ಪ್ರಧಾನಿ ಮೋದಿ ತಾಯಿಗೆ ನಿಂದಿಸಿದ ಎಎಪಿಗೆ ಗುಜರಾತಿಗಳಿಂದ ತಕ್ಕ ಪಾಠ: ಸ್ಮೃತಿ ಇರಾನಿ
ನವದೆಹಲಿ, ಅ.14: ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಗೊಳ್ಳಲಿದ್ದು, ಬಿಜೆಪಿ ಹಾಗೂ ಎಎಪಿ ಪಕ್ಷಗಳ ನಡುವಿನ ಸಮರ ತಾರಕಕ್ಕೆ ಏರಿದೆ. ಎಎಪಿಯ ಗುಜರಾತ್ ರಾಜ್ಯ ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಬಂಧನವಾದ ಬೆನ್ನಲ್ಲೇ ಎಎಪಿ ಹಾಗೂ ಬಿಜೆಪಿ ನಾಯಕರು ವಾಕ್ಸಮರದಲ್ಲಿ ತೊಡಗಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅವರ ತಾಯಿ ಕುರಿತು ಇಟಾಲಿಯಾ ಕೀಳು ಭಾಷೆಯಲ್ಲಿ ಮಾತನಾಡಿರುವ ವಿಡಿಯೊ ದೇಶದಾದ್ಯಂತ ಸದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ, ಇಟಾಲಿಯಾ ಅವರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಟಾಲಿಯಾ, ನಾನು ಪಾಟೀದಾರ ಸಮುದಾಯದಿಂದ ಬಂದಿದ್ದೇನೆ. ನನ್ನ ವಿರುದ್ಧ ಬಿಜೆಪಿ ಪಿತೂರಿ ನಡೆಸಿದೆ. ಪಾಟೀದಾರರನ್ನು ಬಿಜೆಪಿ ದ್ವೇಷಿಸುತ್ತಿದೆ ಎಂದು ಹೇಳಿದ್ದಾರೆ.
ಮೋದಿ ಹಾಗೂ ಅವರ ತಾಯಿ ವಿರುದ್ಧ ಇಟಾಲಿಯಾ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, 'ಪ್ರಧಾನಿ ತಾಯಿಯನ್ನು ನಿಂದಿಸುವುದರಿಂದ ಗುಜರಾತ್‌ನಲ್ಲಿ ಲಾಭವಾಗಬಹುದೆಂದು ನೀವು(ಎಎಪಿ ನಾಯಕರು) ಭಾವಿಸಿರಬಹುದು. ಆದರೆ, ನೀವು ಭಾವಿಸಿರುವುದು ಶುದ್ಧ ತಪ್ಪು. ಈ ತಪ್ಪಿಗೆ ಗುಜರಾತಿಗಳು ಮುಂಬರುವ ಚುನಾವಣೆಯಲ್ಲಿ ನಿಮಗೆ ಪಾಠ ಕಲಿಸಲಿದ್ದಾರೆ' ಎಂದು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಸೂಚನೆ ಮೇರೆಗೆ ಇಟಾಲಿಯಾ ಮಾತನಾಡಿದ್ದಾರೆ. ಗುಜರಾತ್‌ನಲ್ಲಿ ಎಎಪಿ ನಾಯಕರು ಇಂತಹ ಹಲವಾರು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಹಿಂದೂ ಸಮಾಜ ಹಾಗೂ ಮಹಿಳೆಯರಿಗೆ ಅವಮಾನವಾಗಿದೆ ಎಂದು ತಿಳಿಸಿದ್ದಾರೆ.
ರಾಜಕಾರಣದ ಜೊತೆ ಯಾವುದೇ ಸಂಬಂಧವಿಲ್ಲದ 100 ವರ್ಷದ ಮಹಿಳೆಯನ್ನು ನಿಂದಿಸುವ ಕಾರ್ಯದಲ್ಲಿ ಎಎಪಿ ನಾಯಕರು ತೊಡಗಿದರೆ ಅದು ಸಂಪೂರ್ಣ ಅಕ್ಷಮ್ಯವೆಂದು ಇರಾನಿ ಹೇಳಿದ್ದಾರೆ.
'ನಿಮ್ಮ (ಕೇಜ್ರಿವಾಲ್) ರಾಜಕೀಯ ಕುತಂತ್ರಗಳನ್ನು ಸದೆಬಡೆಯುವ ಸಲುವಾಗಿಯೇ ಆ ತಾಯಿ ಪ್ರಧಾನಿ ಮೋದಿಯವರಿಗೆ ಜನ್ಮ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.

'ಕೇಜ್ರಿವಾಲ್ ಅವರು ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂಬುದು ನನಗೆ ಅಚ್ಚರಿ ಮೂಡಿಸಿಲ್ಲ. ತಾಯಂದಿರ ಬಗ್ಗೆ ಗುಜರಾತಿಗಳಿಗಿರುವ ಗೌರವವನ್ನು ಕೇಜ್ರಿವಾಲ್ ಅರ್ಥಮಾಡಿಕೊಳ್ಳುವುದಿಲ್ಲ' ಎಂದು ಇರಾನಿ ಹೇಳಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೇಜ್ರಿವಾಲ್‌ಗೆ ಗುಜರಾತಿಗಳು ತಕ್ಕ ಪಾಠ ಕಲಿಸಲಿದ್ದಾರೆ. ಎಎಪಿ ಬೆಲೆ ತೆರಲಿದೆ ಎಂದು ತಿಳಿಸಿದ್ದಾರೆ.
ಇಟಾಲಿಯ ಬಂಧನವು ಗುಜರಾತ್‌ನ ಪಾಟೀದಾರ ಸಮುದಾಯವನ್ನು ಕೆರಳಿಸಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟ
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಶುಕ್ರವಾರ ದಿನಾಂಕ ಪ್ರಕಟವಾಗಲಿದೆ. ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿಬಂದಿದೆ. ಈಗಾಗಲೇ ಗುಜರಾತ್‌ಗೆ ಹಲವು ಬಾರಿ ಭೇಟಿ ನೀಡಿರುವ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ವ್ಯಾಪಕ ಪ್ರಚಾರ ಮಾಡಿದ್ದಾರೆ. ಪ್ರಧಾನಿ ಮೋದಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನ ಗುಜರಾತ್ ಘಟಕದ ನಾಯಕರು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮತ ಕೇಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಿಂದುತ್ವದ ಪ್ರಾಯೋಗಿಕ ಶಾಲೆಯಂತಿರುವ ಗುಜರಾತ್‌ನಲ್ಲಿ ಕಳೆದ 27 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಆಡಳಿತಾರೂಢ ಪಕ್ಷವು ಮತ್ತೆ ಅಧಿಕಾರದ ಗದ್ದುಗೆಯನ್ನು ಏರುವ ಆಕಾಂಕ್ಷೆ ಹೊಂದಿದೆ. ಕಾಂಗ್ರೆಸ್ ಪಕ್ಷದ ಬೇರುಗಳು ಗುಜರಾತ್‌ನ ಹಳ್ಳಿಗಳಲ್ಲಿ ಗಟ್ಟಿಯಾಗಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಒಟ್ಟಿನಲ್ಲಿ, ಗುಜರಾತ್ ಗದ್ದುಗೆ ಯಾವ ಪಕ್ಷಕ್ಕೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications