ನರೇಂದ್ರ ಮೋದಿ ಒಂದು ಕರೆ, ಯುವ ಸಮುದಾಯದ ಅದ್ಭುತ ಪ್ರತಿಕ್ರಿಯೆ
ನವದೆಹಲಿ, ಆಗಸ್ಟ್ 25: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ 'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮ ಸರಣಿಯ 113ನೇ ಸಂಚಿಕೆಯ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆಗ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ ಮೇಲಿನಿಂದ ಮಾಡಿದ ಭಾಷಣವನ್ನು ನೆನಪು ಮಾಡಿಕೊಂಡರು. ಮೋದಿಗೆ ಕರೆಗೆ ಯುವ ಸಮುದಾಯ ನೀಡುತ್ತಿರುವ ಪ್ರತಿಕ್ರಿಯೆ ಕುರಿತು ಮಾಹಿತಿ ಹಂಚಿಕೊಂಡರು.
ನರೇಂದ್ರ ಮೋದಿ, 'ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ...ಮತ್ತೊಮ್ಮೆ, ಮನದ ಮಾತಿಗೆ ನನ್ನ ಕುಟುಂಬದ ಎಲ್ಲಾ ಸದಸ್ಯರಿಗೆ ಸ್ವಾಗತ. ಇಂದು ಮತ್ತೊಮ್ಮೆ ನಾವು ದೇಶದ ಸಾಧನೆಗಳು ಮತ್ತು ದೇಶದ ಜನತೆಯ ಸಾಮೂಹಿಕ ಪ್ರಯತ್ನಗಳ ಬಗ್ಗೆ ಮಾತನಾಡಲಿದ್ದೇವೆ. 21ನೇ ಶತಮಾನದ ಭಾರತದಲ್ಲಿ ವಿಕಸಿತ ಭಾರತದ ಅಡಿಪಾಯವನ್ನು ಬಲಪಡಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ' ಎಂದು ಹೇಳಿದರು.

ಮೋದಿ ತಮ್ಮ ಭಾಷಣದಲ್ಲಿ, 'ಆಗಸ್ಟ್ 23ರಂದು ನಾವೆಲ್ಲರೂ ಪ್ರಥಮ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿದೆವು. ಮತ್ತೊಮ್ಮೆ ಚಂದ್ರಯಾನ-3ರ ಯಶಸ್ಸನ್ನು ಆಚರಿಸಿರಬಹುದು. ಕಳೆದ ವರ್ಷ, ಇದೇ ದಿನದಂದು, ಚಂದ್ರಯಾನ-3 ಚಂದ್ರನ ದಕ್ಷಿಣ ಭಾಗದಲ್ಲಿರುವ ಶಿವ-ಶಕ್ತಿ ಪಾಯಿಂಟ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತ್ತು. ಭಾರತ ಈ ಅಮೋಘ ಸಾಧನೆ ಮಾಡಿದ ವಿಶ್ವದ ಮೊದಲ ದೇಶವಾಯಿತು' ಎಂದು ಬಣ್ಣಿಸಿದರು.
ಯುವಕರು ರಾಜಕೀಯಕ್ಕೆ ಬರಬೇಕು: ಬಳಿಕ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣ ನೆನಪಿಕೊಂಡರು. 'ನನ್ನ ಪ್ರೀತಿಯ ದೇಶವಾಸಿಗಳೇ, ನಾನು ಈ ಬಾರಿ ಕೆಂಪು ಕೋಟೆಯಿಂದ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ 1 ಲಕ್ಷ ಯುವಜನರಿಗೆ ರಾಜಕೀಯ ವ್ಯವಸ್ಥೆಯೊಂದಿಗೆ ತೊಡಗಿಕೊಳ್ಳಬೇಕೆಂದು ಕರೆ ನೀಡಿದೆ. ನನ್ನ ಈ ಮಾತಿಗೆ ಅದ್ಭುತ ಪ್ರತಿಕ್ರಿಯೆ ದೊರೆಯಿತು. ಭಾರೀ ಸಂಖ್ಯೆಯ ನಮ್ಮ ಯುವಜನತೆ ರಾಜಕೀಯಕ್ಕೆ ಬರಲು ಸಿದ್ಧರಾಗಿದ್ದಾರೆಂದು ಇದರಿಂದ ತಿಳಿದುಬರುತ್ತದೆ. ಅವರು ಸರಿಯಾದ ಅವಕಾಶ ಮತ್ತು ಸರಿಯಾದ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದಾರೆ' ಎಂದರು.
'ಈ ಕುರಿತು ನನಗೆ ದೇಶಾದ್ಯಂತ ಯುವಜನರಿಂದ ಪತ್ರಗಳು ಕೂಡಾ ಬಂದಿವೆ. ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಸಾಕಷ್ಟು ಪ್ರತಿಕ್ರಿಯೆಗಳು ದೊರೆಯುತ್ತಿವೆ. ಜನರು ನನಗೆ ಹಲವು ರೀತಿಯ ಸಲಹೆಗಳನ್ನು ಕೂಡಾ ನೀಡಿದ್ದಾರೆ. ಇದು ನಿಜಕ್ಕೂ ತಮ್ಮ ಊಹೆಗೂ ನಿಲುಕದ ಸಂಗತಿ ಎಂದು ಕೆಲವು ಯುವಕರು ಪತ್ರ ಬರೆದಿದ್ದಾರೆ. ಅಜ್ಜ ಅಥವಾ ತಾಯಿ-ತಂದೆಯ ಯಾವುದೇ ರಾಜಕೀಯ ಪರಂಪರೆ ಇಲ್ಲದ ಕಾರಣದಿಂದಾಗಿ, ರಾಜಕೀಯಕ್ಕೆ ಬರಲು ಇಚ್ಛೆಯಿದ್ದರೂ ಬರಲು ಸಾಧ್ಯವಾಗುತ್ತಿಲ್ಲವೆಂದು ಬರೆದಿದ್ದಾರೆ' ಎಂದು ಮೋದಿ ಹೇಳಿದರು.
'ತಳಮಟ್ಟದಲ್ಲಿ ಕೆಲಸ ಮಾಡುವ ಉತ್ತಮ ಅನುಭವ ಇರುವುದಾಗಿ, ಆದ್ದರಿಂದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾವು ಸಹಾಯ ಮಾಡಬಹುದೆಂದು ಕೆಲವು ಯುವಕರು ಬರೆದಿದ್ದಾರೆ. ಕುಟುಂಬ ರಾಜಕೀಯವು ಹೊಸ ಪ್ರತಿಭೆಗಳನ್ನು ಬೆಳಕಿಗೆ ಬರದಂತೆ ತಡೆಯುತ್ತಿದೆ ಎಂದು ಕೂಡಾ ಕೆಲ ಯುವಜನರು ಬರೆದಿದ್ದಾರೆ. ಇಂತಹ ಪ್ರಯತ್ನಗಳು ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಕೆಲವರು ಹೇಳಿದ್ದಾರೆ. ಈ ವಿಷಯ ಕುರಿತಂತೆ ಸಲಹೆಗಳನ್ನು ಕಳುಹಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ಧನ್ಯವಾದಗಳು. ಈಗ ನಮ್ಮ ಸಾಮೂಹಿಕ ಪ್ರಯತ್ನದಿಂದ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಇಂತಹ ಯುವಕರು ಕೂಡ ರಾಜಕೀಯದಲ್ಲಿ ಮುಂದೆ ಬರುವಂತಾಗುತ್ತದೆ, ಅವರ ಅನುಭವ ಮತ್ತು ಅವರ ಉತ್ಸಾಹ ದೇಶಕ್ಕೆ ಉಪಯುಕ್ತವಾಗುತ್ತದೆ ಎಂಬ ಭರವಸೆ ನನಗಿದೆ' ಎಂದರು.
'ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೂಡಾ ರಾಜಕೀಯ ಹಿನ್ನೆಲೆಯಿಲ್ಲದ ಸಮಾಜದ ಎಲ್ಲಾ ವರ್ಗದ ಜನರು ಮುಂದೆ ಬಂದಿದ್ದರು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಇಂದು ನಮಗೆ ಮತ್ತೊಮ್ಮೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಅದೇ ಮನೋಭಾವದ ಅಗತ್ಯವಿದೆ. ನನ್ನ ಎಲ್ಲಾ ಯುವ ಸ್ನೇಹಿತರಿಗೆ ಖಂಡಿತವಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ. ನಿಮ್ಮ ಈ ಹೆಜ್ಜೆ ನಿಮ್ಮ ಮತ್ತು ದೇಶದ ಭವಿಷ್ಯವನ್ನು ಬದಲಾಯಿಸುತ್ತದೆ' ಎಂದು ನರೇಂದ್ರ ಮೋದಿ ಹೇಳಿದರು.












Click it and Unblock the Notifications