ಬಾಂಬೆ ಹೈಕೋರ್ಟ್ ನಿಂದ ಮ್ಯಾಗಿ ನಿಷೇಧ ತೆರವು
ಮುಂಬೈ, ಆಗಸ್ಟ್. 13: ಮ್ಯಾಗಿ ಪ್ರಿಯರಿಗೊಂದು ಶುಭ ಸುದ್ದಿಯಿದೆ. ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಮ್ಯಾಗಿ ಮೇಲೆ ಹೇರಿದ್ದ ನಿಷೇಧವನ್ನು ಬಾಂಬೆ ಹೈಕೋರ್ಟ್ ಗುರುವಾರ ತೆರವು ಮಾಡಿದೆ.
ಆದರೆ ಕೆಲ ಷರತ್ತುಗಳನ್ನು ವಿಧಿಸಿದೆ. ಮ್ಯಾಗಿ ನೂಡಲ್ಸ್ ನ್ನು ಹೊಸದಾಗಿ ಪರೀಕ್ಷೆ ನಡೆಸಬೇಕು ಎಂದು ಆದೇಶ ಹೊರಡಿಸಿದೆ. ಮ್ಯಾಗಿ ನೂಡಲ್ಸ್ ನ ಒಟ್ಟು 5 ಮಾದರಿಗಳ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿ ಆರು ವಾರಗಳ ಗಡುವು ನೀಡಿದೆ.[ಸರ್ಕಾರದ ಗದಾ ಪ್ರಹಾರಕ್ಕೆ ತತ್ತರಿಸಿದ ನೆಸ್ಲೆ ಕಂಪನಿ]

ವರದಿ ಬರುವವರೆಗೆ ಮಾರಾಟವಿಲ್ಲ:
ಪ್ರಯೋಗಾಲಯದ ವರದಿ ಬರುವವರೆಗೆ ಮ್ಯಾಗಿ ಮಾರಾಟ, ಉತ್ಪಾದನೆಗೆ ನಿರ್ಬಂಧ ಹೇರಲಾಗಿದೆ. ಮ್ಯಾಗಿಯಲ್ಲಿ ಅಪಾಯಕಾರಿ ಅಂಶಗಳಿವೆ ಎಂದು ನಿಷೇಧ ಹೇರಿದ್ದ ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಎಐ)ದ ಆದೇಶದ ವಿರುದ್ಧ ನೆಸ್ಲೆ ಇಂಡಿಯಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. [ನಿಮ್ಮ ಮನೆಯಲ್ಲಿ ಮತ್ತೆ ಎರಡು ನಿಮಿಷಕ್ಕೆ ಅಡುಗೆ ಸಿದ್ಧ!]
ಮ್ಯಾಗಿ ನೂಡಲ್ಸ್ ನ್ನು ಪರೀಕ್ಷೆ ಮಾಡಿರುವ ಕೇಂದ್ರ ಆಹಾರ ತಾಂತ್ರಿಕ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಮ್ಯಾಗಿಯಲ್ಲಿ ಹಾನಿಕಾರಕ ಅಂಶಗಳು ಇಲ್ಲ ಎಂದು ವರದಿ ನೀಡಿತ್ತು.
ಮ್ಯಾಗಿ ಮೇಲೆ ನಿಷೇಧ ಹೇರಿಕೆ, ತೆರವುಗಳು ಭಾರತದ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಉಂಟುಮಾಡಿದ್ದವು. ನೆಸ್ಲೆ ಕಂಪನಿ ವಿರುದ್ಧ ಸುಳ್ಳು ಜಾಹೀರಾತು, ಗ್ರಾಹಕರಿಗೆ ಮೋಸ ಮಾಡಿದ ಆರೋಪ ಹೊರೆಸಿ 640 ಕೋಟಿ ರೂ.ಗಳ ಪರಿಹಾರ ನೀಡುವಂತೆ ದೆಹಲಿಯ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲಿ ಮಂಗಳವಾರ ದಾವೆ ಹೂಡಲಾಗಿದೆ.












Click it and Unblock the Notifications