Voter ID: ಜಮ್ಮುವಿನಲ್ಲಿ ಒಂದು ವರ್ಷ ವಾಸವಿದ್ರೆ ಸಿಗುತ್ತೆ ವೋಟರ್ ಐಡಿ
ಶ್ರೀನಗರ್, ಅಕ್ಟೋಬರ್ 12: ಜಮ್ಮುವಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿ ವಾಸವಾಗಿರುವ ಪ್ರಜೆಗಳಿಗೆ ವಾಸಸ್ಥಳದ ಪ್ರಮಾಣಪತ್ರವನ್ನು ನೀಡುವಂತೆ ಎಲ್ಲಾ ಕಂದಾಯ ಅಧಿಕಾರಿಗಳು ಅಥವಾ ತಹಸೀಲ್ದಾರ್‌ಗಳಿಗೆ ಡೆಪ್ಯೂಟಿ ಕಮಿಷನರ್ ಮಂಗಳವಾರ ಆದೇಶಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಾರಾಂಶ ಪರಿಷ್ಕರಣೆಯಲ್ಲಿ ಯಾವುದೇ ಅರ್ಹ ಮತದಾರರನ್ನು ನೋಂದಣಿಯಿಂದ ಕೈ ಬಿಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕಳೆದ 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಚುನಾವಣಾ ನೀತಿಯಲ್ಲಿ ಪರಿಷ್ಕರಣೆ ಮಾಡಲಾಗುತ್ತಿದೆ.
ಈ ಆದೇಶದ ಪ್ರಕಾರ, ಆಧಾರ್ ಕಾರ್ಡ್, ನೀರಿನ ಬಿಲ್, ವಿದ್ಯುತ್ ಬಿಲ್, ಗ್ಯಾಸ್ ಸಂಪರ್ಕ, ಬ್ಯಾಂಕ್ ಪಾಸ್‌ಬುಕ್, ಪಾಸ್‌ಪೋರ್ಟ್, ನೋಂದಾಯಿತ ಭೂ ದಾಖಲೆಗಳು ಇತ್ಯಾದಿ ಯಾವುದೇ ದಾಖಲೆಗಳನ್ನು ನಿವಾಸದ ಪುರಾವೆಯಾಗಿ ಬಳಸಬಹುದು.

ವೋಟರ್ ಐಡಿ ತಿದ್ದುಪಡಿ ಆದೇಶದಲ್ಲಿ ಏನಿದೆ?
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಬಾರಿ ನಡೆದಿರುವ ಪರಿಷ್ಕರಣೆ ನಂತರದಲ್ಲಿ ವಲಸೆ ಬಂದಿರುವ ಅಥವಾ ಮರಣ ಹೊಂದಿದ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವುದು, ಹೆಸರಿನ ತಿದ್ದುಪಡಿ ಮಾಡುವುದು, ವಾಸಸ್ಥಳದ ಮಾಹಿತಿ ತಿದ್ದುಪಡಿ ಮಾಡುವುದು ಸೇರಿದಂತೆ ಹೊಸ ಮತದಾರರ ನೋಂದಣಿಯ ಬಗ್ಗೆ ಈ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಪಕ್ಷಗಳಿಂದ ಸರ್ಕಾರದ ನಡೆಗೆ ತೀವ್ರ ವಿರೋಧ
ವಾಸಸ್ಥಳ ಪ್ರಮಾಣಪತ್ರ ಅಥವಾ ಮತದಾರರ ಗುರುತಿನ ಚೀಟಿಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ತೆಗೆದುಕೊಂಡಿರುವ ಕ್ರಮಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ. ಸರ್ಕಾರದ ಆದೇಶಕ್ಕೆ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (JKNC)ನ ಅಧಿಕೃತ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದೆ. ಬಿಜೆಪಿಯು ಚುನಾವಣೆಗಳ ಭಯದಲ್ಲಿದ್ದು, ಕೆಟ್ಟದಾಗಿ ಸೋಲುವುದನ್ನು ತಡೆಯಲು ಈ ರೀತಿ ಮಾಡುತ್ತಿದೆ. ಸರ್ಕಾರದ ಕ್ರಮವನ್ನು ತಮ್ಮ ಪಕ್ಷವು ವಿರೋಧಿಸುತ್ತದೆ ಎಂದು ಬರೆದಿದೆ.

25 ಲಕ್ಷ ಮಂದಿ ಹೆಚ್ಚುವರಿ ಮತದಾರರ ಸೇರ್ಪಡೆ
ಮತದಾರ ಪಟ್ಟಿಯ ಪರಿಷ್ಕರಣೆ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿಯಾಗಿ 25 ಲಕ್ಷಕ್ಕೂ ಹೆಚ್ಚು ಮತದಾರರು ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಆಗಸ್ಟ್‌ನಲ್ಲಿ ಆಗಿನ ಮುಖ್ಯ ಚುನಾವಣಾ ಅಧಿಕಾರಿ ಹಿರ್ದೇಶ್ ಕುಮಾರ್ ಹೇಳಿದ್ದರು. ಬಿಜೆಪಿ ಹೊರತುಪಡಿಸಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಸ್ಥಳೀಯರಲ್ಲದ ಜನರಿಗೆ ಮತದಾನದ ಹಕ್ಕನ್ನು ನೀಡುವುದಕ್ಕೆ ಮತದಾರರ ಪಟ್ಟಿಗೆ ಸೇರಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು.

ಜಮ್ಮುವಿನಲ್ಲಿ ಅಕ್ಟೋಬರ್ 1ರಿಂದ ಹೊಸ ಲೆಕ್ಕ!
"ಈ ಮತದಾರ ಪಟ್ಟಿಯ ಪರಿಷ್ಕರಣೆಯು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಅಸ್ತಿತ್ವದಲ್ಲಿರುವ ನಿವಾಸಿಗಳನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಅಕ್ಟೋಬರ್ 1, 2022ರ ಹೊತ್ತಿಗೆ ಅಥವಾ ಅದಕ್ಕಿಂತ ಮೊದಲು 18 ವರ್ಷ ವಯಸ್ಸು ದಾಟಿದ ಯುವಕ-ಯುವತಿಯರಿಗೆ ಮತದಾರರ ಗುರುತಿನ ಚೀಟಿಯನ್ನು ನೀಡಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications