ಸರ್ಜಿಕಲ್ ಸ್ಟ್ರೈಕ್: ಇಮ್ರಾನ್ ಖಾನ್ ಗೆ ಶೇಮ್ ಶೇಮ್ ಎಂದ ಪಾಕ್ ಸಂಸತ್ ಸದಸ್ಯರು!
ಮಂಗಳವಾರ (ಫೆ 26) ನಸುಕಿನಲ್ಲಿ ಭಾರತೀಯ ವಾಯುಪಡೆ, ಪಾಕ್ ಕೃಪಾಪೋಷಿತ ಉಗ್ರರನ್ನು ಚೆಂಡಾಡಿದ ಬೆನ್ನಲ್ಲೇ, ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಸಾಲುಸಾಲು ಸಭೆಯನ್ನು, ಸರ್ವಪಕ್ಷಗಳ ಮುಖಂಡರ ಜೊತೆ ಚರ್ಚಿಸುತ್ತಿದ್ದರೆ, ಪ್ರಧಾನಿ ಮೋದಿ, ದೆಹಲಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೆಟ್ರೋದಲ್ಲಿ ಸಂಚರಿಸಿ ಕೂಲ್ ಆಗಿದ್ದರು.
ಭಾರತದಲ್ಲಿ ವಿರೋಧ ಪಕ್ಷಗಳೆಲ್ಲರೂ ಒಗ್ಗಟ್ಟಾಗಿದ್ದರೆ, ಪಾಕಿಸ್ತಾನದಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಗೆ ಮತ್ತು ಅವರ ತೆಹ್ರಿಕ್ - ಇ - ಇನ್ಸಾಫ್ ಪಕ್ಷದ ಸದಸ್ಯರಿಗೆ 'ಶೇಮ್ ಶೇಮ್' ಎಂದು ಸಂಸತ್ತಿನಲ್ಲಿ ವಿರೋಧ ಪಕ್ಷದ ಸದಸ್ಯರು ಸ್ವಾಗತಿಸಿದರು. ಈ ಸಮಯದಲ್ಲಿ ಭಾರತದಂತೆ ನಾವೆಲ್ಲರೂ ಒಗ್ಗಟ್ಟಾಗಿರಬೇಕೆಂದು ಆಡಳಿತ ಪಕ್ಷದವರ ಮನವಿಗೆ ವಿರೋಧ ಪಕ್ಷದವರು ಡೋಂಟ್ ಕೇರ್ ಅಂದರು.
ಇದು ನಮ್ಮ ದೇಶ, ಸಾರ್ವಭೌಮತ್ವ, ಸಮಗ್ರತೆಗೆ ಬೆದರಿಕೆ ಹಾಕುವ ಘಟನೆ, ಇಂತಹ ಸಮಯದಲ್ಲಿ ಒಗ್ಗಟ್ಟಿನಿಂದ ಇರಬೇಕು, ನಮ್ಮ ವಿರೋಧ ರಾಷ್ಟ್ರಕ್ಕೆ ದಿಟ್ಟ ಉತ್ತರವನ್ನು ನೀಡಬೇಕಿದೆ ಎಂದು ರಕ್ಷಣಾ ರಾಜ್ಯ ಸಚಿವ ಕ್ವಾಜಾ ಆಸಿಫ್ ಸಂಸತ್ತಿನಲ್ಲಿ ಮನವಿ ಮಾಡಿದರು.
ಇದಾದ ನಂತರ ಮಾಜಿ ವಿದೇಶಾಂಗ ಖಾತೆಯ ಸಚಿವೆ ಹೀನಾ ರಬ್ಬಾನಿ ಖರ್ ಸಂಸತ್ತಿನಲ್ಲಿ ಭಾಷಣ ಮಾಡುತ್ತಾ, ಪ್ರಭಲ ರಾಷ್ಟ್ರವೊಂದು ಲೈನ್ ಆಫ್ ಕಂಟ್ರೋಲ್ ದಾಟಿ ನಮ್ಮ ಮೇಲೆ ದಾಳಿ ಮಾಡಿದೆ. ಮೋದಿಯ 'ಇಂಡಿಯಾ', ಆಕ್ರಮಣಕಾರಿ 'ಇಂಡಿಯಾ' ಎಂದು ಹೀನಾ ಹೇಳುತ್ತಿದ್ದಂತೆಯೇ ಆಜಾನ್ ಮೊಳಗಲು ಆರಂಭಿಸಿತು. ಹೀನಾ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಮಾತನ್ನು ಪ್ರಸ್ತುತ ಪಡಿಸಿದರು ಎಂದು ಅಲ್ಲಿನ ಮಾಧ್ಯಮಗಳು ವ್ಯಾಖ್ಯಾನಿಸುತ್ತಿದೆ. ಭಾಷಣದ ಕೆಲವೊಂದು ಪ್ರಮುಖ ಅಂಶಗಳು:

ಆಜಾನ್ ಮುಗಿದ ನಂತರ ಭಾಷಣ ಮುಂದುವರಿಸಿದ ಹೀನಾ ರಬ್ಬಾನಿ
ಆಜಾನ್ ಮುಗಿದ ನಂತರ ಭಾಷಣ ಮುಂದುವರಿಸಿದ ಹೀನಾ ರಬ್ಬಾನಿ, ಭಾರತ ನಡೆಸಿದ ದಾಳಿಯ ಈ ವೇಳೆ ನಾವೆಲ್ಲಾ ಒಗ್ಗಟ್ಟಾಗಿರಬೇಕು ಎನ್ನುವುದನ್ನು ಒಪ್ಪಿಕೊಳ್ಳೋಣ, ಆದರೆ ಇದು ನಮ್ಮ ದೌರ್ಬಲ್ಯ ಆಗಬಾರದು. ಅಲ್ಲಿನ ಪ್ರಧಾನಿ ಮೋದಿ ತೋರಿದ ಆಕ್ರಮಣಕಾರಿ ಧೋರಣೆ, ಅಲ್ಲಿ ಜನತೆ ಸಂಭ್ರಮಿಸುವ ರೀತಿ, ವಿಶ್ವದಲ್ಲೆಲ್ಲಾ ಹರಡಿದ ಈ ಸುದ್ದಿಯಿಂದಾಗಿ, ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಎಲ್ಲಿ ನಿಂತಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಬೇಕು.

ಮೋದಿಯವರ ಆಕ್ರಮಣಕಾರಿ ನೀತಿಯ ಪರಿಚಯ ಎಲ್ಲಾ ಕಡೆ ಗೋಚರಿಸುತ್ತಿದೆ
ಗೋವನ್ನು ದೇವರೆಂದು ಪೂಜಿಸುವ ದೇಶವದು, ಮೋದಿಯವರ ಆಕ್ರಮಣಕಾರಿ ನೀತಿಯ ಪರಿಚಯ ಎಲ್ಲಾ ಕಡೆ ಗೋಚರಿಸುತ್ತಿದೆ. ನಮ್ಮೊಳಗಿನ ಕಚ್ಚಾಟದಿಂದಾಗಿ, ಭಾರತ ನಮ್ಮ ದೇಶದೊಳಗೆ ನುಗ್ಗಿ ದಾಳಿ ನಡೆಸಿದೆ. ಭಾರತದಲ್ಲಿ ಏನಾದರೂ ದಾಳಿ ನಡೆದರೆ ಅದಕ್ಕೂ ಪಾಕಿಸ್ತಾನವನ್ನು ದೂರಲಾಗುತ್ತದೆ, ಇದಕ್ಕೆ ಕಡಿವಾಣ ಹಾಕಬೇಕಿದೆ - ಹೀನಾ ರಬ್ಬಾನಿ.

ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರಕಾರ ತೆಗೆದುಕೊಂಡು ಹೋಗಿದೆ
ಭಾರತಕ್ಕೆ ಕಠಿಣ ಸಂದೇಶವನ್ನು ರವಾನಿಸಬೇಕಾಗಿದೆ, ಅದು ಈ ಸಂಸತ್ತಿನಿಂದಲೇ ನಡೆಯಲಿ ಎಂದು ಆಗ್ರಹಿಸಿದ ಹೀನಾ ರಬ್ಬಾನಿ, ಭಾರತದೊಳಗೆ ಪ್ರಮುಖವಾಗಿ ಮುಸ್ಲಿಮರ ಮೇಲೆ ಏನು ಆಕ್ರಮಣಕಾರಿ ಧೋರಣೆ ತಾಳಲಾಗುತ್ತಿದೆಯೋ, ಅದನ್ನು ಇನ್ನೂ ಒಂದು ಹೆಜ್ಜೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಸರಕಾರ ತೆಗೆದುಕೊಂಡು ಹೋಗಿದೆ ಎನ್ನುವುದನ್ನು ನಾವೆಲ್ಲಾ ಒಪ್ಪಿಕೊಳ್ಳಬೇಕಿದೆ - - ಹೀನಾ ರಬ್ಬಾನಿ.

ಮೋದಿ ಸರಕಾರಕ್ಕೆ ಕಾಶ್ಮೀರಿಗಳು ಬೇಕಾಗಿಲ್ಲ, ಬದಲಿಗೆ ಕಾಶ್ಮೀರ ಬೇಕಾಗಿದೆ
ಮೋದಿ ಸರಕಾರಕ್ಕೆ ಕಾಶ್ಮೀರಿಗಳು ಬೇಕಾಗಿಲ್ಲ, ಬದಲಿಗೆ ಕಾಶ್ಮೀರ ಬೇಕಾಗಿದೆ. ನಮ್ಮ ಭೌಗೋಳಿಕ ಪ್ರದೇಶವನ್ನು ದಾಟಿ ಬಂದರೆ, ಯಾವ ರೀತಿ ಕ್ರಮ ನಾವು ತೆಗೆದುಕೊಳ್ಳುತ್ತೇವೆ ಎನ್ನುವ ಪರಿಚಯ ಭಾರತಕ್ಕೆ ಆಗಬೇಕಿದೆ. ನಾವೆಲ್ಲಾ ಒಗ್ಗಟ್ಟಾಗಿರಬೇಕೆಂದು ಬಯಸುವ ಆಡಳಿತ ಪಕ್ಷ, ದೇಶದ ಭದ್ರತೆಯ ವಿಚಾರದಲ್ಲಿ ಸರಕಾರದ ಕ್ರಮವೇನು ಎನ್ನುವುದನ್ನೂ ಸಂಸತ್ತಿನಲ್ಲಿ ವಿವರಿಸಲಿ - ಹೀನಾ ರಬ್ಬಾನಿ.

ಪಾಕ್ ಸಂಸತ್ತಿನಲ್ಲಿ, ಭಾರತ ಮತ್ತು ಮೋದಿ ಬಗ್ಗೆ ಮಾತನಾಡುತ್ತಿದ್ದಂತೆಯೇ, ಆಜಾನ್ ಮೊಳಗಿದೆ
ಆಜಾನ್ ಮೊಳಗುತ್ತಿದ್ದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ನಿಲ್ಲಿಸಿದ ಹಲವು ಉದಾಹರಣೆಗಳಿವೆ. ಹಲವು ಸಾರ್ವಜನಿಕ ಸಭೆಯಲ್ಲಿ ಆಜಾನ್ ವೇಳೆ, ತಮ್ಮ ಭಾಷಣವನ್ನು ನಿಲ್ಲಿಸಿ, ಮತ್ತೆ ಮುಂದುವರಿಸುತ್ತಿದ್ದರು. ಈಗ, ಪಾಕ್ ಸಂಸತ್ತಿನಲ್ಲಿ, ಭಾರತ ಮತ್ತು ಮೋದಿ ಬಗ್ಗೆ ಮಾತನಾಡುತ್ತಿದ್ದಂತೆಯೇ, ಆಜಾನ್ ಮೊಳಗಿದೆ.












Click it and Unblock the Notifications