ಆರ್‌ಎಸ್‌ಎಸ್ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಇಂದಿರಾ ಗಾಂಧಿ: ಇಲ್ಲಿದೆ ಮಹತ್ವದ ಮಾಹಿತಿ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹಲವಾರು ಆರ್‌ಎಸ್‌ಎಸ್ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ಪತ್ರಕರ್ತೆ ನೀರ್ಜಾ ಚೌಧರಿ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ. ಅವರು ಬರೆದಿರುವ 'ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್' ಎಂಬ ಪುಸ್ತಕದಲ್ಲಿ ರಾಷ್ಟ್ರ ರಾಜಕಾರಣದ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಬಗ್ಗೆ ಬರೆದಿರುವ ಚಾಪ್ಟರ್‌ನಲ್ಲಿ ಬಹುತೇಕರಿಗೆ ಗೊತ್ತಿರದ ಮಹತ್ವದ ಸಂಗತಿಗಳನ್ನು ಹೊರಹಾಕಿದ್ದಾರೆ. ಆರ್‌ಎಸ್‌ಎಸ್ ನಾಯಕರೊಂದಿಗೆ ಇಂದಿರಾ ಗಾಂಧಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ, ಅವರು ಅದನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ಅವರು ಸಂಘದ ನಾಯಕರೊಂದಿಗಿನ ಬಾಂಧವ್ಯದ ಕುರಿತು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಇಂದಿರಾ ಗಾಂಧಿ ಹಲವಾರು ಸಂದರ್ಭಗಳಲ್ಲಿ ಆರ್‌ಎಸ್‌ಎಸ್ ಅನ್ನು ಬಳಸಿಕೊಂಡರು. ಆದರೆ, ಸಂಘದೊಂದಿಗೆ ಎಚ್ಚರಿಕೆಯಿಂದ ಅಂತರವನ್ನು ಕಾಯ್ದುಕೊಂಡಿದ್ದರು ಎಂದು ನೀರ್ಜಾ ಚೌಧರಿ ತಿಳಿಸಿದ್ದಾರೆ.
'ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಇಂದಿರಾ ಗಾಂಧಿ ಅವರಿಗೆ ಹಲವು ಬಾರಿ ಪತ್ರ ಬರೆದಿದ್ದರು. ಕೆಲವು ಆರ್‌ಎಸ್‌ಎಸ್ ನಾಯಕರು ಕಪಿಲ್ ಮೋಹನ್ ಮೂಲಕ ಸಂಜಯ್ ಗಾಂಧಿ ಸಂಪರ್ಕಿಸುತ್ತಿದ್ದರು. ಈ ಎಲ್ಲ ಬೆಳವಣಿಗೆಗಳಿಗೆ ಇಂದಿರಾ ಗಾಂಧಿ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಆದರೆ, ಸಂಘದೊಂದಿಗೆ ಅಂತರವನ್ನು ಕಾಪಾಡಿಕೊಂಡೇ ಇದ್ದರು' ಎಂದು ಚೌಧರಿ ಬರೆದಿದ್ದಾರೆ.
'1980ರಲ್ಲಿ ಆರ್‌ಎಸ್‌ಎಸ್ ನಾಯಕರು ಇಂದಿರಾ ಗಾಂಧಿ ಅವರು ಸಹಾಯಕ್ಕೆ ಬಂದರು. ಅವರು ಸಹ ಆರ್‌ಎಸ್ಎಸ್ ಅನ್ನು ಎಚ್ಚರಿಕೆಯಿಂದ ಬಳಸಿಕೊಂಡರು. ಆರ್‌ಎಸ್ಎಸ್ ಸಿದ್ದಾಂತವನ್ನು ಒಪ್ಪದೇ ಹೋದರೂ, ಸಂಘದ ನಾಯಕರ ಸಹಾಯವನ್ನು ಗುಟ್ಟಾಗೇ ಸ್ವೀಕರಿಸಿದರು' ಎಂಬ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

1980 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಇಮೇಜ್ ಅನ್ನು ಬದಲಿಸಿಕೊಳ್ಳಲು ನೋಡುತ್ತಿದ್ದರು. ಅವರು ಹೆಚ್ಚು ಜಾತ್ಯಾತೀತರಾಗಲು ಯತ್ನಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಅನ್ನು ಹಿಂದೂಕರಣಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ಪುಸ್ತಕವು ಹೇಳಿದೆ.
1980 ರಲ್ಲಿ ಇಂದಿರಾ ಗಾಂಧಿ ಅಧಿಕಾರಕ್ಕೆ ಬರಲು ಆರ್‌ಎಸ್‌ಎಸ್ ಸಹಾಯ ಮಾಡಿತು ಎಂಬುದಾಗಿ ಇಂದಿರಾ ಗಾಂಧಿಯವರ ಆಪ್ತ ಸಹಾಯಕ ಅನಿಲ್ ಬಾಲಿ ಹೇಳಿದ್ದಾರೆ ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ.
'ಆರ್‌ಎಸ್‌ಎಸ್ ತನ್ನನ್ನು ಬೆಂಬಲಿಸುತ್ತದೆ ಎಂಬುದಾಗಿ ಇಂದಿರಾ ಗಾಂಧಿ ತಿಳಿದಿದ್ದರು. ಆದರೆ, ಅವರು ಅದನ್ನು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿಲ್ಲ. ಆರ್‌ಎಸ್‌ಎಸ್ ಬೆಂಬಲವಿಲ್ಲದಿದ್ದರೆ 353 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಿದ್ದರು' ಎಂದು ಬಾಲಿ ತಿಳಿಸಿದ್ದಾರೆ.
'ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಅವರು ಒಮ್ಮೆ ತಮ್ಮ ಮಾತುಕತೆಯ ಸಂದರ್ಭದಲ್ಲಿ, ಇಂದಿರಾ ಗಾಂಧಿ ಒಬ್ಬ ಕಟ್ಟಾ ಹಿಂದೂ ಎಂಬುದಾಗಿ ಬಾಲಿ ಹೇಳಿದ್ದಾರೆ' ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ.
1971 ರಲ್ಲಿ ಬಾಂಗ್ಲಾದೇಶವನ್ನು ಪ್ರತ್ಯೇಕಗೊಳಿಸುವ ಮೂಲಕ ಪಾಕಿಸ್ತಾನವನ್ನು ದುರ್ಬಲಗೊಳಿಸಿದ್ದಕ್ಕಾಗಿ ಆರ್‌ಎಸ್‌ಎಸ್ ನಾಯಕರು ಇಂದಿರಾ ಗಾಂಧಿ ಅವರನ್ನು ಮೆಚ್ಚಿದ್ದರು ಎಂದು ಚೌಧರಿ ಹೇಳಿದ್ದಾರೆ.
1974 ರಲ್ಲಿ ಪರಮಾಣು ಅಣ್ವಸ್ತ್ರ ಪ್ರಯೋಗಿಸುವ ಮೂಲಕ ಇಂದಿರಾ ಗಾಂಧಿ ಅವರು ಆರ್‌ಎಸ್‌ಎಸ್‌ನ ಮೆಚ್ಚುಗೆಗೆ ಪಾತ್ರವಾಗಿದ್ದರು ಎಂದು ಚೌಧರಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.












Click it and Unblock the Notifications