ದಕ್ಷಿಣ ಕನ್ನಡದ ಮಾಜಿ ಡಿಸಿ ತಮಿಳುನಾಡಿನಿಂದ ಲೋಕಸಭೆಗೆ ಸ್ಪರ್ಧೆ
ಚೆನ್ನೈ, ಮಾರ್ಚ್ 24: ಲೋಕಸಭೆ ಚುನಾವಣೆ 2024ಕ್ಕೆ ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಮಾಜಿ ಐಎಎಸ್ ಅಧಿಕಾರಿಗೆ ಪಕ್ಷ ಟಿಕೆಟ್ ನೀಡಿದೆ. ಅವರು ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು.
ಶನಿವಾರ ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮಿಳುನಾಡಿನ ತಿರುವಳ್ಳೂರು ಕ್ಷೇತ್ರದಿಂದ ಸಸಿಕಾಂತ್ ಸೆಂಥಿಲ್ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಐಎಎಸ್ ಅಧಿಕಾರಿಯಾಗಿದ್ದ ಅವರು 2019ರಲ್ಲಿ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ್ದರು.

2009ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್. ಮೂಲತಃ ತಮಿಳುನಾಡಿನವರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗಲೇ ನಾಗರೀಕ ಸೇವೆಗೆ ರಾಜೀನಾಮೆ ನೀಡಿದ್ದರು. ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.
2017ರಿಂದ ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸಸಿಕಾಂತ್ ಸೆಂಥಿಲ್ ತಮ್ಮ ಕೆಲಸಗಳ ಮೂಲಕವೇ ಪ್ರಸಿದ್ಧಿ ಪಡೆದಿದ್ದರು. ಅವರು ರಾಜೀನಾಮೆ ನೀಡುವಾಗಲೇ ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿ ಮುಂದಿನ ರಾಜಕೀಯ ನಡೆಯ ಬಗ್ಗೆಯೂ ಚರ್ಚಿಸಿದ್ದರು.
ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ: 2023ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗೆಸ್ ಪಕ್ಷ ಪೂರ್ಣ ಬಹುಮತ ಪಡೆದು ಗೆಲುವು ಸಾಧಿಸಿದೆ. ಈ ಗೆಲುವಿನಲ್ಲಿ ಸಸಿಕಾಂತ್ ಸೆಂಥಿಲ್ ಶ್ರಮವೂ ಅಡಗಿದೆ ಎಂದರೆ ಎಲ್ಲರೂ ನಂಬಲೇಬೇಕು.
ಹೌದು ಕಾಂಗ್ರೆಸ್ ಸೇರಿದ್ದ ಸಸಿಕಾಂತ್ ಸೆಂಥಿಲ್ ವಿಧಾನಸಭೆ ಚುನಾವಣೆ ಸಮಯದಲ್ಲಿ ಕರ್ನಾಟಕ ಕಾಂಗ್ರೆಸ್ ವಾರ್ ರೂಂನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿಯೂ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯನ್ನು ಅವರು ನೋಡಿಕೊಂಡಿದ್ದರು.
ಕಾಂಗ್ರೆಸ್ ಸೇರಿದ್ದ ಸಸಿಕಾಂತ್ ಸೆಂಥಿಲ್ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಅವರು ತಿರುವಳ್ಳೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿದಿದ್ದಾರೆ.
ಕರ್ನಾಟಕದಲ್ಲಿ ಕೆಲಸ ಮಾಡಿದ ಒಬ್ಬರು ಐಪಿಎಸ್ ಮತ್ತು ಒಬ್ಬರು ಐಎಸ್ ಅಧಿಕಾರಿಗಳು ಈ ಬಾರಿ ತಮಿಳುನಾಡಿನಲ್ಲಿ ಲೋಕಸಭಾ ಚುನಾವಣಾ ಕಣದಲ್ಲಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ. ಸಸಿಕಾಂತ್ ಸೆಂಥಿಲ್ ತಿರುವಳ್ಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ.
ಸಸಿಕಾಂತ್ ಸೆಂಥಿಲ್ ಸ್ಪರ್ಧಿಸುತ್ತಿರುವ ತಿರುವಳ್ಳೂರು ಕ್ಷೇತ್ರ ಸದ್ಯ ಕಾಂಗ್ರೆಸ್ ವಶದಲ್ಲಿಯೇ ಇದೆ. 2019ರಲ್ಲಿ ಕಾಂಗ್ರೆಸ್‌ನ ಡಾ. ಕೆ. ಜಯಕುಮಾರ್ 767,292 ಮತಗಳನ್ನು ಪಡೆದು ಎಐಎಡಿಎಂಕೆಯ ಡಾ. ಪಿ. ವೇಣುಗೋಪಾಲ್ ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಮಾಡಿದೆ.
ಸಸಿಕಾಂತ್ ಸೆಂಥಿಲ್ ತಿರುಚಿರಾಪಳ್ಳಿಯ ಇಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಐಎಎಸ್ ಪರೀಕ್ಷೆ ಬರೆದ ಅವರು ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
2009-2012ರ ತನಕ ಅವರು ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿದ್ದರು. ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದರು. ಚಿತ್ರದುರ್ಗ, ರಾಯಚೂರು, ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿದೆ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಭಾಗಿವಾಗಿರುವ ಡಿಎಂಕೆ ಕಾಂಗ್ರೆಸ್‌ಗೆ 10 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ 22 ಮತ್ತು ಕಾಂಗ್ರೆಸ್ 10 ಸ್ಥಾನಗಳಲ್ಲಿ ರಾಜ್ಯದಲ್ಲಿ ಕಣಕ್ಕಿಳಿಯಲಿವೆ.












Click it and Unblock the Notifications