ಗುಜರಾತ್ ಗಲಭೆ: ಸಾಕ್ಷ್ಯಾಧಾರದ ಕೊರತೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ 26 ಆರೋಪಿಗಳ ಖುಲಾಸೆ
ಅಹಮದಾಬಾದ್, ಏಪ್ರಿಲ್.02: 2002ರ ಕೋಮುಗಲಭೆಯಲ್ಲಿ ಕಲೋಲ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಹನ್ನೆರಡಕ್ಕೂ ಹೆಚ್ಚು ಸದಸ್ಯರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿಗಳನ್ನು ಗುಜರಾತ್‌ನ ನ್ಯಾಯಾಲಯವು ಖುಲಾಸೆ ಮಾಡಿದೆ.
20 ವರ್ಷಗಳ ಹಿಂದಿನ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯಿದೆ ಎಂದಿರುವ ನ್ಯಾಯಾಲಯ ಎಲ್ಲರನ್ನೂ ಖುಲಾಸೆಗೊಳಿಸಿದೆ. ಒಟ್ಟು 39 ಆರೋಪಿಗಳ ಪೈಕಿ 13 ಮಂದಿ ಪ್ರಕರಣದ ಬಾಕಿ ಇರುವಾಗಲೇ ಸಾವನ್ನಪ್ಪಿದ್ದು, ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಾಗಿದೆ. ಉಳಿದ 26 ಮಮದಿಯನ್ನು ಪ್ರಕರಣಗಳಿಮದ ಬಿಡುಗಡೆ ಮಾಡಲಾಗಿದೆ.

ಪಂಚಮಹಲ್ ಜಿಲ್ಲೆಯ ಹಲೋಲ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಲೀಲಾಭಾಯಿ ಚುಡಾಸಮಾ ಅವರು ಶುಕ್ರವಾರ 26 ಜನರನ್ನು ಕೊಲೆ, ಸಾಮೂಹಿಕ ಅತ್ಯಾಚಾರ ಅಪರಾಧಕ್ಕಾಗಿ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆ ಖುಲಾಸೆಗೊಳಿಸಿದ್ದಾರೆ. ''ಪ್ರಕರಣದ ಒಟ್ಟು 39 ಆರೋಪಿಗಳಲ್ಲಿ 13 ಮಂದಿ ವಿಚಾರಣೆಯ ಬಾಕಿ ಇರುವಾಗಲೇ ಮೃತಪಟ್ಟಿದ್ದಾರೆ'' ಎಂದು ಶುಕ್ರವಾರ ನೀಡಿದ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ಆರೋಪಿಗಳು ಫೆಬ್ರವರಿ 27 ರಂದು ಗೋಧ್ರಾದಲ್ಲಿ ಸಾಬರಮತಿ ರೈಲು ದಹನ ಘಟನೆಯ ನಂತರ ನೀಡಲಾದ ಬಂದ್ ಕರೆಯ ಸಂದರ್ಭದಲ್ಲಿ ಮಾರ್ಚ್ 1, 2002 ರಂದು ಭುಗಿಲೆದ್ದ ಕೋಮು ಗಲಭೆಯಲ್ಲಿ ಆಕ್ರೋಶಗೊಂಡ ಗುಂಪಿನ ಭಾಗವಾಗಿದ್ದರು. ಆರೋಪಿಗಳ ವಿರುದ್ಧ ಅದೇ ವರ್ಷ ಮಾರ್ಚ್ 2 ರಂದು ಕಲೋಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಪ್ರಾಸಿಕ್ಯೂಷನ್ ತನ್ನ ವಾದವನ್ನು ಬೆಂಬಲಿಸಲು 190 ಸಾಕ್ಷಿಗಳನ್ನು ಮತ್ತು 334 ಸಾಕ್ಷ್ಯಚಿತ್ರ ಸಾಕ್ಷ್ಯಗಳನ್ನು ಪರಿಶೀಲಿಸಿತು, ಆದರೆ ನ್ಯಾಯಾಲಯವು ಸಾಕ್ಷಿಗಳ ಖಾತೆಗಳಲ್ಲಿ ವಿರೋಧಾಭಾಸಗಳಿವೆ ಎಂದು ಹೇಳಿದೆ. ಜೊತೆಗೆ ಪ್ರಾಸಿಕ್ಯೂಷನ್ ವಾದವನ್ನು ಬೆಂಬಲಿಸಲಿಲ್ಲ ಹೀಗಾಗಿ 20 ವರ್ಷಗಳ ಹಿಂದಿನ ಪ್ರಕರಣದಲ್ಲಿ ಆರೋಪಿಗಳಾಗಿದ್ದ 26 ಮಂದಿಯನ್ನು ಬಿಡುಗಡೆ ಮಾಡಿದೆ.

ಮಾರ್ಚ್ 1, 2002 ರಂದು, ಗಾಂಧಿನಗರ ಜಿಲ್ಲೆಯ ಕಲೋಲ್ ನಗರದಲ್ಲಿ ಎರಡು ಸಮುದಾಯಗಳ 2,000 ಕ್ಕೂ ಹೆಚ್ಚು ಜನರ ಗುಂಪು ಹರಿತವಾದ ಆಯುಧಗಳು ಮತ್ತು ಬೆಂಕಿಯನ್ನು ಹಿಡಿದು ತೀವ್ರ ಘರ್ಷಣೆ ನಡೆಸಿತ್ತು. ಈ ವೇಳೆ ಅಂಗಡಿಗಳಿಗೆ ಹಾನಿ ಮಾಡಿ ಬೆಂಕಿ ಹಚ್ಚಿದರು. ಪೊಲೀಸರ ಗುಂಡಿನ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಟೆಂಪೋ ಸಹಿತ ಸಜೀವ ದಹನಗೊಂಡಿದ್ದರು.
ಒಂದು ಗುಂಪೊಂದು ಮಸೀದಿಯಿಂದ ಹೊರಗೆ ಬರುತ್ತಿದ್ದ ಮತ್ತೊಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿ ಕೊಂದು ಆತನ ದೇಹವನ್ನು ಮಸೀದಿಯೊಳಗೆ ಸುಟ್ಟು ಹಾಕಿತ್ತು. ಮತ್ತೊಂದು ಘಟನೆಯಲ್ಲಿ, ಡೆಲೋಲ್ ಗ್ರಾಮದಿಂದ ಓಡಿಹೋಗಿ ಕಲೋಲ್ ಕಡೆಗೆ ಬರುತ್ತಿದ್ದ 38 ಜನರ ಮೇಲೆ ದಾಳಿ ನಡೆಸಲಾಯಿತು. ಅವರಲ್ಲಿ 11 ಜನರನ್ನು ಸಜೀವ ದಹನಗೊಳಿಸಲಾಯಿತು.
ಕಲೋಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ ಮಹಿಳೆ ಮತ್ತು ಇತರರು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಆದರೆ, ಇಪ್ಪತ್ತು ವರ್ಷಗಳ ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ.
ಇತ್ತ 2002ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಸದಸ್ಯರ ಹತ್ಯೆಯನ್ನು "ಭಯಾನಕ" ಕೃತ್ಯವೆಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ. 11 ಜೀವಾವಧಿ ಕೈದಿಗಳ ಅಕಾಲಿಕ ಬಿಡುಗಡೆ ಮಾಡಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೊ ಅವರು ಕಳೆದ ವರ್ಷ ನವೆಂಬರ್ 30 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಆಗಸ್ಟ್ 15 ರಂದು ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಜನರು ಗೋಧ್ರಾ ಉಪ-ಜೈಲಿನಿಂದ ಬಿಡುಗಡೆಯಾಗಿದ್ದರು.
ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇತರ ಕೊಲೆ ಪ್ರಕರಣಗಳಲ್ಲಿ ಅನುಸರಿಸಿದಂತೆ ಏಕರೂಪದ ಮಾನದಂಡಗಳನ್ನು ಬಿಲ್ಕಿಸ್ ಪ್ರಕರಣದಲ್ಲಿ 11 ಅಪರಾಧಿಗಳಿಗೆ ವಿನಾಯಿತಿ ನೀಡುವಾಗ ಅನ್ವಯಿಸಲಾಗಿದೆಯೇ ಎಂದು ಗುಜರಾತ್ ಸರ್ಕಾರವನ್ನು ಪ್ರಶ್ನಿಸಿದೆ. ಮುಂದಿನ ವಿಚಾರಣೆಯ ದಿನಾಂಕವಾದ ಏಪ್ರಿಲ್ 18 ರಂದು ಎಲ್ಲಾ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸುವಂತೆ ಗುಜರಾತ್ ಸರ್ಕಾರಕ್ಕೆ ಸೂಚಿಸಿದೆ.












Click it and Unblock the Notifications