Get Updates
Get notified of breaking news, exclusive insights, and must-see stories!

ಗ್ಯಾಸ್ ಗೀಸರ್ ಬಳಕೆ ಅಪಾಯಕಾರಿ: ಬಳಸುವ ಮುನ್ನ ಸುರಕ್ಷಿತ ಕ್ರಮಗಳನ್ನು ಅನುಸರಿಸಿ

ಗ್ಯಾಸ್ ಗೀಸರ್ ಮನೆಯಲ್ಲಿ ನೀರು ಕಾಯಿಸಲು ಬಳಸುವವರು ಎಚ್ಚರ ವಹಿಸಬೇಕು. ಏಕೆಂದರೆ ಗೀಸರ್‌ನಿಂದ ಗ್ಯಾಸ್ ಸೋರಿಕೆ ಆಗಬಹುದು. ಬಚ್ಚಲಮನೆಯಲ್ಲಿ ಸಾಮಾನ್ಯವಾಗಿ ಗಾಳಿ ಬೆಳಕು ಇರುವುದಿಲ್ಲ. ಅದರಲ್ಲೂ ಮಹಿಳೆಯರು ಸ್ನಾನ ಮಾಡುವಾಗ ಎಲ್ಲವನ್ನೂ ಮುಚ್ಚುವುದರಿಂದ ಇನ್ನೂ ಹೆಚ್ಚು ಅಪಾಯ ಸಂಭವಿಸಬಹುದು. ಅನಿಲದಿಂದ ಬೆಂಕಿ ಹತ್ತಿಕೊಳ್ಳಬಹುದು. ಅದರಿಂದ ಹೊಗೆ (ಕಾರ್ಬನ್ ಮಾನೋಕ್ಸೈಡ್) ಬಿಡುಗಡೆಯಾಗಿ ಒಳಗಿದ್ದವರು ಉಸಿರುಕಟ್ಟಿ ಸಾಯುತ್ತಾರೆ. ಕರ್ನಾಟಕದಲ್ಲಿ 40 ಜನ ಇದರಿಂದ ಜೀವ ಕಳೆದುಕೊಂಡ ದಾಖಲೆಗಳಿವೆ.

ಮಹಾರಾಷ್ಟ್ರದಲ್ಲಿ ಸರ್ಕಾರ ಬಹಳ ಕಟ್ಟುನಿಟ್ಟಿನ ನಿಯಮಗಳನ್ನು ರಚಿಸಿದೆ. ಅಲ್ಲಿ ಗ್ಯಾಸ್ ಕಂಪನಿಗಳು ಬಂದು ನೋಡಿ ಗೀಸರ್ ಅಳವಡಿಸಿ ಹೋಗಬೇಕು. ಗ್ಯಾಸ್ ಗೀಸರ್ ಕಡಿಮೆ ವೆಚ್ಚದಲ್ಲಿ ಸಿಗುತ್ತದೆ ಎಂದು ಮಧ್ಯಮ ವರ್ಗದವರು ಮಾರು ಹೋಗುವುದು ಸಾಮಾನ್ಯ. ಅವರ ಮನೆಗಳು ಚಿಕ್ಕದಾಗೇ ಇರುತ್ತದೆ. ಬಚ್ಚಲು ಮನೆ ಚಿಕ್ಕದಾಗಿರುತ್ತದೆ. ಗಾಳಿ ಬೆಳಕು ಕಡಿಮೆ. ಹೀಗಾಗಿ ಬೆಂಕಿ ಆಕಸ್ಮಿಕಕ್ಕೆ ಹೇಳಿ ಮಾಡಿದ ಸ್ಥಳ. ಈಗ ಎಲೆಕ್ಟ್ರಿಕ್ ಗೀಸರ್, ಸೋಲಾರ್ ಗೀಸರ್‌ಗಳು ಬಂದಿವೆ.

Gas Geyser Dangers Safety Precautions and What Safer Alternatives Explained

ಸೋಲಾರ್ ಗೀಸರ್‌ಗಳು ತುಟ್ಟಿ ಎನಿಸಿದರೂ ಅಪಾಯ ಇರುವುದಿಲ್ಲ. ಈಗ ಸರ್ಕಾರ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದರಿಂದ ಎಲೆಕ್ಟ್ರಿಕ್ ಗೀಸರ್ ಬಳಸುವುದು ಸುಲಭ. ಕರ್ನಾಟಕದಲ್ಲಿ ಗ್ಯಾಸ್ ಗೀಸರ್ ಬಳಕೆಗೆ ಪ್ರತ್ಯೇಕ ನಿಯಮಗಳನ್ನು ರಚಿಸಿಲ್ಲ. ವಿದ್ಯುತ್ ಪರಿವೀಕ್ಷಕರು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ರಾಜ್ಯ ಸರ್ಕಾರ ಗಮನ ಹರಿಸಿಲ್ಲ. ಈ ಸೋಲಾರ್ ಬಳಕೆ ಅಧಿಕಗೊಂಡಿರುವುದರಿಂದ ಗ್ಯಾಸ್ ಗೀಸರ್ ಕೈಬಿಡುವುದು ಸೂಕ್ತ.

ಗೀಸರ್ ಅನಿಲ ಸೋರಿದರೆ ಏನೇನಾಗುತ್ತೆ?

ಗೀಸರ್‌ನಿಂದ ಅನಿಲ ಸೋರಿಕೆಯಾಗುವ ಸಾಧ್ಯತೆ ಇದೆ. ಗೀಸರ್ ಉರಿಯುವಾಗ ಅಥವಾ ಸಂಪೂರ್ಣವಾಗಿ ಉರಿಯದಿದ್ದಾಗ ಕಾರ್ಬನ್ ಮಾನಾಕ್ಸೈಡ್ ಬಣ್ಣರಹಿತ, ವಾಸನೆಯಿಲ್ಲದ ವಿಷಕಾರಿ ಅನಿಲ ಬಿಡುಗಡೆಯಾಗುತ್ತದೆ. ಇದು ಉಸಿರುಕಟ್ಟುವಿಕೆಗೆ ಕಾರಣವಾಗುತ್ತದೆ. ವಿಷ ಅನಿಲ ನಾವು ಉಸಿರಾಡುವ ಗಾಳಿಯ ಮೂಲಕ ದೇಹದೊಳಗೆ ಸೇರಿ, ರಕ್ತದಲ್ಲಿರುವ ಆಮ್ಲಜನಕವನ್ನು ಸ್ಥಾನಪಲ್ಲಟ ಮಾಡುತ್ತದೆ. ಇದು ಉಸಿರುಗಟ್ಟಿಸಿ ಸಾವಿಗೆ ಕಾರಣವಾಗುತ್ತದೆ. ಇದು ಗಾಳಿ-ಬೆಳಕಿಲ್ಲದ, ಚಿಕ್ಕದಾದ ಮತ್ತು ಸಂಪೂರ್ಣವಾಗಿ ಮುಚ್ಚಿದ ಸ್ನಾನದ ಕೋಣೆಗಳಲ್ಲಿ (ಬಚ್ಚಲಮನೆ) ಹೆಚ್ಚು ಅಪಾಯಕಾರಿ. ಏಕೆಂದರೆ, ವಿಷಕಾರಿ ಅನಿಲವು ಹೊರಹೋಗಲು ಅವಕಾಶವಿರುವುದಿಲ್ಲ ಮತ್ತು ಆಮ್ಲಜನಕದ ಕೊರತೆಯಾಗುತ್ತದೆ. ಸೋರಿಕೆಯಾದ ಅನಿಲದಿಂದ ಬೆಂಕಿ ಹತ್ತಿಕೊಳ್ಳುವ ಅಪಾಯವೂ ಇರುತ್ತದೆ. ಕರ್ನಾಟಕದಲ್ಲಿ 40 ಸಾವುಗಳು ದಾಖಲಾಗಿರುವುದು ಈ ಅಪಾಯದ ಗಂಭೀರತೆಯನ್ನು ತೋರಿಸುತ್ತದೆ. ಮಹಾರಾಷ್ಟ್ರ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ರಚಿಸಿದ್ದು, ಗೀಸರ್ ಅಳವಡಿಕೆಗೆ ಗ್ಯಾಸ್ ಕಂಪನಿಗಳ ಅಧಿಕೃತ ತಪಾಸಣೆ ಮತ್ತು ಅನುಮೋದನೆ ಕಡ್ಡಾಯವಾಗಿದೆ.

ಗ್ಯಾಸ್ ಗೀಸರ್‌ಗಳು ಆರಂಭದಲ್ಲಿ ಕಡಿಮೆ ವೆಚ್ಚದಲ್ಲಿ ಲಭ್ಯವಿದ್ದರೂ, ಅವುಗಳು ಸುರಕ್ಷಿತವಲ್ಲದ ಕಾರಣ ಜನ ಖರೀದಿಗೆ ಹಿಂಜರಿಯುವುದು ಸಹಜ. ಎಲೆಕ್ಟ್ರಿಕ್ ಗೀಸರ್ ಹೆಚ್ಚು ಸುರಕ್ಷಿತ ಪರ್ಯಾಯ. ರಾಜ್ಯ ಸರ್ಕಾರ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದರಿಂದ, ಎಲೆಕ್ಟ್ರಿಕ್ ಗೀಸರ್ ಬಳಕೆ ಈಗ ಆರ್ಥಿಕವಾಗಿಯೂ ಲಾಭದಾಯಕ. ಸೋಲಾರ್ ಗೀಸರ್ ದೀರ್ಘಾವಧಿಯಲ್ಲಿ ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಪರಿಸರ ಸ್ನೇಹಿ ಮತ್ತು ಸುರಕ್ಷಿತ ಪರ್ಯಾಯವಾಗಿದೆ. ಅಲ್ಲದೆ ಗ್ಯಾಸ್ ಗೀಸರ್ ಅಪಘಾತದಿಂದ ಮಾನಸಿಕ ವ್ಯಾಧಿಯೂ ಕಾಡಲಿದೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ನಿಮ್ಹಾನ್ಸ್ ಸಂಸ್ಥೆ ಅಧ್ಯಯನ ನಡೆಸಿದೆ.

ಜನಸಾಮಾನ್ಯರ ರಕ್ಷಣೆ ಬಗ್ಗೆ ಚಿಂತಿಸುವುದು ಸರ್ಕಾರದ ಕರ್ತವ್ಯ. ಗ್ಯಾಸ್ ಗೀಸರ್ ಯಾವ ಇಲಾಖೆಗೆ ಬರುತ್ತದೆ ಎಂಬುದು ತಿಳಿಯದು. ಕೇಂದ್ರ ಸರ್ಕಾರದ ತೈಲ ಮತ್ತು ವಿದ್ಯುತ್ ಇಂಧನ ಇಲಾಖೆಗಳು ಇದರ ಬಗ್ಗೆ ಗಮನ ಹರಿಸುವುದು ಅಗತ್ಯ. ಈ ಗ್ಯಾಸ್ ಗೀಸರ್‌ಗೆ ಕೇಂದ್ರ ಸರ್ಕಾರ ಮನೆ ಬಳಕೆಗೆ ನೀಡುವ ಅಡುಗೆ ಅನಿಲ ಎಲ್‌ಪಿಜಿ ಬಳಸುವ ಹಾಗಿಲ್ಲ ಎಂದು ಈಗಾಗಲೇ ಪ್ರಕಟಿಸಲಾಗಿದೆ. ವಾಣಿಜ್ಯ ಬಳಕೆಗೆ ಇರುವ ಎಲ್‌ಪಿಜಿ ಬಳಸಬಹುದು. ಇಲ್ಲವೆ ಪೈಪ್ ಮೂಲಕ ಬರುವ ಅಡುಗೆ ಅನಿಲವನ್ನು ಬಳಸಬಹುದು. ಇದಕ್ಕೆ ಪ್ರತ್ಯೇಕ ಅನುಮತಿ ಪಡೆಯಬೇಕು. ಸುದೈವದಿಂದ ಇದರ ಬಳಕೆ ಗ್ರಾಮೀಣ ಭಾಗದಲ್ಲಿ ಕಡಿಮೆ. ಅಲ್ಲದೆ ಅಲ್ಲಿ ಗಾಳಿ ಮತ್ತು ಬೆಳಕಿನ ಸಮಸ್ಯೆ ಇರುವುದಿಲ್ಲ. ಹೀಗಾಗಿ ಅಪಘಾತ ನಡೆಯುವುದು ಕಡಿಮೆ. ಅನಿಲ ಸೋರಿಕೆಯಾದರೂ ಗಾಳಿಯಲ್ಲಿ ಹೊರ ಹೋಗಿ ಬಿಡುತ್ತದೆ. ಉಸಿರುಗಟ್ಟಿಸುವ ವಾತಾವರಣ ಇರುವುದಿಲ್ಲ.

Gas Geyser Dangers Safety Precautions and What Safer Alternatives Explained

ಕರ್ನಾಟಕದಲ್ಲಿ ಕಟ್ಟುನಿಟ್ಟಾದ ಮಾನದಂಡ ಜಾರಿ ಆಗಲಿ

ಕರ್ನಾಟಕದಲ್ಲಿ ಪ್ರತ್ಯೇಕ ನಿಯಮಗಳು ಇಲ್ಲದಿದ್ದರೂ, ವಿದ್ಯುತ್ ಪರಿವೀಕ್ಷಕರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಗ್ಯಾಸ್ ಗೀಸರ್ ಬಳಕೆಯನ್ನು ಕೈ ಬಿಡುವುದು ಅಥವಾ ಕನಿಷ್ಠ ಪಕ್ಷ, ಮಹಾರಾಷ್ಟ್ರದಂತೆ ಕಟ್ಟುನಿಟ್ಟಾದ ಮಾನದಂಡಗಳನ್ನು ಪಾಲಿಸುವುದು ಸೂಕ್ತ. ಹಿಂದೆ ಸೀಮೆಎಣ್ಣೆ ಸ್ಟೌ ಬಳಸುತ್ತಿದ್ದೆವು. ಅದು ಹಲವು ಬಾರಿ ಸ್ಫೋಟಗೊಂಡು ಮಹಿಳೆಯರು ಸುಟ್ಟ ಗಾಯಗಳಿಂದ ಸಾವನ್ನಪ್ಪುತ್ತಿದ್ದರು. ಆಮೇಲೆ ಪಂಪ್ ಸ್ಟೌ ಬಂದಿತು. ಅದೂ ಕೂಡ ಸ್ಫೋಟಕ್ಕೆ ಕಾರಣವಾಗುತ್ತಿತ್ತು. ಅದನ್ನು ಕೈಬಿಟ್ಟು ಈಗ ಗ್ಯಾಸ್ ಸ್ಟೌ ಬಳಸಲಾಗುತ್ತಿದೆ. ಇದಕ್ಕೆ ಬಳಸುವ ಎಲ್‌ಪಿಜಿ ಸಿಲಿಂಡರ್ ಕೂಡ ಹಲವು ಬಾರಿ ಸ್ಫೋಟಗೊಂಡ ಘಟನೆಗಳು ವರದಿಯಾಗಿವೆ. ಆದರೆ ಸಾಮಾನ್ಯವಾಗಿ ಸಿಲಿಂಡರ್ ಸ್ಪೋಟಗೊಳ್ಳುವುದಿಲ್ಲ. ಹಲವು ಬಾರಿ ಬಾಂಬ್ ಸ್ಫೋಟಕ್ಕೆ ಸಿಲಿಂಡರ್ ಸ್ಪೋಟ ಎಂದು ಹೇಳಿ ಮುಚ್ಚಿ ಹಾಕುವುದುಂಟು.

ಈಗ ಸೆನ್ಸರ್‌ಗಳು ಬಂದಿವೆ. ಅವುಗಳು ಗ್ಯಾಸ್ ಸೋರಿಕೆಯಾದರೆ ಕೂಡಲೇ ಎಚ್ಚರಿಕೆ ನೀಡುತ್ತದೆ. ಬಹುಮಹಡಿ ಕಟ್ಟಡಗಳಲ್ಲಿ ಇದನ್ನು ಅಳವಡಿಸಿಕೊಳ್ಳಬಹುದು. ವಿದೇಶಗಳಲ್ಲಿ ಪ್ರತಿ ಮನೆಗೂ ಇದನ್ನು ಅಳವಡಿಸಲಾಗಿದೆ. ಇಎಲ್‌ಸಿಬಿ ಅಳವಡಿಸಿದರೆ ಉತ್ತಮ ಎಚ್ಚರಿಕೆ ನೀಡುವುದರಲ್ಲಿ ಸಂದೇಹವಿಲ್ಲ. ನಮ್ಮಲ್ಲಿ ಸುರಕ್ಷಿತ ಕ್ರಮಗಳಿಗೆ ಹೆಚ್ಚು ವೆಚ್ಚ ಮಾಡುವುದಿಲ್ಲ. ಅಪಘಾತಗಳು ಸಂಭವಿಸಿದಾಗ ಹಣೆಬರಹ ಎಂದು ನಮ್ಮನ್ನು ನಾವೇ ಶಪಿಸಿಕೊಂಡು ಬದುಕುತ್ತೇವೆ. ಇದು ಸರಿಯಾದ ಕ್ರಮವಲ್ಲ. ಯಾವುದೇ ಸ್ಟೌ ಆಗಲಿ ಅದಕ್ಕೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲೇಬೇಕು.

ಹಿಂದೆ ಹಳ್ಳಿಯ ಮನೆಗಳಲ್ಲಿ ಸ್ನಾನದ ಮನೆ ಬಹಳ ದೂರ ಇರುತ್ತಿತ್ತು. ಸೌದೆ ಒಲೆ, ಹಂಡೆ ಇದ್ದರೂ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ತಣ್ಣೀರು ಸ್ನಾನ ಸಾಮಾನ್ಯ ಸಂಗತಿಯಾಗಿತ್ತು. ಹಬ್ಬ ಹರಿದಿನಗಳಲ್ಲಿ ಮಾತ್ರ ಬಿಸಿನೀರಿನ ಸ್ನಾನ ಇರುತ್ತಿತ್ತು. ಈಗ ಪ್ರತಿದಿನ ಬಿಸಿ ನೀರಿನ ಸ್ನಾನ ಕಡ್ಡಾಯ. ಅಲ್ಲದೆ ಮನೆ ಒಳಗೆ ಸ್ನಾನದ ಮನೆ ಇರುವುದರಿಂದ ಎಚ್ಚರಿಕೆ ಕ್ರಮಗಳು ಅಗತ್ಯ. ಇದನ್ನು ಎಳೆಯ ವಯಸ್ಸಿನಲ್ಲೇ ಹೇಳಿಕೊಡುವುದು ಅಗತ್ಯ. ಆಗ ಮಕ್ಕಳು ಎಲ್ಲೇ ಹೋದರೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗಮನ ಹರಿಸುತ್ತಾರೆ.

ಶಾಲೆಗಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ

ಶಾಲೆಗಳಲ್ಲಿ ಇದರ ಬಗ್ಗೆ ವಿದ್ಯುತ್ ಇಲಾಖೆ ಪ್ರಾಯೋಗಿಕ ಪ್ರದರ್ಶನ ಏರ್ಪಡಿಸುವುದು ಸೂಕ್ತ. ಪ್ರತಿ ಎಇಇ ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳಿಗೆ ವರ್ಷಕ್ಕೊಮ್ಮೆ ಭೇಟಿ ಅಲ್ಲಿಯ ವಿದ್ಯುತ್ ವ್ಯವಸ್ಥೆ ಪರಿಶೀಲಿಸಬೇಕು. ಜೊತೆಗೆ ಮಕ್ಕಳಿಗೆ ಜಾಗೃತಿ ಶಿಬಿರ ನಡೆಸುವುದು ಸೂಕ್ತ. ಅದರಲ್ಲೂ ಹಳ್ಳಿಗಳ ಮಕ್ಕಳಿಗೆ ಇದು ಅಗತ್ಯ. ಅವರು ಹೆಚ್ಚು ವಿದ್ಯುತ್ ಸಂಪರ್ಕಕ್ಕೆ ಬರುತ್ತಾರೆ. ವಿದ್ಯುತ್ ಕಣ್ಣಿಗೆ ಕಾಣಿಸುವುದಿಲ್ಲ ನಿಜ. ಆದರೆ ಹೆಚ್ಚು ಅಪಾಯಕಾರಿ ಎಂಬುದು ಅಪಘಾತವಾದಾಗಲೇ ತಿಳಿಯುತ್ತದೆ.

ವಿದ್ಯುತ್ ಇಲಾಖೆ ತನ್ನ ಎಲ್ಲ ಅಧಿಕಾರಿಗಳಿಗೆ ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯುತ್ ಬಗ್ಗೆ ಅರಿವು ಮೂಡಿಸುವುದನ್ನು ಕಡ್ಡಾಯ ಮಾಡಬೇಕು. ಆಗ ಜನಸಾಮಾನ್ಯರು ಹಾಗೂ ಅಮಾಯಕರು ವಿದ್ಯುತ್ ಅಪಘಾತಗಳಿಂದ ಸಾವನ್ನಪ್ಪುವುದನ್ನು ತಪ್ಪಿಸಬಹುದು. ಅನಿಲವನ್ನು ವಿದ್ಯುತ್‌ಗೆ ಪರ್ಯಾಯವಾಗಿ ಬಳಸುವುದರಿಂದ ಅದರ ಬಗ್ಗೆ ಜನರಲ್ಲಿ ಜಾಗೃತಿ ಮುಡಿಸುವುದು ಅಗತ್ಯ. ಅನಿಲ ಪೂರೈಕೆ ಏಜನ್ಸಿಯಲ್ಲಿ ಈ ರೀತಿ ಜನರಿಗೆ ತಿಳವಳಿಕೆ ನೀಡುವ ವ್ಯವಸ್ಥೆ ಇಲ್ಲ. ಅವರಿಗೆ ವ್ಯಾಪಾರ ಹೊರತುಪಡಿಸಿ ಬೇರೆ ಏನೂ ತಿಳಿದಿರುವುದಿಲ್ಲ. ಹೆಚ್ಚು ಎಂದರೆ ತಮ್ಮ ಅಂಗಡಿ ಮುಂದೆ ಫೋಸ್ಟರ್ ಅಂಟಿಸುತ್ತಾರೆ.

ಬರಹ: ಶಾರದಾ, ಬೆಂಗಳೂರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+