ಎರಡೂವರೆ ತಿಂಗಳ ನಂತರ ಉತ್ತರಾಖಂಡದ ಜೋಶಿಮಠದಲ್ಲಿ ಮತ್ತೆ ಹಿಮಸ್ಫೋಟ
ಡೆಹ್ರಾಡೂನ್, ಏಪ್ರಿಲ್ 23: ಈಚೆಗಷ್ಟೆ ಹಿಮಸ್ಫೋಟ ಸಂಭವಿಸಿ ಅನಾಹುತಕ್ಕೆ ತುತ್ತಾಗಿದ್ದ ಉತ್ತರಾಖಂಡದಲ್ಲಿ ಶುಕ್ರವಾರ ಮತ್ತೆ ಹಿಮಸ್ಫೋಟ ಸಂಭವಿಸಿದ ವರದಿಯಾಗಿದೆ.
ಭಾರತ-ಚೀನಾ ಗಡಿ ಸಮೀಪ ಉತ್ತರಾಖಂಡದ ಜೋಶಿಮಠದಲ್ಲಿ ಹಿಮಸ್ಫೋಟ ಸಂಭವಿಸಿರುವುದಾಗಿ ಗಡಿ ಕಾರ್ಯಪಡೆಯ ಕರ್ನಲ್ ಮನೀಶ್ ಕಪಿಲ್ ಮಾಹಿತಿ ನೀಡಿದ್ದಾರೆ. ವರದಿಯ ಪ್ರಕಾರ, ಹಿಮಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಜನವಸತಿ ಇರಲಿಲ್ಲ. ಐಟಿಬಿಪಿ ಹಾಗೂ ಬಿಆರ್‌ಒ ಸಿಬ್ಬಂದಿ ಮಾತ್ರ ಆ ಪ್ರದೇಶದಲ್ಲಿದ್ದರು. ಘಟನೆ ನಡೆದ ಸ್ಥಳಕ್ಕೆ ಗಡಿ ಪಡೆ ಸಿಬ್ಬಂದಿ ತೆರಳಲಿರುವುದಾಗಿ ತಿಳಿದುಬಂದಿದೆ.
ಇದೇ ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ ಪ್ರದೇಶದಲ್ಲಿ ಭಾರೀ ಹಿಮಸ್ಫೋಟ ಸಂಭವಿಸಿತ್ತು. ದುರ್ಘಟನೆಯಲ್ಲಿ 206 ಮಂದಿ ನಾಪತ್ತೆಯಾಗಿದ್ದು, ಅದರಲ್ಲಿ 70 ಮಂದಿಯ ಮೃತದೇಹಗಳು ಪತ್ತೆಯಾಗಿದ್ದವು. 29 ಜನರಿಗೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದು, ಉಳಿದಂತೆ 136 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿತ್ತು.

ಇದೀಗ ಎರಡೂವರೆ ತಿಂಗಳ ನಂತರ ಶುಕ್ರವಾರ ಸಂಜೆ ಮತ್ತೆ ಹಿಮಸ್ಫೋಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಆದರೆ ಹಿಮಸ್ಫೋಟಕ್ಕೆ ಕಾರಣವೇನು, ಸ್ಫೋಟದಿಂದಾಗಿ ಸಂಭವಿಸಿರುವ ಹಾನಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.












Click it and Unblock the Notifications