ಸಂಸತ್ತಿನಲ್ಲಿ ರಾಧೆಯಿಂದ ಕಾಳಿಯವರೆಗೆ, ರಾಮನಿಂದ ಅಲ್ಲಾಹ್ ವರೆಗೆ!
ಹದಿನೇಳನೇ ಲೋಕಸಭೆಗೆ 542 ಸಂಸದರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಲವು ವಿಶೇಷತೆಗೆ ಸಾಕ್ಷಿಯಾಯಿತು. ಬಹುತೇಕ ಸಂಸದರು, ಅದರಲ್ಲೂ ಪ್ರಮುಖವಾಗಿ ದಕ್ಷಿಣ ಭಾರತದ ಜನಪ್ರತಿನಿಧಿಗಳು ಮಾತೃಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇನ್ನು, ಮಲೆಯಾಳಂನಲ್ಲಿ ಯಾಕೆ ಪ್ರಮಾಣವಚನ ಸ್ವೀಕರಿಸಿಲ್ಲ ಎಂದು ಕೇರಳದ ಕಾಂಗ್ರೆಸ್ ಸಂಸದರೊಬ್ಬರನ್ನು ಸೋನಿಯಾ ಗಾಂಧಿ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯುತು.
ಗುರುದಾಸಪುರ ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಸನ್ನಿ ಡಿಯೋಲ್, 'I will uphold the sovereignty and integrity of India' ಪದದಲ್ಲಿ ಅಪ್ ಹೋಲ್ಡ್ ಹೇಳುವ ಬದಲು 'ವಿದ್ ಹೋಲ್ಡ್' ಎಂದು ಬಾಯಿತಪ್ಪಿ ಹೇಳಿ, ನಗುನಗುತ್ತಾ, ತನ್ನ ತಪ್ಪನ್ನು ತಾನೇ ತಿದ್ದಿಕೊಂಡಿದ್ದು ವಿಶೇಷವಾಗಿತ್ತು.
ಅಮೇಥಿಯಲ್ಲಿ ಗೆದ್ದ ಸ್ಮೃತಿ ಇರಾನಿಗೆ, ತಿರುವನಂತಪುರಂನಿಂದ ಗೆದ್ದ ಶಶಿ ತರೂರ್ ಗೆ, ಅನ್ಸೋಲ್ ನಿಂದ ಗೆದ್ದ ಬಾಬುಲ್ ಸುಪ್ರಿಯಾ, ಪ್ರಮಾಣವಚನ ಸ್ವೀಕರಿಸಿದಾಗ ಭಾರೀ ಕರತಾಡನ ವ್ಯಕ್ತವಾಯಿತು. ವಂದೇ ಮಾತರಂ, ಇಸ್ಲಾಂಗೆ ವಿರುದ್ದವಾದದ್ದು...

ಮಥುರಾ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಹೇಮಾಮಾಲಿನಿ,
ಎರಡು ದಿನದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಧೆ, ಕಾಳಿ, ಶ್ರೀರಾಮ, ಅಲ್ಲಾಹ್ ಹೆಸರು ಭಾರೀ ಸದ್ದು ಮಾಡಿತು. ಉತ್ತರಪ್ರದೇಶದ ಮಥುರಾ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿಯ ಹೇಮಾಮಾಲಿನಿ, ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕೊನೆಗೆ, ರಾಧೆ.. ರಾಧೆ.. ಕೃಷ್ಣಂವಂದೇ ಜಗದ್ಗುರು ಎಂದಾಗ, ಸದಸ್ಯರು ತಾವೂ ರಾಧೇ.. ರಾಧೇ.. ಎಂದು ಧ್ವನಿಗೂಡಿಸಿದರು.

ತೆಲಂಗಾಣದ ಹೈದರಾಬಾದ್ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಓವೈಸಿ
ತೆಲಂಗಾಣದ ಹೈದರಾಬಾದ್ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಅಸಾದುದ್ದೀನ್ ಓವೈಸಿ, ಅಲ್ಲಾಹ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಓವೈಸಿ, ಪ್ರಮಾಣವಚನ ಸ್ವೀಕರಿಸಲು ಬಂದಾಗ, ಜೈಶ್ರೀರಾಂ, ವಂದೇ ಮಾತರಂ, ಭಾರತ್ ಮಾತಾಕೀ ಜೈ, ಘೋಷಣೆ ಮೊಳಗಿತ್ತು. ಕೊನೆಯಲ್ಲಿ, ಜೈಭೀಮ್.. ಜೈಭೀಮ್.. ತಕ್ಬೀರ್ ಅಲ್ಲಾಹು ಅಕ್ಬರ್, ಜೈಹಿಂದ್ ಎಂದು ಹೇಳಿ, ತನ್ನ ಸೀಟಿಗೆ ಓವೈಸಿ ವಾಪಸ್ ಆದರು.

ಉತ್ತರಪ್ರದೇಶದ ಸಂಭಾಲ್ ಕ್ಷೇತ್ರದ ಎಸ್ಪಿ ಸಂಸದ ಶಫೀಕ್ ರೆಹಮಾನ್ ಬರ್ಕ್
ಉತ್ತರಪ್ರದೇಶದ ಸಂಭಾಲ್ ಕ್ಷೇತ್ರದ ಎಸ್ಪಿ ಸಂಸದ ಶಫೀಕ್ ರೆಹಮಾನ್ ಬರ್ಕ್, ಅಲ್ಲಾಹ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಂಸತ್ ಸದಸ್ಯರು ವಂದೇ ಮಾತರಂ ಹೇಳಿ ಎಂದಾಗ, ಅದು ನಮ್ಮ ಇಸ್ಲಾಂಗೆ ವಿರುದ್ದವಾಗಿರುವುದು. ಅದರ ಬದಲು, ಭಾರತದ ಸಂವಿಧಾನಕ್ಕೆ ಜೈ ಎಂದು ಬರ್ಕ್ ಮಾತು ಮುಗಿಸಿದರು.

ಪಶ್ಚಿಮ ಬಂಗಾಳದ ಬರಾಸತ್ ಕ್ಷೇತ್ರದ ಟಿಎಂಸಿ ಪಕ್ಷದ ಎಂಪಿ
ಪಶ್ಚಿಮ ಬಂಗಾಳದ ಬರಾಸತ್ ಕ್ಷೇತ್ರದ ಟಿಎಂಸಿ ಪಕ್ಷದ ಎಂಪಿ, ಕಾಕೋಳಿ ಘೋಷ್ ದಸ್ತಿದಾರ್, ಪ್ರಮಾಣವಚನ ಸ್ವೀಕರಿಸಲು ಬಂದಾಗ, ಜೈಶ್ರೀರಾಂ ಘೋಷಣೆ ಮೊಳಗಿತ್ತು. ಸೀಟಿನಿಂದ ಬರುವಾಗಲೇ ಜೈಮಾ ಕಾಳಿ ಎಂದು ಕೂಗುತ್ತಾ ಬಂದ ದಸ್ತಿದಾರ್, ಬಿಜೆಪಿ ಸಂಸದರನ್ನು ನೋಡಿ, ಇನ್ನಷ್ಟು ಜೋರಾಗಿ ಜೈಮಾತಾ ಕಾಳೀ ಎಂದರು.

ಪಶ್ಚಿಮ ಬಂಗಾಳದ, ಮುಷಿರಾಬಾದ್ ಕ್ಷೇತ್ರದ ಟಿಎಂಸಿ ಸಂಸದ ಅಬು ತಹೀರ್ ಖಾನ್
ಪಶ್ಚಿಮ ಬಂಗಾಳದ, ಮುಷಿರಾಬಾದ್ ಕ್ಷೇತ್ರದ ಟಿಎಂಸಿ ಸಂಸದ ಅಬು ತಹೀರ್ ಖಾನ್ ಪ್ರಮಾಣವಚನ ಸ್ವೀಕರಿಸಲು ಬಂದಾಗಲೂ, ಜೈಶ್ರೀರಾಂ ಘೋಷಣೆ ಮೊಳಗಿತು. ಆಗ, ಆಡಳಿತ ಪಕ್ಷದವರನ್ನು ಒಂದು ರೌಂಡ್ ಗುರಾಯಿಸಿ, ಬಿಸ್ಮಿಲ್ಲಾ.. ಇ.. ರೆಹಮಾನ್..ರಹೀಂ ಎಂದು ಪ್ರಮಾಣವಚನ ಆರಂಭಿಸಿ, ಜೈಹಿಂದ್, ಜೈ ಬಾಂಗ್ಲಾ, ಅಲ್ಲಾಹು ಅಕ್ಬರ್.. ಖುದಾ ಹಫೀಜ್ ಹೇಳುವ ಮೂಲಕ, ಪ್ರಮಾಣವಚನ ಮುಗಿಸಿದರು.












Click it and Unblock the Notifications