ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಮತ್ತೊಂದು ಮಹತ್ವದ ನಿರ್ಧಾರ
ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕ್ರೇಜಿವಾಲ್ ಅವರು ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸರ್ಕಾರದ ಪ್ರಮುಖ ಸೌಲಭ್ಯದಿಂದಲೂ ಅವರು ಹಿಂದಕ್ಕೆ ಸರಿದಿದ್ದಾರೆ. ಈಚೆಗೆ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರವಿಂದ ಕ್ರೇಜಿವಾಲ್ ಅವರು, ದೆಹಲಿಯ ಆಮ್ ಆದ್ಮಿ ಪಕ್ಷದ ಪ್ರಭಾವಿ ಸಚಿವೆ ಅತಿಶಿ ಮರ್ಲೆನಾ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಸೂಚಿಸಿದ್ದರು. ದೆಹಲಿ ಶಾಸಕರ ಸರ್ವಾನುಮತದಿಂದ ಅತಿಶಿ ನೂತನ ಸಿ.ಎಂ ಆಗಿದ್ದಾರೆ.
ಇದೀಗ ಅರವಿಂದ್ ಕ್ರೇಜಿವಾಲ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಗೆ ನೀಡಲಾಗಿದ್ದ ಮನೆಯನ್ನು ಖಾಲಿ ಮಾಡಿದ್ದಾರೆ. ದೆಹಲಿಯ ಸಿವಿಲ್ ಲೈನ್ಸ್‌ನ 6 ಫ್ಲಾಗ್ ಸ್ಟಾಫ್ ರಸ್ತೆಯ ಮನೆಯಿಂದ ಅವರು ಹಾಗೂ ಅವರ ಕುಟುಂಬದವರು ಶುಕ್ರವಾರ ಹೊರ ಬಂದಿದ್ದು. ಇದೀಗ ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ಕೇಂದ್ರ ಕಚೇರಿಯ ಸಮೀಪದಲ್ಲಿರುವ ಮನೆಯಲ್ಲಿ ವಾಸ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಫ್ಲಾಗ್‌ಸ್ಟಾಫ್ ರಸ್ತೆಯಲ್ಲಿದ್ದ ನಿವಾಸದಿಂದ ದೆಹಲಿಯ ಲುಟ್ಯೆನ್ಸ್ ವಲಯದಲ್ಲಿರುವ ಹೊಸ ಮನೆಗೆ ಕ್ರೇಜಿವಾಲ್ ಹಾಗೂ ಅವರ ಕುಟುಂಬದವರು ಸ್ಥಳಾಂತರಗೊಂಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ನಿವಾಸವನ್ನು ಖಾಲಿ ಮಾಡುವುದಾಗಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರು ಹೇಳಿದ್ದರು. ನವರಾತ್ರಿ ಪ್ರಾರಂಭವಾದ ಕೂಡಲೇ ಸರ್ಕಾರಿ ಬಂಗಲೆಯಿಂದ ಹೊರ ಬಂದು ಬೇರೆ ಮನೆಗೆ ಹೋಗುವುದಾಗಿ ಅವರು ಹೇಳಿದ್ದರು. ಅದರಂತೆ ಇದೀಗ ಅವರು ಮನೆ ಖಾಲಿ ಮಾಡಿದ್ದಾರೆ.
ಪ್ರಮಾಣಿಕತೆಯ ಪ್ರಮಾಣ ಪತ್ರ ಸಿಗಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಈಚೆಗೆ ಅರವಿಂದ ಕ್ರೇಜಿವಾಲ್ ಅವರು ರಾಜೀನಾಮೆ ನೀಡಿದ್ದರು. ದೆಹಲಿಯ ಜನ ನನಗೆ ಪ್ರಾಮಾಣಿಕತೆಯ ಪ್ರಮಾಣ ಪತ್ರವನ್ನು ನೀಡುವ ವರೆಗೂ ಕಾಯುತ್ತೇನೆ ಎಂದು ಕ್ರೇಜಿವಾಲ್ ಅವರು ಹೇಳಿದ್ದರು. ಅಲ್ಲದೇ ದೆಹಲಿಯ ಜನತೆಯಿಂದ ಪ್ರಾಮಾಣಿಕತೆಯ ಪ್ರಮಾಣಪತ್ರ ಸಿಕ್ಕ ನಂತರವಷ್ಟೇ ಮತ್ತೆ ಸಿ.ಎಂ ಸ್ಥಾನವನ್ನು ಅಲಂಕರಿಸುವುದಾಗಿ ಹೇಳಿ ಅವರು ರಾಜೀನಾಮೆ ನೀಡಿದ್ದರು. ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದಾಗಲೇ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿತ್ತು. ಈಚೆಗೆ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಎಎಪಿ ನಾಯಕ ಮನೀಶ್ ಸಿಸೋಡಿಯಾ ಮತ್ತು ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರು ಸಹ ಈ ಪ್ರಕರಣದಲ್ಲಿ ಜೈಲು ಸೇರಿದ್ದರು. ಈ ನಾಯಕರಿಗೆ ಜಾಮೀನು ಸಿಕ್ಕ ನಂತರ ಕೇಜ್ರಿವಾಲ್ ಅವರಿಗೂ ಜಾಮೀನು ಮಂಜೂರು ಆಗಿತ್ತು.

ಫೆಬ್ರವರಿಯಲ್ಲಿ ಚುನಾವಣೆ: ದೆಹಲಿಯಲ್ಲಿ ಮುಂದಿನ ವರ್ಷ ಅಂದರೆ 2025ನೇ ಸಾಲಿನಲ್ಲಿ ಚುನಾವಣೆ ನಡೆಯಲಿದೆ. ದೆಹಲಿ ವಿಧಾನಸಭೆಯ ಅವಧಿಯು ಮುಂದಿನ ವರ್ಷ ಫೆಬ್ರವರಿಯಲ್ಲಿ ಅಂತ್ಯವಾಗಲಿದೆ. ಇನ್ನು ಕೇವಲ ನಾಲ್ಕು ತಿಂಗಳು ಮಾತ್ರ ಚುನಾವಣೆಗೆ ಬಾಕಿ ಉಳಿದಿದ್ದು, ದೆಹಲಿ ಚುನಾವಣೆಗೆ ಈಗಲಿಂದಲೇ ಆಮ್ ಆದ್ಮಿ ಪಾರ್ಟಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತೆರೆಮರೆಯ ಸಿದ್ಧತೆಯನ್ನು ಶುರು ಮಾಡಿಕೊಂಡಿವೆ.












Click it and Unblock the Notifications