ಶಬರಿಮಲೆ ಭಕ್ತರಿಗೆ ಉಚಿತ ಸಾರಿಗೆ ವ್ಯವಸ್ಥೆ: ವಿಎಚ್‌ಪಿ ಮನವಿಗೆ ಸುಪ್ರೀಂ ಅಸ್ತು
ಶಬರಿಮಲೆ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಸಾಗಿಸಲು ಉಚಿತ ವಾಹನಗಳ ಸಂಚಾರಕ್ಕೆ ಅನುಮತಿ ಕೋರಿ ವಿಎಚ್‌ಪಿ ಸಲ್ಲಿಸಿರುವ ಮನವಿಗೆ ಸುಪ್ರೀಂ ಕೋರ್ಟ್ ಕೇರಳ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ಯ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ಸಂಘಟನೆಯು ತನ್ನ ಅರ್ಜಿಯನ್ನು ತಿರಸ್ಕರಿಸಿದ 2023 ರ ಏಪ್ರಿಲ್ 13 ರ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿದೆ.

ಗುರುವಾರ ಈ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ವಿಎಚ್‌ಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ.ಚಿತಾಂಬರೇಶ್ ವಾದ ಮಂಡಿಸಿದರು. ಈ ವೇಳೆ ಯಾತ್ರಾರ್ಥಿಗಳಲ್ಲಿ ವೃದ್ಧರು, ಮಕ್ಕಳು ಸೇರಿದಂತೆ ಹಲವರು ದೂರ ಕ್ರಮಿಸಿ ದೇವಸ್ಥಾನಕ್ಕೆ ತೆರಳಬೇಕಿರುವುದರಿಂದ ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಿಂದೂ ಹಕ್ಕುಗಳ ಸಂಘಟನೆ ಸಿದ್ಧವಿದೆ ಎಂದು ಪೀಠದ ಮುಂದೆ ಪ್ರಸ್ತಾಪಿಸಿದರು.
ಈ ಹಿಂದೆ ಕೇರಳ ರಾಜ್ಯ ರಸ್ತೆ ಮಾರ್ಗದ ಬಸ್‌ಗಳು ಪಂಪಾ ಎಂಬ ಸ್ಥಳದಲ್ಲಿ ಲಭ್ಯವಿತ್ತು. ಅಲ್ಲಿಂದ ದೇವಾಲಯಕ್ಕೆ ಆರು ಕಿಲೋಮೀಟರ್ ಪ್ರಯಾಣ ಪ್ರಾರಂಭವಾಗುತ್ತದೆ. ಉತ್ತಮ ಸ್ಥಿತಿಯಲ್ಲಿಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳು ಯಾತ್ರಾರ್ಥಿಗಳಿಂದ ಹೆಚ್ಚಿನ ದರವನ್ನು ವಿಧಿಸುವುದರಿಂದ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಶಬರಿಮಲೆಯಕ್ಕೆ ಲಕ್ಷ ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಅವರು ಕೆಎಸ್‌ಆರ್‌ಟಿಸಿ ಬಸ್‌ಗಳಿಗಾಗಿ ಸರದಿಯಲ್ಲಿ 28-30 ಗಂಟೆಗಳಿಗೂ ಹೆಚ್ಚು ಕಾಲ ಕಾಯಬೇಕಾಗಿದೆ. ಅದು ಉತ್ತಮ ಸ್ಥಿತಿಯಲ್ಲ ಎಂದು ಅವರು ಹೇಳಿದರು.
ಚಿತಾಂಬರೇಶ್ ಸಲಹೆಗೆ ಸಮ್ಮತಿಸಿದ ನಂತರ ಪೀಠ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪಿಕ್ ಆ್ಯಂಡ್ ಡ್ರಾಪ್ ಸೌಲಭ್ಯ ಮಾತ್ರ ಇರಬೇಕು ಹಾಗೂ ದಾರಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬಾರದು ಎಂದು ಹಿರಿಯ ವಕೀಲರಿಗೆ ಪೀಠ ಹೇಳಿತು.
ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಶಬರಿಮಲೆ ಕೂಡಾ ಒಂದು. ಕೋಟ್ಯಾನುಕೋಟಿ ಭಕ್ತರ ಆರಾಧ್ಯ ಮೂರ್ತಿ ಪಂದಳ ಕಂದ ಅಯ್ಯಪ್ಪ. ಶಬರಿಮಲೆಯ ದರ್ಶನದಿಂದ ಅದೆಷ್ಟೋ ಭಕ್ತರು ಮನಸ್ಸಿಗೆ ನೆಮ್ಮದಿ ಕಾಣುತ್ತಾರೆ. ಬೆಳಗುವ ಮಕರ ಜ್ಯೋತಿಯ ದರ್ಶನ ಕೂಡಾ ಎಲ್ಲರನ್ನೂ ಪುನೀತಗೊಳಿಸುವ ಕ್ಷಣ. ಕಠಿಣ ವ್ರತಾಚರಣೆಯ ಮೂಲಕ ಏಕಚಿತ್ತದಿಂದ ಅಯ್ಯಪ್ಪನನ್ನು ಧ್ಯಾನಿಸಿ, ಇರುಮುಡಿಯನ್ನು ಹೊತ್ತು ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ, ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಇದು ಎಲ್ಲಾ ಭಕ್ತರೂ ಪುಳಕಗೊಳ್ಳುವ ಕ್ಷಣ ಕೂಡಾ ಹೌದು. ಈ ಅದ್ಬುತ ಗಳಿಗೆಗಾಗಿ ಭಕ್ತರು ವರ್ಷವಿಡೀ ಕಾಯಬೇಕು.
ಅಯ್ಯಪ್ಪ ದೇಗುಲವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಕಳೆದ ಡಿಸೆಂಬರ್ 25 ರವರೆಗೆ ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ಆದಾಯ ಬಂದಿದೆ ಎಂದು ತಿಳಿಸಿದೆ.












Click it and Unblock the Notifications