ತೆಲಂಗಾಣ ಮಾಜಿ ರಾಜ್ಯಪಾಲೆ ಈಗ ತಮಿಳುನಾಡಿನಿಂದ ಬಿಜೆಪಿ ಅಭ್ಯರ್ಥಿ!
ಚೆನ್ನೈ, ಮಾರ್ಚ್ 21: ತೆಲಂಗಾಣದ ಮಾಜಿ ರಾಜ್ಯಪಾಲೆ ತಮಿಳುನಾಡಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ತಮಿಳುನಾಡಿನ 9 ಕ್ಷೇತ್ರಗಳಿಗೆ ಗುರುವಾರ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ತಮಿಳ್ ಇಸೈ ಸೌಂದರರಾಜನ್‌ಗೆ ಸಹ ಟಿಕೆಟ್ ನೀಡಿದೆ.
ತಮಿಳ್ ಇಸೈ ಸೌಂದರರಾಜನ್ ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2024ರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ರಾಜ್ಯಪಾಲರ ಹುದ್ದೆಯನ್ನು ತೊರೆದು ಸಂಸತ್ ಸದಸ್ಯರಾಗುವ ತಮಿಳ್ ಇಸೈ ಸೌಂದರರಾಜನ್ ತೀರ್ಮಾನ ಅಚ್ಚರಿಗೆ ಕಾರಣವಾಗಿದೆ.

ತಮಿಳ್ ಇಸೈ ಸೌಂದರರಾಜನ್ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದಾಗಲೇ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಗುರುವಾರ ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 9 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತಮಿಳ್ ಇಸೈ ಸೌಂದರರಾಜನ್ ಟಿಕೆಟ್ ಪಡೆದಿದ್ದಾರೆ.
ಪಟ್ಟಿಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈಗೆ ಸಹ ಟಿಕೆಟ್ ನೀಡಲಾಗಿದೆ. ಅವರು ಕೊಯಮತ್ತೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 20 ಸೀಟುಗಳಲ್ಲಿ ಕಣಕ್ಕಿಳಿಯಲಿದೆ. ಉಳಿದ ಸೀಟುಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ.
ತಮಿಳ್ ಇಸೈ ಸೌಂದರರಾಜನ್: ಮಾರ್ಚ್ 18ರ ಸೋಮವಾರ ತೆಲಂಗಾಣದ ರಾಜಭವನ ರಾಜ್ಯಪಾಲೆ ತಮಿಳ್ ಇಸೈ ಸೌಂದರರಾಜನ್ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆಯ ಮೂಲಕ ಮಾಹಿತಿ ನೀಡಿತ್ತು. ತೆಲಂಗಾಣ ಮತ್ತು ಪುದುಚೇರಿಯ ರಾಜ್ಯಪಾಲೆಯಾಗಿ ತಮಿಳ್ ಇಸೈ ಸೌಂದರರಾಜನ್ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಮತ್ತು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸಲ್ಲಿಕೆ ಮಾಡಿದ್ದರು.
2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಮಿಳ್ ಇಸೈ ಸೌಂದರರಾಜನ್ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಗುರುವಾರ ಬಿಜೆಪಿ ಅಧಿಕೃತವಾಗಿ ತಮಿಳ್ ಇಸೈ ಸೌಂದರರಾಜನ್ ಹೆಸರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.
ತಮಿಳ್ ಇಸೈ ಸೌಂದರರಾಜನ್ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ಇದೇ ಮೊದಲಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಅವರು ತಮಿಳುನಾಡಿನ ತೂತುಕುಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 215,934 ಮತಗಳನ್ನು ಪಡೆದು 563,143 ಮತಗಳನ್ನು ಪಡೆದ ಡಿಎಂಕೆ ಅಭ್ಯರ್ಥಿ ಕನಿಮೋಳಿ ವಿರುದ್ಧ ಸೋಲು ಕಂಡಿದ್ದರು.
ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್ ಇಸೈ ಸೌಂದರರಾಜನ್ ಮಾರ್ಚ್ 20ರ ಬುಧವಾರ ಬಿಜೆಪಿ ಸೇರಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತಮಿಳ್ ಇಸೈ ಸೌಂದರರಾಜನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಗುರುವಾರ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.
ತಮಿಳ್ ಇಸೈ ಸೌಂದರರಾಜನ್ ಬಿಜೆಪಿ ಸೇರ್ಪಡೆ ಕುರಿತು ಡಿಎಂಕೆ ಮತ್ತು ಎಡಪಕ್ಷಗಳು ಟೀಕೆಗಳನ್ನು ಮಾಡಿದ್ದರು. ಕೆ. ಅಣ್ಣಾಮಲೈ ಪ್ರತಿಕ್ರಿಯೆ ನೀಡಿ, "ಉನ್ನತ ಹುದ್ದೆಯಲ್ಲಿದ್ದವರು ಅಧಿಕಾರ ಬಿಟ್ಟು ಸಾಮಾನ್ಯ ವ್ಯಕ್ತಿಯಾಗಿ ಮತ್ತೆ ಕೆಲಸ ಮಾಡುವುದು ಸಂತಸದ ವಿಚಾರ. ಹೀಗೆ ಕೆಲಸ ಮಾಡಲು ಅವಕಾಶ ಇರುವುದು ಬಿಜೆಪಿಯಲ್ಲಿ ಮಾತ್ರ" ಎಂದು ಹೇಳಿದ್ದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ತಮಿಳ್ ಇಸೈ ಸೌಂದರರಾಜನ್ ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ಷೇತ್ರವನ್ನು ಸಹ ಬದಲಾವಣೆ ಮಾಡಿದ್ದು, ಚುನಾವಣೆಯಲ್ಲಿ ಅವರಿಗೆ ಗೆಲುವು ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications