಕ್ಕಾಗಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಸೋಮವಾರವೇ 20 ಕೋಟಿ ರೂಪಾಯಿ ಬಿಡುಗಡೆಗೊಳಿಸಲಾಗುವುದು ಎಂದು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದರು. ಮೃತರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದರು.

ಸುರಂಗದಲ್ಲಿ ಸಿಲುಕಿದ 35 ಕಾರ್ಮಿಕರು:
ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಜೋಶಿಮಠ್ ಪ್ರದೇಶದಲ್ಲಿ ಹಿಮಪರ್ವತ ಸ್ಫೋಟದಿಂದ ಅಲಕ್ ನಂದ್, ದೌಲಿಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 171ಕ್ಕೂ ಅಧಿಕ ಮಂದಿ ಕಾರ್ಮಿಕರು ನಾಪತ್ತೆ ಆಗಿದ್ದಾರೆ. ಸುಮಾರು 35 ಜನರು ಸುರಂಗದ ಒಳಗೆ ಇದ್ದಾರೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications