Vande Bharat Express: ಜ. 10ರಿಂದ ಈ ವಂದೇ ಭಾರತ್ ರೈಲಿಗೆ 20 ಬೋಗಿ, ಸೀಟುಗಳ ಸಂಖ್ಯೆ ಹೆಚ್ಚಳ
ತಿರುವನಂತಪುರಂ, ಜನವರಿ 08: ಕೇಂದ್ರ ನೀಡಿದ್ದ ಭರವಸೆಯಂತೆ ಕೇರಳ ರಾಜ್ಯಕ್ಕೆ 20 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನೀಡಲಾಗಿದೆ. ಜನವರಿ 10 ರಿಂದ ಈ ರೈಲು ಸಂಚಾರ ಆರಂಭವಾಗಲಿದೆ. ದೇಶದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರ ಬೇಡಿಕೆ ಇರುವ ಮಾರ್ಗದಲ್ಲಿ ಈ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಹೊಸ ರೈಲು ಸಂಚಾರ, ಸೀಟುಗಳ ಸಂಖ್ಯೆ, ವೇಳಾಪಟ್ಟಿ ಕುರಿತು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ.
ಜನವರಿ 10 ರಿಂದ ಎರಡು ವಂದೇ ಭಾರತ್ ರೈಲು ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ ಎಂದು ದಕ್ಷಿಣ ರೈಲ್ವೆ ಹೇಳಿದೆ. ಈ ಮೂಲಕ ಸೀಟುಗಳ ಸಂಖ್ಯೆಯು ಹೆಚ್ಚಳವಾಗಲಿದ್ದು, ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲುಗಳಲ್ಲಿ ಇನ್ನೂ ಹೆಚ್ಚಿನ ಪ್ರಯಾಣಿಕರು ಸಂಚಾರ ನಡೆಸಲು ಅನುಕೂಲವಾಗಲಿದೆ ಎಂದು ದಕ್ಷಿಣ ರೈಲ್ವೆ ಹೇಳಿದೆ.

ಕೊಚುವೇಲಿ ರೈಲು ನಿಲ್ದಾಣಕ್ಕೆ ಈಗಾಗಲೇ ಹೊಸದಾದ ಕೇಸರಿ ಬಣ್ಣದ ವಂದೇ ಭಾರತ್ ರೈಲು ಬೋಗಿ ಆಗಮಿಸಿದ್ದು, ತಾಂತ್ರಿಕ ತಜ್ಞರ ತಂಡ ಪರಿಶೀಲನೆ ಪೂರ್ಣಗೊಳಿಸಿದೆ. ಜನವರಿ 10 ರಿಂದ ಕೇರಳದ ಎರಡು ಮಾರ್ಗದಲ್ಲಿ ಸಂಚಾರ ನಡೆಸುವ ವಂದೇ ಭಾರತ್ ರೈಲು ಬೋಗಿಗಳ ಸಂಖ್ಯೆ ಹೆಚ್ಚಾಗಲಿದೆ.
ಮಾರ್ಗ, ವೇಳಾಪಟ್ಟಿ ವಿವರ: ದಕ್ಷಿಣ ರೈಲ್ವೆಯ ಮಾಹಿತಿ ಪ್ರಕಾರ ರೈಲು ನಂಬರ್ 20634/ 20633 ತಿರುವನಂತಪುರಂ ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜನವರಿ 10, 2025ರಿಂದ 20 ಬೋಗಿ ರೈಲಾಗಿ ಸಂಚಾರವನ್ನು ನಡೆಸಲಿದೆ.
ರೈಲು ನಂಬರ್ 20666/ 20665 ತಿರುನೆಲ್ವೇಲಿ-ಚೆನ್ನೈ ಇಗ್ಮೋರ್-ತಿರುನೆಲ್ವೇಲಿ ಮಾರ್ಗದ ವಂದೇ ಭಾರತ್ ರೈಲು 16 ಬೋಗಿಯ ರೈಲಾಗಿ ಜನವರಿ 11 ರಿಂದ ಸಂಚಾರವನ್ನು ನಡೆಸಲಿದೆ ಎಂದು ತಿಳಿಸಿದೆ.
ರೈಲು ನಂಬರ್ 20634/ 20633 ತಿರುವನಂತಪುರಂ ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸದ್ಯ 16 ಬೋಗಿ (ಚೇರ್ ಕಾರ್ 14, ಎಕ್ಸಿಕ್ಯುಟಿವ್ ಚೇರ್ ಕಾರ್ 2) ಆಗಿದೆ. ಇದು ಜನವರಿ 10 ರಿಂದ 20 ಬೋಗಿಯ ರೈಲಾಗಿ (18 ಚೇರ್ ಕಾರ್, 2 ಎಕ್ಸಿಕ್ಯುಟಿವ್ ಚೇರ್ ಕಾರ್) ಸಂಚಾರವನ್ನು ನಡೆಸಲಿದೆ. ತಿರುವನಂತರಪುರಂ ಮತ್ತು ಕಾಸರಗೋಡು ನಡುವೆ 10/1/2025ರಿಂದ 20 ಬೋಗಿಯಾಗಿ ಸಂಚಾರ ನಡೆಸಲಿದ್ದು, 1440 ಸೀಟುಗಳ ಸಾಮರ್ಥ್ಯವನ್ನು ರೈಲು ಹೊಂದಿದೆ.
ಸದ್ಯ ರೈಲು ನಂಬರ್ 20666/ 20665 ತಿರುನೆಲ್ವೇಲಿ-ಚೆನ್ನೈ ಇಗ್ಮೋರ್-ತಿರುನೆಲ್ವೇಲಿ ಮಾರ್ಗದ ವಂದೇ ಭಾರತ್ ರೈಲು 8 ಬೋಗಿ (7 ಚೇರ್‌ಕಾರ್, 1 ಎಕ್ಸಿಕ್ಯುಟಿವ್ ಚೇರ್ ಕಾರ್) ಹೊಂದಿದೆ. ಈ ರೈಲು 16 ಬೋಗಿ (14 ಚೇರ್ ಕಾರ್, 2 ಎಕ್ಸಿಕ್ಯುಟಿವ್) ರೈಲಾಗಿ ಜನವರಿ 11 ರಿಂದ ಸಂಚಾರವನ್ನು ನಡೆಸಲಿದೆ.
ದೇಶದಲ್ಲೇ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆ ಹೊಂದಿರುವ, ಅತಿ ಹೆಚ್ಚು ಬೇಡಿಕೆ ಇರುವ ವಂದೇ ಭಾರತ್ ರೈಲು ಮಾರ್ಗ ತಿರುವನಂತಪುರಂ ಸೆಂಟ್ರಲ್-ಕಾಸರಗೋಡು-ತಿರುವನಂತಪುರಂ ಸೆಂಟ್ರಲ್ ಆಗಿದೆ. 16 ಬೋಗಿಯ ಈ ರೈಲು 1128 ಸೀಟುಗಳ ಸಾಮರ್ಥ್ಯವನ್ನು ಹೊಂದಿತ್ತು. 20 ಬೋಗಿ ಆದ ಬಳಿಕ 1440 ಸೀಟುಗಳು ಸಿಗಲಿವೆ.
ಈ ವಂದೇ ಭಾರತ್ ರೈಲು ಕೇರಳ ರಾಜ್ಯದ 11 ಜಿಲ್ಲೆಗಳ ಮೂಲಕ ಸಂಚಾರ ನಡೆಸುತ್ತದೆ. ಪ್ರಧಾನಿ ನರೇಂದ್ರ ಮೋದಿ 2023ರಲ್ಲಿ ಈ ರೈಲು ಸೇವೆಯನ್ನು ಆರಂಭಿಸಿದ್ದರು. ತಿರುವನಂತಪುರಂನಿಂದ ಬೆಳಗ್ಗೆ 5.15ಕ್ಕೆ ಹೊರಡುವ ರೈಲು ಮಧ್ಯಾಹ್ನ 1.20ಕ್ಕೆ ಕಾಸರಗೋಡು ತಲುಪಲಿದೆ. ಕಾಸರಗೋಡಿನಿಂದ 2.30ಕ್ಕೆ ಹೊರಟು, ರಾತ್ರಿ 10.35ಕ್ಕೆ ತಿರುವನಂತಪುರಂ ತಲುಪುತ್ತದೆ.
ತಿರುವನಂತಪುರಂ-ಕಾಸರಗೋಡು ರೈಲಿನಲ್ಲಿ ಚೇರ್ ಕಾರ್ ದರ 1,520 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ದರ 2,815 ರೂ. (ಕ್ಯಾಟರಿಂಗ್ ಶುಲ್ಕ ಸೇರಿ) ಇದೆ. ಕ್ಯಾಟರಿಂಗ್ ಸೇವೆಯನ್ನು ರದ್ದುಗೊಳಿಸುವ ಆಯ್ಕೆಯೂ ಪ್ರಯಾಣಿಕರಿಗೆ ಇದೆ. ಈಗ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ರೈಲನ್ನು 20 ಬೋಗಿಯಾಗಿ ಬದಲಾವಣೆ ಮಾಡಿ ಓಡಿಸಲಾಗುತ್ತಿದೆ.
20 ಬೋಗಿಯ ವಂದೇ ಭಾರತ್ ರೈಲು ಕರ್ನಾಟಕದ ಜನರಿಗೂ ಅನುಕೂಲವಾಗಲಿದೆ. ಕರ್ನಾಟಕ ಕರಾವಳಿಯ ಅನೇಕ ಜನರು ಕೇರಳಕ್ಕೆ ತೆರಳುತ್ತಾರೆ. ಅವರಿಗೆ ಮಂಗಳೂರು ಮೂಲಕ ಕಾಸರಗೋಡು ತಲುಪಿ ಅಲ್ಲಿಂದ ಈ ರೈಲಿನಲ್ಲಿ ಮುಂದೆ ಸಾಗಲು ಅನುಕೂಲವಾಗಲಿದೆ.












Click it and Unblock the Notifications