Ganesh Chaturthi: ಗಣೇಶ ಬಿರಿಯಾನಿ ಬಡಿಸುತ್ತಿರುವ ಜಾಹೀರಾತು; ಬ್ಯಾನರ್ ಅಳವಡಿಸಿದ ಹೋಟೆಲ್ ಮಾಲೀಕ ಅರೆಸ್ಟ್
Controversial Banner: ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಬಿರಿಯಾನಿ ಅಂಗಡಿಯೊಂದರ ಜಾಹೀರಾತು ಬ್ಯಾನರ್ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹೊಟೇಲ್ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಬಿರಿಯಾನಿ ಹೊಟೇಲ್‌ವೊಂದರ ಜಾಹೀರಾತು ಫ್ಲೆಕ್ಸ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದೀಗ ಈ ಬ್ಯಾನರ್ ಅಳವಡಿಕೆ ಮಾಡಿದ ಹೋಟೆಲ್ ಮಾಲೀಕನನ್ನ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ರಿಯಾಯಿತಿ ಆಫರ್‌ನ ಜಾಹೀರಾತು
ತಿರುನೆಲ್ವೇಲಿಯ ವಿ.ಎಂ.ಛತ್ರಮ್ ಸೇತುವೆಯ ಬಳಿ ಇರುವ ಬಿರಿಯಾನಿ ಹೋಟೆಲ್ ಮಾಲೀಕ ಜಯಂತ್ (30), ಗಣೇಶ ಚತುರ್ಥಿಯ ಆಚರಣೆಯ ಪ್ರಯುಕ್ತ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು 'ಅರೇಬಿಕ್ ಶೈಲಿಯ ಚಿಕನ್ 65 ಬಿರಿಯಾನಿ'ಗೆ ₹99ರ ವಿಶೇಷ ರಿಯಾಯಿತಿ ಆಫರ್ ಘೋಷಿಸಿದ್ದರು. ಈ ಆಫರ್‌ನಿಂದ ಸಾರ್ವಜನಿಕರ ಗಮನ ಸೆಳೆಯಲು ಅವರು ತಮ್ಮ ಅಂಗಡಿಯ ಮುಂದೆ ಬೃಹತ್ ಜಾಹೀರಾತು ಬ್ಯಾನರ್‌ವೊಂದನ್ನು ಅಳವಡಿಸಿದ್ದರು.
ಈ ಬ್ಯಾನರ್‌ನಲ್ಲಿ ಹಿಂದೂ ಧರ್ಮದ ಪ್ರಥಮ ಪೂಜಿತ ದೇವರೆಂದೇ ಪೂಜಿಸಲ್ಪಡುವ ಗಣೇಶನೇ ಸ್ವತಃ ಅಡುಗೆ ಪಾತ್ರೆಯಲ್ಲಿ ಚಿಕನ್ ಬಿರಿಯಾನಿ ತಯಾರಿಸುತ್ತಿರುವ ರೀತಿಯ ಚಿತ್ರವನ್ನು ಮುದ್ರಿಸಲಾಗಿತ್ತು. ಪವಿತ್ರವಾದ ಹಬ್ಬದ ದಿನದಂದು ದೇವರಿಗೆ ಅವಮಾನ ಮಾಡುವ ರೀತಿಯಲ್ಲಿ ಆಹಾರ ತಯಾರಿಸುವ ಚಿತ್ರವನ್ನು ಜೋಡಿಸಿ ಪ್ರಚಾರಕ್ಕೆ ಬಳಸಿದ್ದು, ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಹೋಟೆಲ್ ಮಾಲೀಕನ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಈ ಬ್ಯಾನರ್‌ನ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಹಿಂದೂ ಸಂಘಟನೆಗಳು ಸೇರಿದಂತೆ ವಿವಿಧ ಧಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಮತ್ತು ಸ್ಥಳೀಯ ಸಾರ್ವಜನಿಕರು ಹೋಟೆಲ್ ಮುಂದೆ ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದರು. ಪವಿತ್ರ ಹಬ್ಬದ ಸಮಯದಲ್ಲಿ ವ್ಯಾಪಾರದ ಲಾಭಕ್ಕಾಗಿ ದೇವರು ಹಾಗೂ ಧಾರ್ಮಿಕ ಭಾವನೆಗಳಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ, ತಕ್ಷಣ ಬ್ಯಾನರ್ ತೆರವುಗೊಳಿಸಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ
ಘಟನಾ ಸ್ಥಳಕ್ಕೆ ಧಾವಿಸಿದ ತಿರುನೆಲ್ವೇಲಿ ನಗರ ಪೊಲೀಸರು ಬಿರಿಯಾನಿ ಅಂಗಡಿಯ ಮುಂಭಾಗದಲ್ಲಿದ್ದ ವಿವಾದಾತ್ಮಕ ಬ್ಯಾನರ್ ಅನ್ನು ಹರಿದು ತೆರವುಗೊಳಿಸಿದರು. ತದನಂತರ ಸ್ಥಳೀಯ ನಿವಾಸಿ ಸೆಲ್ವರಾಜ್ ನೀಡಿದ ದೂರಿನ ಆಧಾರದ ಮೇಲೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದದ್ದು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಬಿರಿಯಾನಿ ಅಂಗಡಿ ಮಾಲೀಕ ಜಯಂತ್ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಜಾಹೀರಾತು ಅಥವಾ ಆಫರ್‌ಗಳ ಹೆಸರಿನಲ್ಲಿ ಧಾರ್ಮಿಕ ಚಿಹ್ನೆಗಳನ್ನು ಮನಸೋಇಚ್ಛೆ ಬಳಸುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.


Click it and Unblock the Notifications
