ಸುಳ್ಳು ಕೇಸ್ ದಾಖಲು ಆರೋಪ: ಮೋದಿ ಟೀಕಾಕಾರ ಸಂಜೀವ್ ಭಟ್ ಬಂಧನ
ಅಹ್ಮದಾಬಾದ್, ಸೆಪ್ಟೆಂಬರ್ 5: ನರೇಂದ್ರ ಮೋದಿ ಮತ್ತು ಬಿಜೆಪಿಯ ಕಟು ಟೀಕಾಕಾರರಾದ ಗುಜರಾತ್‌ನ ವಿವಾದಾತ್ಮಕ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಸುಳ್ಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ.
1996ರಲ್ಲಿ ರಾಜಸ್ಥಾನದ ವಕೀಲರೊಬ್ಬರ ವಿರುದ್ಧ 1.5 ಕೆ.ಜಿ. ತೂಕದ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದರು ಎಂದು ಗುಜರಾತ್‌ನ ಬನಸ್ಕಾಂತಾದ ಪಾಲನ್ಪುರ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ ಆರೋಪ ಸಂಜೀವ್ ಅವರ ಮೇಲಿದೆ.
ಗುಜರಾತ್ ಹೈಕೋರ್ಟ್‌ನ ನಿರ್ದೇಶನದಂತೆ ಕೇಂದ್ರ ತನಿಖಾ ಇಲಾಖೆ (ಅಪರಾಧ) ಭಟ್ ಅವರನ್ನು ಬಂಧಿಸಿದೆ. ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಸಿಐಡಿ, ವಿಚಾರಣೆಗೆ ಒಳಪಡಿಸಿದೆ.
| Array |
ಆದೇಶ ನೀಡಿದ್ದ ಹೈಕೋರ್ಟ್
ವಕೀಲರ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿದ ಆರೋಪ ಎದುರಿಸುತ್ತಿರುವ ಸಂಜೀವ್ ಭಟ್ ಅವರ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಗುಜರಾತ್ ಹೈಕೋರ್ಟ್ ಜುಲೈನಲ್ಲಿ ಸಿಐಡಿಗೆ ಸೂಚಿಸಿತ್ತು.
ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ನಾವು ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿದ್ದೆವು. ತನಿಖೆ ನಡೆಸಿದ್ದ ಎಸ್‌ಐಟಿ ವಕೀಲರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸುವುದನ್ನು ಖಚಿತಪಡಿಸಿದೆ ಎಂದು ಡಿಜಿಪಿ ಸಿಐಡಿ (ಅಪರಾಧ) ಆಶೀಶ್ ಭಾಟಿಯಾ ತಿಳಿಸಿದ್ದಾರೆ.

ಇನ್ನೂ ಏಳು ಮಂದಿ ಬಂಧನ
ವಕೀಲರ ವಿರುದ್ಧ ಮಾದಕ ವಸ್ತು ಸಾಗಾಣಿಕೆಯ ಸುಳ್ಳು ಆರೋಪ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೀವ್ ಭಟ್ ಅವರಲ್ಲದೆ, ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನೂ ಏಳು ಮಂದಿಯನ್ನು ಬಂಧಿಸಲಾಗಿದೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
|
ಸಂಜೀವ್ ಭಟ್ vs ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಾದ ಸಂಜೀವ್ ಭಟ್, 2002ರ ಗುಜರಾತ್ ಗಲಭೆಗೆ ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಸರ್ಕಾರವೇ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಅಲ್ಲದೆ ಮೋದಿ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಬಳಿಕ ಸಂಜೀವ್ ಭಟ್ ಅವರನ್ನು 2015ರಲ್ಲಿ ಭಾರತೀಯ ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿತ್ತು.
ಬಳಿಕವೂ ಸಂಜೀವ್ ಭಟ್, ಮೋದಿ ವಿರುದ್ಧದ ಆರೋಪ ಮತ್ತು ವಾಗ್ದಾಳಿಗಳನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ, ಅವರು ಮೋದಿ ಅವರನ್ನು 'ಫೇಕು' ಎಂದು ಲೇವಡಿ ಮಾಡಿ ಟ್ವೀಟ್ ಮಾಡಿದ್ದರು. ಆದರೆ, ಅದನ್ನು 'ಪನ್ ಸ್ಟಾರ್' ಎಂಬ ಅಶ್ಲೀಲ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿ ಪೇಚಿಗೆ ಸಿಲುಕಿದ್ದರು.
2012ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಂಜೀವ್ ಭಟ್ ಅವರ ಪತ್ನಿ ಶ್ವೇತಾ ಭಟ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
|
ದೂರು ನೀಡಿದ್ದ ವಕೀಲ
ಬನಸ್ಕಾಂತಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಭಟ್ ಹಾಗೂ ಇತರರ ವಿರುದ್ಧ ರಾಜಸ್ಥಾನದ ವಕೀಲ ಸುಮರ್‌ಸಿಂಗ್ ರಾಜ್‌ಪುರೋಹಿತ್ ರಾಜಸ್ಥಾನದ ಪಾಲಿಯಲ್ಲಿ 1996ರಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿದ 22 ವರ್ಷಗಳ ಬಳಿಕ ಗುಜರಾತ್ ಹೈಕೋರ್ಟ್, ಈ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಸಿಐಡಿಗೆ ಸೂಚನೆ ನೀಡಿತ್ತು.

ನಿವೃತ್ತ ನ್ಯಾಯಮೂರ್ತಿ ವಿರುದ್ಧವೂ ಆರೋಪ
ರಾಜ್‌ಪುರೋಹಿತ್ ಸಲ್ಲಿಸಿದ ದೂರಿನಲ್ಲಿ ಸಂಜೀವ್ ಭಟ್ ಅವರ ಕೆಳಗಿನ ಪೊಲೀಸ್ ಅಧಿಕಾರಿಗಳಲ್ಲದೆ ಗುಜರಾತ್ ಹೈಕೋರ್ಟ್‌ನ ಆಗಿನ ನ್ಯಾಯಮೂರ್ತಿಯಾಗಿದ್ದ ಜೈನ್ ಅವರ ಹೆಸರನ್ನೂ ಉಲ್ಲೇಖಿಸಿದ್ದರು.
ತಮ್ಮನ್ನು ಅಪಹರಿಸಿ ಮಾದಕವಸ್ತು ಸಂಗ್ರಹಿಸಿದ್ದ ಸುಳ್ಳು ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಮೂರ್ತಿ ಜೈನ್ ಅವರ ಸಹೋದರಿಯ ಮಾಲೀಕತ್ವದ ಮನೆಯಲ್ಲಿ ಬಾಡಿಗೆಗೆ ಇದ್ದ ತಮ್ಮ ಕುಟುಂಬವನ್ನು ಬಲವಂತವಾಗಿ ತೆರವುಗೊಳಿಸುವ ಸಲುವಾಗಿ ಈ ರೀತಿ ಮೊಕದ್ದಮೆ ದಾಖಲಿಸಲಾಗಿತ್ತು ಎಂದು ರಾಜ್‌ಪುರೋಹಿತ್ ಆರೋಪಿಸಿದ್ದರು.

ಬೆದರಿಕೆ ಒಡ್ಡಿ ತೆರವು
ಗುಜರಾತ್‌ನ ಪಾಲನ್ಪುರದಲ್ಲಿನ ಹೋಟೆಲ್ ಒಂದರಲ್ಲಿ ರಾಜ್‌ಪುರೋಹಿತ್ ಅವರು ಒಂದು ಕೆ.ಜಿ. ಅಫೀಮಿನೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಅವರನ್ನು ಬಂಧಿಸಿದ್ದ ಬನಸ್ಕಾಂತ ಪೊಲೀಸರು ಪ್ರಕರಣ ದಾಖಲಿಸಿದ್ದರು.
ತಾವು ಎಂದಿಗೂ ಹೋಟೆಲ್‌ನಲ್ಲಿ ರೂಂ ಪಡೆದುಕೊಮಡೇ ಇರಲಿಲ್ಲ. ಅಲ್ಲದೆ ಪೊಲೀಸರು ದಾಳಿ ಮಾಡಿದ್ದರು ಎನ್ನಲಾದ ಸಂದರ್ಭದಲ್ಲಿ ತಾವು ರಾಜಸ್ಥಾನದ ಪಾಲಿಯಲ್ಲಿ ಇದ್ದಿದ್ದಾಗಿ ರಾಜ್‌ಪುರೋಹಿತ್ ಹೇಳಿಕೆ ನೀಡಿದ್ದಾರೆ.
ತಮ್ಮನ್ನು ಅಪಹರಿಸಿ ಪಾಲನ್ಪುರಕ್ಕೆ ಕರೆತರಲಾಗಿತ್ತು. ನ್ಯಾಯಮೂರ್ತಿ ಜೈನ್ ಅವರ ಸಹೋದರಿಯ ಬಾಡಿಗೆ ಮನೆಯನ್ನು ತೆರವುಗೊಳಿಸದಿದ್ದರೆ ಮಾದಕವಸ್ತು ಬಳಕೆ ಕಾಯ್ದೆಯ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು. ಪೊಲೀಸರ ಒತ್ತಡದಿಂದಾಗಿ ಮನೆಯನ್ನು ತೆರವುಗೊಳಿಸಿದ್ದೆವು ಎಂದು ರಾಜ್‌ಪುರೋಹಿತ್ ಆರೋಪಿಸಿದ್ದಾರೆ.











Click it and Unblock the Notifications