ISRO: ಎತ್ತಿನ ಬಂಡಿಯಿಂದ ಚಂದಿರನ ಅಂಗಳದ ವರೆಗೆ, ಬಾಹ್ಯಾಕಾಶ ಚರಿತ್ರೆಯ ಪುಟದಲ್ಲಿ ಹೊಸ ಅಧ್ಯಾಯ
ಆಗಸ್ಟ್ 23, ಟಿಕ್..ಟಿಕ್..ಟಿಕ್.. ಸಮಯ 17.47 ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭ.. ಸಮಯ 18.04 ಇಸ್ರೋ ಲೆಕ್ಕಾಚಾರದಂತೆ ಚಂದಿರನ ಅಂಗಣದಲ್ಲಿ ಸುರಕ್ಷಿತವಾಗಿ ಇಳಿದ ವಿಕ್ರಂ ಲ್ಯಾಂಡರ್. ಸಮಯ 23.02 ಲ್ಯಾಂಡರ್ ನಿಂದ ಹೊರ ಬಂದ ರೋವರ್ ಪ್ರಗ್ಯಾನ್. ಅಲ್ಲಿಗೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲಿರುಳು ಶ್ರಮಿಸಿದ ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಒಲಿದ ಸಾರ್ಥಕತೆ. ದೇಶದೆಲ್ಲಡೆ ಸಂಭ್ರಮ, ಮುಗಿಲು ಮುಟ್ಟಿದ ಜಯಘೋಷ, ಅಭಿನಂದನೆಯ ಮಹಾಪೂರ..
ವಿಶ್ವದ ಬಾಹ್ಯಾಕಾಶ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದ ಇಸ್ರೋ, ಈ ಹಿಂದೆ ಅವಹೇಳನ ಮಾಡಿದವರಿಂದಲೇ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡು ಭಾರತದ ತಾಕತ್ತನ್ನು ಜಗತ್ತಿಗೆ ತೋರಿಸಿದೆ. ರಷ್ಯಾ, ಅಮೆರಿಕಾ ಮತ್ತು ಚೀನಾದ ಬಳಿಕ ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಶ್ವದ ನಾಲ್ಕನೇ ದೇಶವಾಗಿ ಗುರುತಿಸಿಕೊಂಡಿದೆ. ಚಂದ್ರಯಾನ - 2 ವೈಫಲ್ಯಗೊಂಡಾಗ ಮುಸಿಮುಸಿ ನಗುತ್ತಿದ್ದವರಿಗೆ ತಮ್ಮ ಛಲ, ಕೆಲಸದಿಂದಲೇ ಉತ್ತರ ನೀಡಿದೆ.

ಚೀನಾದ ಚಾಂಗೆ ಬಾಹ್ಯಾಕಾಶ ಯೋಜನೆಗೆ ತಗುಲಿದ ಖರ್ಚು ಅಂದಾಜು ₹1,200 ಕೋಟಿ, ರಷ್ಯಾದ ಲೂನಾ - 25 ಯೋಜನೆಗೆ ತಗುಲಿದ ವೆಚ್ಚ ಅಂದಾಜು ₹1,500 ಕೋಟಿ, ಭಾರತದ ಚಂದ್ರಯಾನ - 3ಗೆ ತಗುಲಿದ ವೆಚ್ಚ ₹615 ಕೋಟಿ. ಬಜೆಟ್ ವಿಚಾರದಲ್ಲೂ ಲೆಕ್ಕಾಚಾರದಲ್ಲೇ ಸಾಗಿದ ಇಸ್ರೋ, ರಷ್ಯಾ, ಇಸ್ರೇಲ್ ಅಥವಾ ಸೌದಿ ಅರೆಬಿಯಾ ಕೈಯಲ್ಲೂ ಆಗದ ಸಾಧನೆಯನ್ನು ಮಾಡಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದೆ.
ಬೆಂಗಳೂರಿನಲ್ಲಿ ಪ್ರಮುಖ ಕಚೇರಿ ಹೊಂದಿರುವ ಇಸ್ರೋ
ಬೆಂಗಳೂರಿನಲ್ಲಿ ಪ್ರಮುಖ ಕಚೇರಿಯನ್ನು, ಹದಿನೇಳು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಇಸ್ರೋ (Indian Space Research Organisation) ಅಸ್ತಿತ್ವಕ್ಕೆ ಬಂದಿದ್ದು 1969ರ ಸ್ವಾತಂತ್ರೋತ್ಸವ ದಿನದಂದು. 'ಮಾನವ ಕುಲದ ಸೇವೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ' ಧ್ಯೇಯದೊಂದಿಗೆ ಆರಂಭವಾದ ಈ ಸಂಸ್ಥೆ 1975ರಲ್ಲಿ ಆರ್ಯಭಟ ಉಪಗ್ರಹ ಉಡಾವಣೆ ಮೂಲಕ ಬಾಹ್ಯಾಕಾಶ ಚರಿತ್ರೆಯಲ್ಲಿ ತನ್ನ ಉಪಸ್ಥಿತಿಯನ್ನು ತೋರಿತು.
1979ರಲ್ಲಿ ರೋಹಿಣಿ ಉಪಗ್ರಹದ ಉಡಾವಣೆ
1979ರಲ್ಲಿ ರೋಹಿಣಿ ಉಪಗ್ರಹದ ಉಡಾವಣೆ ವಿಫಲಗೊಂಡರೂ, ಒಂದು ವರ್ಷದ ನಂತರ ಮತ್ತೆ ಯಶಸ್ವಿಯಾಗಿ ಉಡಾವಣೆಯನ್ನು ಮಾಡಿತು. ಇದಾದ ನಂತರ ಆಪಲ್, ಭಾಸ್ಕರ - 2, ಇನ್ಸಾಟ್ ಸರಣಿಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಶಕ್ತವಾಗಿತ್ತು. 1984ರಲ್ಲಿ ಇಂಡೋ-ರಷ್ಯನ್ ಅಂತರಿಕ್ಷ ಯಾನದಡಿಯಲ್ಲಿ ಮೊದಲ ಬಾರಿಗೆ ರಾಕೇಶ್ ಶರ್ಮಾ ಗಗನ ಯಾನವನ್ನು ಮಾಡಿದರು.

ಇಸ್ರೋ ಸಾಧನೆಯನ್ನು ಪಟ್ಟಿ
ಅಲ್ಲಿಂದ ಇಲ್ಲಿಯವರೆಗೆ ಇಸ್ರೋ ಸಾಧನೆಯನ್ನು ಪಟ್ಟಿ ಮಾಡಲು ಕೂತರೆ ಬರೆದು ಮುಗಿಸಲು ಹಲವು ದಿನಗಳೇ ಬೇಕಾಗಬಹುದು. ಆದರೂ, ಪ್ರಮುಖ ಐದು ಸಾಧನೆಗಳನ್ನು ಪಟ್ಟಿ ಮಾಡುವುದಾದರೆ:
1. 2017ರಲ್ಲಿ ಆರು ದೇಶಗಳ ಸಹಯೋಗದೊಂದಿಗೆ ಒಂದೇ ರಾಕೆಟ್ ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮೂಲಕ ಸಾಧನೆಯನ್ನು ಮೆರೆಯಿತು. ಪಿಎಸ್ಎಲ್ವಿ (Polar Satellite Launch Vehicle) ಈ ಸಾಧನೆಯನ್ನು ಮಾಡಿತ್ತು. ರಷ್ಯಾ ಬಾಹಾಕ್ಯಾಶ ಸಂಸ್ಥೆ ಏಕಕಾಲದಲ್ಲಿ 37 ಉಪಗ್ರಹಗಳನ್ನು ಉಡಾವಣೆ ಮಾಡಿದ್ದ ರೆಕಾರ್ಟ್ ಅನ್ನು ಇಸ್ರೋ ಬ್ರೇಕ್ ಮಾಡಿತ್ತು.
2. 2014ರ ಮಾರ್ಸ್ ಆರ್ಬಿಟ್ ಮಿಷನ್, ಇಸ್ರೋದ ಇನ್ನೊಂದು ಸಾಧನೆ. ಮಂಗಳ ಗ್ರಹದ ವಾತಾವರಣ, ಭೂಪ್ರದೇಶ ಅರ್ಥ ಮಾಡಿಕೊಳ್ಳುವ ಉದ್ದೇಶದ ಬಾಹ್ಯಾಕಾಶ ಯಾನ ಇದಾಗಿತ್ತು.
3. ಚಂದ್ರನ ಪರಿಶೋಧನಾ ಮಿಷನ್ ಎಂದೇ ಕರೆಯಲ್ಪಡುವ ಚಂದ್ರಯಾನ - 1 ಅನ್ನು ಇಸ್ರೋ 2008ರಲ್ಲಿ ಆರಂಭಿಸಿತು. ನವೆಂಬರ್ ನಲ್ಲಿ ಮೂನ್ ಇಂಪ್ಯಾಕ್ಟ್ ಪ್ರೊಬ್ ಸ್ಟಡಿಯ ಪ್ರಕಾರ ಚಂದ್ರನ ವಾತಾವರಣದಲ್ಲಿ ಅಲ್ಪಪ್ರಮಾಣದ ನೀರಿನ ಅಸ್ತಿತ್ವವನ್ನು ಬಹಿರಂಗ ಪಡಿಸಿತು.
4. 1997ರಲ್ಲಿ ಆರ್ಯಭಟ ಉಪಗ್ರಹವನ್ನು ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ಯಶಸ್ವಿಯಾಗಿತ್ತು. ರಷ್ಯಾದ ಅಂತರಿಕ್ಷ ಸಂಸ್ಥೆಯ ಉಡ್ಡಯನ ಕೇಂದ್ರದ ಮೂಲಕ, ಕಾಸ್ಮಾಸ್-3 ಎಂ ಉಡಾವಣಾ ವಾಹನದ ಮೂಲಕ ಕಕ್ಷೆಗೆ ಸೇರಿಸಿ ವಿಶ್ವ ಆಶ್ಚರ್ಯ ಚಕಿತವಾಗಿ ನೋಡುವಂತೆ ಮಾಡಿತು.
5. ವಿಕಾಸ್ ಇಂಜಿನ್, ಇಸ್ರೋ ಅಭಿವೃದ್ಧಿಪಡಿಸಿದ ಶಕ್ತಿಯುತ, ವಿಶ್ವಾಸಾರ್ಹ ಮತ್ತು ದ್ರವಯುಕ್ತ ರಾಕೆಟ್ ಎಂಜಿನ್. ಪೋಲಾರ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್ (PSLV) ಮತ್ತು ಜಿಯೋ ಸಿಂಕ್ರೋನಸ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್ (GSLV) ಸೇರಿದಂತೆ ವಿವಿಧ ಉಡಾವಣಾ ವಾಹನಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಇಸ್ರೋದ ನೂರಾರು ವಿಜ್ಞಾನಿಗಳ ತಂತ್ರಜ್ಞರ ತಂಡ
ಇಸ್ರೋದ ನೂರಾರು ವಿಜ್ಞಾನಿಗಳ ತಂತ್ರಜ್ಞರ ತಂಡ, ನಾಲ್ಕು ವರ್ಷಗಳ ಪರಿಶ್ರಮದೊಂದಿಗೆ, ಒಂದಲ್ಲ ಎರಡಲ್ಲ ಒಟ್ಟು ಸುಮಾರು 615 ಕೋಟಿ ರುಪಾಯಿಗಳನ್ನು ಖರ್ಚು ಮಾಡಿ, ಬರೋಬ್ಬರಿ 3.84 ಲಕ್ಷ ಕಿಮೀ ದೂರದ ಮಹಾಯಾತ್ರೆಯೊಂದಕ್ಕೆ ಕಳುಹಿಸಿ, ಕಳೆದ ನಲವತ್ತು ದಿನದಿಂದ ಕಣ್ರೆಪ್ಪೆಯೂ ಮುಚ್ಚದೇ, ಯಾವುದೇ ಸಮಸ್ಯೆ ಆಗದಂತೆ ನೌಕೆಯು ಸೇಫ್ ಲ್ಯಾಂಡಿಂಗ್ ಆಗುವ ತನಕ ಕಾಯುತ್ತಾ ಕುಳಿತಿದ್ದಾರಲ್ಲಾ.. ಅದೆಂತಹ ಕಮಿಟ್ಮೆಂಟ್ !!
Congratulations and We Indians Proud Of You
ಇಸ್ರೋ ಹಂತ ಹಂತವಾಗಿ ಬೆಳೆದು ಈಗ ವಿಶ್ವದ ಹೆಮ್ಮರ ಬಾಹ್ಯಾಕಾಶ ಸಂಸ್ಥೆಯಾಗಿ ಬೆಳೆದು ನಿಂತಿದೆ. ತನ್ನ ಉಡಾವಣೆಯನ್ನು ಮಾಡಲು ಇಸ್ರೋ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಎತ್ತಿನ ಬಂಡಿಯಲ್ಲಿ ರಾಕೆಟ್ ಬಿಡಿಭಾಗವನ್ನು ಸಾಗಿಸಿ ಈಗ ಈ ಹಂತಕ್ಕೆ ಬಂದು ನಿಂತಿದೆ. ಚಂದ್ರಯಾನ - 2 ವೈಫಲ್ಯಗೊಂಡರೂ ಅಲ್ಲಾದ ತಪ್ಪನ್ನು ಸರಿ ಪಡಿಸಿಕೊಂಡು ಈಗ ವಿಶ್ವಕ್ಕೆ ವಿಶ್ವವೇ ನಿಬ್ಬೆರಗಾಗುವಂತೆ ಬಾಹ್ಯಾಕಾಶ ಲೋಕದಲ್ಲಿ ತನ್ನ ತಾಕತ್ತನ್ನು ಇಸ್ರೋ ಪ್ರದರ್ಶಿಸಿದೆ. Congratulations and We Indians Proud Of You..












Click it and Unblock the Notifications