ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಮಣೆ ಹಾಕಿದ ಶಿವಸೇನೆ, ವಿರೋಧ ನಂತರ ಮಾಡಿದ್ದೇನು ?
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಇನ್ನು ಒಂದೇ ತಿಂಗಳು ಬಾಕಿ ಉಳಿದಿದೆ. ಎಲ್ಲಾ ರಾಜಕೀಯ ಪಕ್ಷಗಳೂ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ ಕರ್ನಾಟಕದ ಸಾಮಾಜಿಕ ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮಹಾರಾಷ್ಟ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣವಾಗಿರುವುದು ಶಿವಸೇನೆ (ಏಕನಾಥ್ ಶಿಂಧೆ ಬಣ)ಯ ಒಂದು ನಿರ್ಧಾರ. ಅದೇನು ವಿರೋಧದ ನಂತರ ಶಿವಸೇನೆ ಮಾಡಿದ್ದೇನು ಎನ್ನುವ ವಿವರ ಇಲ್ಲಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿರುವಾಗ ಅಲ್ಲಿನ ಆಡಳಿತರೂಢ ಪಕ್ಷ ಮಹಾ ಎಡವಟ್ಟೊಂದನ್ನು ಮಾಡಿ ಕೊಂಡಿದ್ದು. ಇದೀಗ ಎಚ್ಚೆತ್ತುಕೊಂಡಿದೆ. ಕರ್ನಾಟಕದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿನ ಆರೋಪಿ ಶ್ರೀಕಾಂತ್ ಪಾಂಗರ್ಕರ್ ಎನ್ನುವವ ಈಚೆಗೆ ಶಿವಸೇನೆ (ಏಕನಾಥ್ ಶಿಂಧೆ ಬಣ)ಕ್ಕೆ ಸೇರ್ಪಡೆಯಾಗಿದ್ದ. ಅವನಿಗೆ ಪಕ್ಷದಲ್ಲಿ ಉತ್ತಮ ಹುದ್ದೆಯನ್ನು ಸಹ ನೀಡಲಾಗಿತ್ತು. ಅದನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕ ಏಕನಾಥ್ ಶಿಂಧೆ ಅವರು ಸಾರ್ವಜನಿಕರ ಆಕ್ಷೇಪದ ನಂತರ ರದ್ದು ಮಾಡಿದ್ದಾರೆ.

ವಿರೋಧಕ್ಕೆ ಕಾರಣವಾಗಿದ್ದ ನೇಮಕಾತಿ: ಇನ್ನು ಪಕ್ಷಕ್ಕೆ ಪಾಂಗರ್ಕರ್ ಸೇರ್ಪಡೆ ಮಾಡಿದ್ದಕ್ಕೆ ವಿರೋಧ ಪಕ್ಷಗಳು ಸೇರಿದಂತೆ ಸಾರ್ವಜನಿಕ ಕ್ಷೇತ್ರದಿಂದ ವಿರೋಧ ವ್ಯಕ್ತವಾಗಿತ್ತು. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಕ್ಷಕ್ಕೆ ಪಾಂಗರ್ಕರ್ ಶನಿವಾರವಷ್ಟೇ ಸೇರ್ಪಡೆಯಾಗಿದ್ದ ಅವನಿಗೆ ಅಂದೇ ಪಕ್ಷದಲ್ಲಿ ಹುದ್ದೆಯನ್ನು ನೀಡಲಾಗಿತ್ತು. ಅವನನ್ನು ಮಹಾರಾಷ್ಟ್ರದ ಜಲ್ನಾ ವಿಧಾನಸಭಾ ಚುನಾವಣೆಯ ಪ್ರಚಾರ ಸಮಿತಿ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿತ್ತು.
ವಿರೋಧ ವ್ಯಕ್ತವಾಗದಿದ್ದರೆ ಟಿಕೆಟ್?
ಇನ್ನು ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಆಯಾ ಪಕ್ಷದ ಮಿತ್ರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಇಳಿದಿವೆ.
ಪಾಂಗರ್ಕರ್‌ಗೆ ಮಹಾರಾಷ್ಟ್ರದ ಜಲ್ನಾ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲು ಸಿದ್ಧತೆ ನಡೆದಿತ್ತು ಎಂದು ಹೇಳಲಾಗಿದೆ. ಆಡಳಿತರೂಢ ಪಕ್ಷಗಳಾಗಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಪವಾರ್ ಬಣ) ಇದೆ. ಈ ಪಕ್ಷಗಳ ಮೈತ್ರಿಯನ್ನು ಮಹಾಯುತಿ ಎನ್ನಲಾಗುತ್ತದೆ. ಈ ಪಕ್ಷಗಳ ನಡುವೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ವಿಷಯ ಇನ್ನಷ್ಟು ಇತ್ಯಾರ್ಥವಾಗಬೇಕಿದೆ. ಇದೇ ಕಾರಣಕ್ಕಾಗಿ ಶ್ರೀಕಾಂತ್ ಪಾಂಗರ್ಕರ್‌ಗೆ ಟಿಕೆಟ್ ಇನ್ನೂ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಈಚೆಗಿನ ವರ್ಷದಲ್ಲಿ ಶಿವಸೇನೆ ವಿಭಜನೆಯಾಗಿದೆ. ಒಂದು ಬಣ ವಿರೋಧ ಪಕ್ಷದಲ್ಲಿ ಇದ್ದರೆ, ಮತ್ತೊಂದು ಬಣ ಆಡಳಿತ ಪಕ್ಷದಲ್ಲಿ ಇದೆ. ಶ್ರೀಕಾಂತ್ ಪಾಂಗರ್ಕರ್ 2001ರಿಂದ 2006ರವೆಗೆ ಶಿವಸೇನೆಯಲ್ಲೇ ಗುರುತಿಸಿಕೊಂಡಿದ್ದ. ಮಹಾರಾಷ್ಟ್ರದ ಜಲ್ನಾ ಮುನ್ಸಿಪಲ್ ಕೌನ್ಸಿಲರ್ ಸಹ ಆಗಿದ್ದ. ಆದರೆ, 2011ರಲ್ಲಿ ಶಿವಸೇನೆ ಪಕ್ಷದಿಂದ ಟಿಕೆಟ್ ವಂಚಿತನಾಗಿ, ಹಿಂದೂ ಜನಜಾಗೃತಿ ಸಮಿತಿ ಸೇರಿದ್ದ ಎನ್ನಲಾಗಿದೆ.
ಇನ್ನು ಶ್ರೀಕಾಂತ್ ಪಾಂಗರ್ಕರ್ ನಾನು ಎಂದಿಗೂ ಪಕ್ಷವನ್ನು ಬಿಟ್ಟಿಲ್ಲ. ಶಿವಸೇನೆಯಲ್ಲಿ ಸೇವೆ ಮಾಡಿದ್ದೇನೆ. 2014ರಿಂದ ನನಗೆ ನೀಡಿರುವ ಎಲ್ಲಾ ಜವಾಬ್ದಾರಿಗಳನ್ನೂ ಸಹ ನಾನು ನಿಭಾಯಿಸಿದ್ದೇನೆ ಎಂದು ಆತ ಹೇಳಿರುವುದು ವರದಿಯಾಗಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ
ಇನ್ನು ಕರ್ನಾಟಕದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ಕ್ಕೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯ ಹೊರಗಡೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು 25 ಜನರನ್ನು ಬಂಧಿಸಿದ್ದರು. ಇನ್ನು ಈ ಪ್ರಕರಣದಲ್ಲಿ ಇಲ್ಲಿಯವರೆಗೆ 18 ಜನರಿಗೆ ಜಾಮೀನು ಸಿಕ್ಕಿದೆ. ಶ್ರೀಕಾಂತ್ ಪಾಂಗರ್ಕರ್‌ನನ್ನು 2018ರಲ್ಲಿ ಪೊಲೀಸರು ಬಂಧಿಸಿದ್ದರು. ಸೆ.4ರಂದು ಜಾಮೀನಿನ ಮೇಲೆ ಇತ ಬಿಡುಗಡೆಯಾಗಿದ್ದಾನೆ.












Click it and Unblock the Notifications