ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಮೃತಪಟ್ಟ ಯುವಕ: ಕಾರಣ ತಿಳಿಯಿರಿ
ನವದೆಹಲಿ: ಎಷ್ಟೋ ಜನರಿಗೆ ಜಿಮ್ ಅಂದರೆ ಪ್ರಾಣ, ಅದರಲ್ಲೂ ಬಾಡಿ ಬೆಳಸಬೇಕೆಂದು ತಯಾರಿ ಆರಂಭಿಸುವವರಿಗೆ ಜಿಮ್ ಸಂಪೂರ್ಣ ಜೀವನವೇ ಆಗಿರುತ್ತದೆ. ಇನ್ನೂ ಕೆಲವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಬರ್ತಾರೆ. ಆದರೆ ಹೀಗೆ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗಲೇ ಸಾವು ಬಂದು ಎರಗಿದರೆ ಹೇಗಾಗಬೇಡ? ಹೌದು ಇಂತಹ ಭೀಕರ ಘಟನೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಾಕ್ಷಿಯಾಗಿದೆ.
ದೆಹಲಿಯಲ್ಲಿ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುವಾಗ 24 ವರ್ಷದ ಯುವಕ ಮೃತಪಟ್ಟಿದ್ದು, ಈ ಘಟನೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮೃತ ಯುವಕನನ್ನು ಸಕ್ಷಮ್ ಪೃತಿ ಎಂದು ಗುರುತಿಸಲಾಗಿದೆ. ಮೃತ ಸಕ್ಷಮ್ ಸೆಕ್ಟರ್-15ರ ಜಿಮ್ ಒಂದರಲ್ಲಿ ವರ್ಕೌಟ್ ಮಾಡುವಾಗ ಟ್ರೆಡ್‌ಮಿಲ್ ಬಳಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಸಕ್ಷಮ್ ಜೀವ ಕಳೆದುಕೊಂಡಿದ್ದಾರೆ. ಘಟನೆಗೆ ಕಾರಣ ಏನು ಅಂತಾ ಹುಡುಕಿದಾಗ ಆಘಾತ ಎದುರಾಗಿದೆ. ಟ್ರೆಡ್‌ಮಿಲ್‌ನಲ್ಲಿ ಓಡುವಾಗ 24 ವರ್ಷದ ಸಕ್ಷಮ್‌ಗೆ ವಿದ್ಯುತ್ ತಗುಲಿದೆ. ಇದ್ದಕ್ಕಿದ್ದಂತೆ ಜಿಮ್‌ನ ಟ್ರೆಡ್‌ಮಿಲ್ ಒಳಗೆ ವಿದ್ಯುತ್ ಹರಿದಿದ್ದು, ವರ್ಕೌಟ್ ಮಾಡುತ್ತಿದ್ದ ಸಕ್ಷಮ್ ಮೃತಪಟ್ಟಿದ್ದಾರಂತೆ.

ಟ್ರೆಡ್‌ಮಿಲ್ ಒಳಗೆ ಕರೆಂಟ್ ಪಾಸ್ ಆಗಿದ್ದೇಗೆ?
ಸಕ್ಷಮ್ ಪೃತಿ ಬಿ.ಟೆಕ್ ಮುಗಿಸಿದ್ದು, ಗುರುಗ್ರಾಮ ಮೂಲದ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರೋಹಿಣಿ ಸೆಕ್ಟರ್ 19ರ ನಿವಾಸಿಯಾದ ಸಕ್ಷಮ್, ಪ್ರತಿದಿನ ಫಿಟ್‌ನೆಸ್ ಝೋನ್‌ಗೆ ವರ್ಕೌಟ್ ಮಾಡಲು ಹೋಗುತ್ತಿದ್ದರಂತೆ. ಆದ್ರೆ ಜುಲೈ 18ರ ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಟ್ರೆಡ್‌ಮಿಲ್ ಬಳಸಿ ವ್ಯಾಯಾಮ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದರು. ಆಗ ವಿಚಾರ ಬೆಳಕಿಗೆ ಬಂದಿಲ್ಲ. ಆದರೆ ಮರಣೋತ್ತರ ಪರೀಕ್ಷೆಯ ವರದಿ ಶಾಕಿಂಗ್ ಸತ್ಯವನ್ನೇ ಹೊರ ಹಾಕಿದ್ದು, ವಿದ್ಯುತ್ ಸ್ಪರ್ಶದಿಂದ ಈ ದುರಂತ ಸಂಭವಿಸಿದೆ ಎಂದು ದೃಢಪಟ್ಟಿದೆ. ಹೀಗಾಗಿ ಸಕ್ಷಮ್ ಸಾವು ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಮಾಡಿದೆ. ಪೊಲೀಸರು ಕೇಸ್ ದಾಖಲಿಸಿದ್ದು, ತಕ್ಷಣ ಜಿಮ್ ಮ್ಯಾನೇಜರ್ ಸಹಿತ ಸಿಬ್ಬಂದಿಯ ವಿಚಾರಣೆ ನಡೆಸಿದ್ದರು.
ಜಿಮ್ ಮ್ಯಾನೇಜರ್ ಕಂಬಿ ಹಿಂದೆ!
ಹಾಗೇ ಘಟನೆ ಬಳಿಕ ದುರಂತ ನಡೆದಿರುವ ಜಿಮ್‌ನ ಮ್ಯಾನೇಜರ್ ಅನುಭವ್ ದುಗ್ಗಲ್ ಅನ್ನ ಪೊಲೀಸರು ಬಂಧಿಸಿದ್ದಾರೆ. ದುಗ್ಗಲ್ ವಿರುದ್ಧ ಅಪರಾಧಿ ನರಹತ್ಯೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿ ಕೊಲೆ ಮತ್ತು ಯಂತ್ರೋಪಕರಣ ಸಂಬಂಧಿತ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ವಿಚಾರಣೆಯನ್ನೂ ತೀವ್ರಗೊಳಿಸಿರುವ ಪೊಲೀಸರು, ಘಟನೆಗೆ ಪ್ರಮುಖವಾದ ಕಾರಣ ಏನು ಎಂದು ಹುಡುಕುತ್ತಿದ್ದಾರೆ. ಇತ್ತ ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಘಟನೆ ನಡೆದಿರುವುದು ಸಹಜವಾಗಿ ವರ್ಕೌಟ್ ಪ್ರಿಯರ ನಿದ್ದೆಗೆಡಿಸಿದೆ. ಸೋಷಿಯಲ್ ಮೀಡಿಯಾ ಪೂರ ಇದೇ ವಿಚಾರ ಓಡಾಡುತ್ತಿದೆ.
ಒಟ್ನಲ್ಲಿ ಆರೋಗ್ಯ ಚೆನ್ನಾಗಿ ಇರಲಿ ಅಂತಾ ಬೆವರು ಹರಿಸುತ್ತಿದ್ದ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಅಷ್ಟಕ್ಕೂ ಟ್ರೆಡ್‌ಮಿಲ್‌ನಲ್ಲಿ ದಿಢೀರ್ ಕರೆಂಟ್ ಪಾಸ್ ಆಗಿದ್ದೇಗೆ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅದೆಲ್ಲಾ ಏನೇ ಇದ್ದರೂ ಹೋದ ಪ್ರಾಣ ಮಾತ್ರ ಮತ್ತೆ ವಾಪಸ್ ಬರಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾತನಾಡುತ್ತಿದ್ದಾರೆ. ಹಾಗೇ ಜಿಮ್‌ಗೆ ಹೋದ್ರೆ ಸೇಫ್ ಅಂತಿದ್ದವರು, ಘಟನೆ ಬಳಿಕ ಮತ್ತೊಮ್ಮೆ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ.
ಇಷ್ಟೆಲ್ಲದರ ಜೊತೆಗೆ ಈ ಘಟನೆಯಿಂದ ಸೂಕ್ತ ಪಾಠವನ್ನ ಕಲಿತು, ಇನ್ನುಮುಂದೆ ಇಂತಹ ದುರಂತಗಳು ಜಿಮ್‌ಗಳಲ್ಲಿ ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದಾರೆ ಫಿಟ್‌ನೆಸ್ ಪ್ರಿಯರು. ಇಷ್ಟುದಿನ ಜಿಮ್‌ನಲ್ಲಿ ಹೃದಯದ ತೊಂದರೆ, ಮತ್ತಿತರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟ ಘಟನೆಗಳು ನಡೆದಿದ್ದವು. ಆದರೆ ಟ್ರೆಡ್‌ಮಿಲ್ ಸಮಸ್ಯೆಯಿಂದ, ಅದರಲ್ಲೂ ವಿದ್ಯುತ್ ಸ್ಪರ್ಶಿಸಿ ಈ ರೀತಿ ಯುವಕ ಮೃತಪಟ್ಟಿರುವುದು ದುರಂತವೇ ಸರಿ. ಕೊರೊನಾ ಸಂದರ್ಭದಲ್ಲಿ ಜಿಮ್‌ಗಳು ಕ್ಲೋಸ್ ಆಗಿದ್ದಾಗ ಫಿಟ್‌ನೆಸ್ ಪ್ರಿಯರು ತೀವ್ರವಾಗಿ ಪರದಾಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications