ನವದೆಹಲಿ, ನವೆಂಬರ್ 9: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಈ ಬಾರಿ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ ಎಂಬ ಅಂಶ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ಎಬಿಪಿಯಿಂದ ಈ ಸಮೀಕ್ಷೆ ನಡೆದಿದ್ದು, ಕಳೆದ ಆಗಸ್ಟ್ ಗೆ ಹೋಲಿಸಿದರೆ ಎರಡೂವರೆ ತಿಂಗಳಲ್ಲಿ ಗುಜರಾತ್ ನ ಆಡಳಿತಾರೂಢ ಪಕ್ಷ ಬಿಜೆಪಿಯ ಚರಿಷ್ಮಾ ಕಡಿಮೆ ಆಗಿರುವುದು ಕಂಡುಬಂದಿದೆ.
ಎರಡನೇ ಸುತ್ತಿನ ಸಮೀಕ್ಷೆ ಇದಾಗಿದ್ದು, ಅಕ್ಟೋಬರ್ ತಿಂಗಳ ಕೊನೆ ವಾರದಲ್ಲಿ ನಡೆಸಲಾಗಿತ್ತು. ಇದಕ್ಕೂ ಮುನ್ನ ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ನಡೆಸಿದ್ದ ಸಮೀಕ್ಷೆಗೆ ಹೋಲಿಸಿದರೆ ಈ ಸಲ ಬಿಜೆಪಿಯ ಸ್ಥಾನ ಗಳಿಕೆಯ ನಿರೀಕ್ಷೆಯಲ್ಲಿ ಕುಸಿತ ಕಂಡುಬಂದಿದೆ. ಆದರೆ ಈ ಕುಸಿತದ ಹೊರತಾಗಿಯೂ ಬಿಜೆಪಿಗೆ ಹೆಚ್ಚು ಆಘಾತ ಆಗುವಂಥ ಸಂಗತಿಗಳೇನಿಲ್ಲ.
ಎರಡನೇ ಸುತ್ತಿನ ಚುನಾವಣೆ ಪೂರ್ವ ಸಮೀಕ್ಷೆಯನ್ನು ಅಕ್ಟೋಬರ್ 26 ಹಾಗೂ ನವೆಂಬರ್ 1ರ ಮಧ್ಯೆ ಕೈಗೊಂಡಿದ್ದು, 50 ವಿಧಾನಸಭಾ ಕ್ಷೇತ್ರ, 200 ಮತದಾನ ಕೇಂದ್ರದ 3,757 ಮತದಾರರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಟೈಮ್ಸ್ ನೌ- ವಿಎಂಆರ್ ಸಮೀಕ್ಷೆಯಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಬಹುಮತ
ಸಮೀಕ್ಷೆ ಅನ್ವಯ, ಗುಜರಾತ್ ನ ಒಟ್ಟು ಸದಸ್ಯ ಸಂಖ್ಯೆಯ 182ರ ಪೈಕಿ ಬಿಜೆಪಿ 113ರಿಂದ 121 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಇನ್ನು ಕಾಂಗ್ರೆಸ್ ಬಗ್ಗೆ ಹೇಳುವುದಾದರೆ 58ರಿಂದ 64 ಸ್ಥಾನಗಳಲ್ಲಿ ಜಯ ಪಡೆಯುವ ಸಾಧ್ಯತೆಗಳಿವೆ. ಆದರೆ ಕಳೆದ ಆಗಸ್ಟ್ ನಲ್ಲಿ ಸಮೀಕ್ಷೆ ನಡೆಸಿದ ವೇಳೆ ಬಿಜೆಪಿಗೆ ಶೇ 59ರಷ್ಟು ಮತಗಳು ದೊರೆಯುವ ಸಾಧ್ಯತೆಗಳಿದ್ದವು.

ಕುಸಿದ ಬಿಜೆಪಿ ಜನಪ್ರಿಯತೆ
ಅಕ್ಟೋಬರ್ ಕೊನೆಗೆ ಅದು ಶೇ 47ಕ್ಕೆ ಇಳಿದಿದೆ. ಇನ್ನು ಈ ಬಾರಿ ಗುಜರಾತ್ ನಲ್ಲಿ ಕಾಂಗ್ರೆಸ್ ಶೇ 41ರಷ್ಟು ಮತ ಪಡೆಯುವ ಸಾಧ್ಯತೆ ಇದ್ದು, ಕಳೆದ ಆಗಸ್ಟ್ ಗೆ ಹೋಲಿಸಿದರೆ ಶೇ 12ರಷ್ಟು ಹೆಚ್ಚಳವಾಗಿದೆ. ಅಲ್ಲಿಗೂ ಮುಂದಿನ ಐದು ವರ್ಷಗಳ ಕಾಲ ಗುಜರಾತ್ ನಲ್ಲಿ ಬಿಜೆಪಿಯೇ ಅಧಿಕಾರ ನಡೆಸಲಿದೆ ಎಂಬ ಬಗ್ಗೆಯೇ ಈ ಸಮೀಕ್ಷೆಯೂ ಭವಿಷ್ಯ ನುಡಿದಿದೆ.

ವ್ಯತ್ಯಾಸ ಶೇ 6ಕ್ಕೆ ಕುಸಿತ
ಎಬಿಪಿ ನ್ಯೂಸ್, ಲೋಕ್ ನೀತಿ, ಸಿಎಸ್ ಡಿಎಸ್ ಸೇರಿ ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಗುಜರಾತ್ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದವು. ಆ ಸಂದರ್ಭದಲ್ಲಿ ಬಿಜೆಪಿಯು ತನ್ನ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಗಿಂತಲೂ ಶೇ 30ರಷ್ಟು ಜನ ಮತ ಗಣನೆಯಲ್ಲಿ ಮುಂದಿತ್ತು. ಆದರೆ ಅಕ್ಟೋಬರ್ ಕೊನೆ ವಾರದ ಹೊತ್ತಿಗೆ ಈ ವ್ಯತ್ಯಾಸ ಶೇ 6ಕ್ಕೆ ಕುಸಿದಿದೆ.

ಈಗಲೂ ಬಿಜೆಪಿಗೆ ಸರಳ ಬಹುಮತ ಸಾಧ್ಯತೆ
ಈಗಲೂ ಬಿಜೆಪಿಗೆ ಸರಳ ಬಹುಮತ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಒಟ್ಟಾರೆಯಾಗಿ ಜನ ಮತ ಗಣನೆಯ ಸಮೀಕ್ಷೆ ಗಮನಿಸಿದಾಗ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಕಾಂಗ್ರೆಸ್ ಪಾಲಿನ ಮತ ಗಳಿಕೆ (ಬಿಜೆಪಿ ಇಳಿಕೆ) ಸೌರಾಷ್ಟ್ರ-ಕಛ್ ಮತ್ತು ಉತ್ತರ ಗುಜರಾತ್ ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಸೌರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತೀರಾ ಹತ್ತಿರದ ಪೈಪೋಟಿ ಕಾಣುತ್ತಿದೆ. ಇಲ್ಲಿ ಎರಡೂ ಪಕ್ಷಗಳು ಶೇ 42ರಷ್ಟು ಮತ ಪಡೆಯುವ ಸಾಧ್ಯತೆಗಳಿವೆ. ಇನ್ನು ಉತ್ತರ ಗುಜರಾತ್ ನಲ್ಲಿ ಕೈ ಪಕ್ಷ ಬಿಜೆಪಿಗಿಂತ ಶೇ 7ರಷ್ಟು ಮುಂದಿದೆ. ಗುಜರಾತ್ ನ ಒಟ್ಟು 182 ಸ್ಥಾನಗಳ ಪೈಕಿ 107 ಸೀಟುಗಳು ಈ ಎರಡು ಭಾಗದಲ್ಲೇ ಬರುತ್ತವೆ.

ಮಧ್ಯ ಗುಜರಾತ್ ನಲ್ಲಿ ಸಮಸ್ಯೆ
ಆದರೆ, ಕಾಂಗ್ರೆಸ್ ನ ಭದ್ರಕೋಟೆ ಎನಿಸಿರುವ ಮಧ್ಯ ಗುಜರಾತ್ ನಲ್ಲೇ ಸಮಸ್ಯೆಯಂತೆ ಕಾಣುತ್ತಿದೆ. ಈ ಭಾಗದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಶೇ 16ರಷ್ಟು ಕಡಿಮೆ ಮತ ಪಡೆಯುವ ಸಾಧ್ಯತೆಗಳಿವೆ. ದಕ್ಷಿಣ ಗುಜರಾತ್ ನಲ್ಲೂ ಈಗ ಬಿಜೆಪಿ ಪರವಾದ ಅಲೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಕಾಂಗ್ರೆಸ್ ಪರವಾಗಿ ಶೇ 33ರಷ್ಟು ಸ್ಥಾನಗಳು ಬರುವ ಸಾಧ್ಯತೆ ಇದ್ದರೆ, ಬಿಜೆಪಿ ಶೇ 51ರಷ್ಟು ಮತ ಗಳಿಸುವಂತಿದೆ.

ರೈತರ ಒಲವು ಕಾಂಗ್ರೆಸ್ ಪರ
ಇನ್ನು ರೈತರು ತುಂಬ ಪ್ರಬಲವಾಗಿ ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಶೇಕಡಾ 50ರಷ್ಟು ರೈತರು ವಿರೋಧ ಪಕ್ಷದ ಪರವಾಗಿ ಮತ ಚಲಾಯಿಸುವುದಾಗಿ ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಕಳೆದ ಬಾರಿಯ ಸಮೀಕ್ಷೆಗೆ ಹೋಲಿಸಿದರೆ ಈ ಪ್ರಮಾಣ ಶೇಕಡಾ 19ರಷ್ಟು ಹೆಚ್ಚಾಗಿದೆ. ಇನ್ನು ವರ್ತಕ ವರ್ಗದ ಬಗ್ಗೆ ಹೇಳುವುದಾದರೆ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಶೇ 4ರಷ್ಟು ಮಾತ್ರ ವ್ಯತ್ಯಾಸವಿದೆ.

ವರ್ತಕರ ಆದ್ಯತೆಯಲ್ಲಿ ವ್ಯತ್ಯಾಸ
ಕಳೆದ ಆಗಸ್ಟ್ ಗೆ ಹೋಲಿಸಿದರೆ ಬಿಜೆಪಿ ಪರವಾಗಿದ್ದ ವರ್ತಕರ ಮತಗಳ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ಮೊದಲ ಸುತ್ತಿನ ಸಮೀಕ್ಷೆಯಲ್ಲಿ ಎರಡು ಪಕ್ಷಗಳ ಮಧ್ಯದ ಅಂತರ ಶೇ 13ರಷ್ಟಿತ್ತು. ಆದರೆ ಅಕ್ಟೋಬರ್ ಕೊನೆ ಹೊತ್ತಿಗೆ ಆ ಪ್ರಮಾಣ ಶೇ 4ಕ್ಕೆ ಇಳಿಕೆಯಾಗಿದೆ. ಜಿಎಸ್ ಟಿ ಜಾರಿಯಿಂದ ಆದ ಸಮಸ್ಯೆಗಳ ಕಾರಣಕ್ಕೆ ವರ್ತಕ ವರ್ಗದ ಮತದಾರರ ನಿಷ್ಠೆಯಲ್ಲೂ ಬದಲಾವಣೆಯಾಗಿದೆ.

ಮಹಿಳೆಯರಿಗೆ ಬಿಜೆಪಿ ಪರ ಒಲವು
ಆದರೆ, ಪುರುಷ ಮತದಾರರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬಗ್ಗೆ ಸಮಸಮವಾದ ಒಲವು ವ್ಯಕ್ತಪಡಿಸಿದ್ದಾರೆ. ಮಹಿಳಾ ಮತದಾರರು ಬಿಜೆಪಿ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದಾರೆ. ಈ ಪ್ರಮಾಣವು ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದಾರೆ.

ಯುವ ಜನರ ಒಲವು ಕಾಂಗ್ರೆಸ್ ಕಡೆಗೆ
ವಯೋಮಾನದ ಅನುಗುಣವಾಗಿಯೂ ವ್ಯಕ್ತವಾಗಿರುವ ಅಭಿಪ್ರಾಯ ಹೇಳುವುದಾದರೆ, ಮಧ್ಯವಯಸ್ಕರು ಮತ್ತು ವಯಸ್ಸಾದವರಿಗಿಂತ ಯುವ ಸಮುದಾಯವು ಕಾಂಗ್ರೆಸ್ ಪರ ಬೆಂಬಲ ವ್ಯಕ್ತಪಡಿಸಿವೆ. ಯುವ ಸಮುದಾಯದವರಲ್ಲಿ (18-29) ಬಿಜೆಪಿ ಬಗೆಗಿನ ಒಲವು ಕಡಿಮೆಯಾಗಿದೆ. ಆಗಸ್ಟ್ ನಲ್ಲಿ ಬಿಜೆಪಿಗೆ ಯುವ ಮತದಾರರ ಬೆಂಬಲದ ಪ್ರಮಾಣ ಶೇ 63ರಷ್ಟಿತ್ತು. ಅದು 44ರಷ್ಟಿಗೆ ಕುಸಿದಿದೆ.

ಮುಖ್ಯಮಂತ್ರಿ ಅಭ್ಯರ್ಥಿಯಾಗಿ ರುಪಾನಿಗೆ ಬೆಂಬಲ
ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಜಯ್ ರುಪಾನಿ ಆಯ್ಕೆಯನ್ನು ಆಗಸ್ಟ್ ನಲ್ಲಿ ಶೇ 24ರಷ್ಟು ಮಂದಿ ಬೆಂಬಲಿಸಿದ್ದರು. ಆ ಪ್ರಮಾಣ ಶೇ 18ಕ್ಕೆ ಇಳಿದಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಭರತ್ ಸಿನ್ಹಾ ಸೋಲಂಕಿ ಬಗ್ಗೆ ಕಳೆದ ಆಗಸ್ಟ್ ಗೆ ಹೋಲಿಸಿದರೆ ಶೇಕಡಾ 5ರಷ್ಟು ಹೆಚ್ಚು ಮಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತರ ನಾಯಕರ ಪ್ರಭಾವ
ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾನಿಯಂಥ ನಾಯಕರು ಮತ ಧ್ರುವೀಕರಣದ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುವವರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆಯಾ ಸಮುದಾಯದ ಮತದಾರರ ಮೇಲೆ ಈ ನಾಯಕರ ಪ್ರಬಾವ ಇರುವುದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!