G20 Dinner; ಔತಣಕೂಟಕ್ಕೆ ಮಾಜಿ ಪಿಎಂ ದೇವೇಗೌಡ ಗೈರು
ಬೆಂಗಳೂರು, ಸೆಪ್ಟೆಂಬರ್ 08; ಜಿ 20 ಶೃಂಗಸಭೆಗೆ ರಾಷ್ಟ್ರ ರಾಜಧಾನಿಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಸೆಪ್ಟೆಂಬರ್ 9ರ ಶನಿವಾರ ಮತ್ತು ಸೆಪ್ಟೆಂಬರ್ 10ರ ಭಾನುವಾರ ದೆಹಲಿಯ 'ಭಾರತ್ ಮಂಟಪ'ದಲ್ಲಿ ಶೃಂಗಸಭೆ ನಡೆಯುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಸೆಪ್ಟೆಂಬರ್ 9ರ ಶನಿವಾರ ಜಿ 20 ಶೃಂಗಸಭೆಯ ಅತಿಥಿಗಳಿಗೆ ಔತಣ ಕೂಟ ಆಯೋಜನೆ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟದ ಎಲ್ಲಾ ಸಚಿವರು, ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರಿಗೆ ಔತಣ ಕೂಟದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

ವಿರೋಧ ಪಕ್ಷಗಳ ನಾಯಕರು, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್. ಡಿ. ದೇವೇಗೌಡರನ್ನು ಸಹ ಔತಣ ಕೂಟಕ್ಕೆ ರಾಷ್ಟ್ರಪತಿಗಳ ಕಛೇರಿಯಿಂದ ಆಹ್ವಾನಿಸಲಾಗಿದೆ. ಆದರೆ ಎಚ್. ಡಿ. ದೇವೇಗೌಡರು ಔತಣ ಕೂಟಕ್ಕೆ ಗೈರಾಗುತ್ತಿದ್ದಾರೆ.
ದೇವೇಗೌಡರ ಟ್ವೀಟ್; ಶುಕ್ರವಾರ ಬೆಳಗ್ಗೆ ರಾಜ್ಯಸಭಾ ಸದಸ್ಯ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಟ್ವೀಟ್ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
I will not be attending the G20 dinner organised by the Hon. President of India Draupadi Murmuji, on 09 September 2023, due to health reasons. I have already communicated this to the government. I wish the G20 summit a grand success. @PMOIndia @rashtrapatibhvn
— H D Deve Gowda (@H_D_Devegowda) September 8, 2023
'ನಾನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 9ರಂದು ಆಯೋಜಿಸಿರುವ ಜಿ 20 ಔತಣಕೂಟದಲ್ಲಿ ಅನಾರೋಗ್ಯದ ಕಾರಣ ಪಾಲ್ಗೊಳ್ಳುತ್ತಿಲ್ಲ. ಈ ಕುರಿತು ನಾನು ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ. ಜಿ 20 ಶೃಂಗ ಸಭೆ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ' ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.
ದ್ರೌಪದಿ ಮುರ್ಮು ಆಯೋಜಿಸಿರುವ ಔತಣಕೂಟದಲ್ಲಿ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್, ಎಂ. ಕೆ. ಸ್ಟಾಲಿನ್, ಮಮತಾ ಬ್ಯಾನರ್ಜಿ, ಹೇಮಂತ್ ಸೊರೆನ್, ಭಗವಂತ್ ಮಾನ್, ಅರವಿಂದ್ ಕೇಜ್ರಿವಾಲ್ ಪಾಲ್ಗೊಳ್ಳಲಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಶನಿವಾರ ನಡೆಯುವ ಔತಣಕೂಟಕ್ಕೆ ಆಹ್ವಾನ ನೀಡಿಲ್ಲ ಎಂದು ಅವರ ಕಛೇರಿ ಹೇಳಿದೆ. ಬೇರೆ ಯಾವುದೇ ರಾಜಕೀಯ ಪಕ್ಷಗಳ ನಾಯಕರಿಗೆ ಸಹ ಔತಣ ಕೂಟಕ್ಕೆ ಆಹ್ವಾನ ನೀಡಲಾಗಿಲ್ಲ ಎಂಬ ಮಾಹಿತಿ ಇದೆ.
ಜಿ 20 ಭಾರತ ಆಯೋಜಿಸಿರುವ ಉನ್ನತ ಮಟ್ಟದ ಅಂತರಾಷ್ಟ್ರೀಯ ಶೃಂಗಸಭೆಗಳಲ್ಲಿ ಒಂದಾಗಿದೆ. ಜಿ 20 ಗುಂಪಿನಲ್ಲಿ 19 ದೇಶಗಳಿವೆ (ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ ಗಣರಾಜ್ಯ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ) ಮತ್ತು ಐರೋಪ್ಯ ಒಕ್ಕೂಟವನ್ನು ಒಳಗೊಂಡಿದೆ.
2022 ನವೆಂಬರ್ 16ರಂದು ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಲಾಯಿತು. ನಂತರ ಭಾರತದ ಒಂದು ವರ್ಷದ ಜಿ 20 ಅಧ್ಯಕ್ಷತೆಯು 2022ರ ಡಿಸೆಂಬರ್ 1 ರಂದು ಪ್ರಾರಂಭಗೊಂಡಿದೆ ಮತ್ತು 2023ರ ನವೆಂಬರ್ 30ರವರೆಗೆ ಮುಂದುವರಿಯುತ್ತದೆ.
ಜಿ 20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶನಿವಾರ ಸಂಜೆ 6.40ರ ಸುಮಾರಿಗೆ ದೆಹಲಿಗೆ ಆಗಮಿಸಲಿದ್ದಾರೆ. ಶೃಂಗಸಭೆ ಹಿನ್ನಲೆಯಲ್ಲಿ ದೆಹಲಿಯಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಭಾರತದ ವೈವಿಧ್ಯ, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಅತಿಥಿಗಳಿಗೆ ಪ್ರದರ್ಶಿಸಲಾಗುತ್ತದೆ. ಸಿರಿಧಾನ್ಯ ಆಧಾರಿತ ಭಕ್ಷ್ಯಗಳನ್ನು ಭೋಜನದ ಪಟ್ಟಿಯಲ್ಲಿ ಸೇರಿಸಲಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಜಿ 20 ಶೃಂಗ ಸಭೆಯಲ್ಲಿ 15 ಪ್ರಮುಖ ಸಭೆಗಳನ್ನು ನಡೆಸಲಿದ್ದಾರೆ. ಅಮೆರಿಕ ಮತ್ತು ಫ್ರಾನ್ಸ್ ಅಧ್ಯಕ್ಷರ ಜೊತೆಗಿನ ಸಭೆಗಳು ಇವುಗಳಲ್ಲಿ ಸೇರಿವೆ.












Click it and Unblock the Notifications