ತಾಜ್ ಮಹಲ್ ಸಮಾಧಿಯಷ್ಟೆ, ದೇಗುಲವಲ್ಲ: ಪುರಾತತ್ವ ಸಮೀಕ್ಷೆ ಇಲಾಖೆ
ತಾಜ್ ಮಹಲ್ ಸಮಾಧಿಯಷ್ಟೇ, ಶಿವಾಲಯವಲ್ಲ. ಆಗ್ರಾ ನ್ಯಾಯಾಲಯಕ್ಕೆ ಭಾರತೀಯ ಪ್ರಾಚ್ಯ ವಸ್ತು ಇಲಾಖೆ ಹೇಳಿಕೆ.
ಆಗ್ರಾ, ಆಗಸ್ಟ್ 26: ಜಗದ್ವಿಖ್ಯಾತ ತಾಜ್ ಮಹಲ್ ಒಂದು ಸಮಾಧಿ ಸ್ಥಳವಾಗಿದ್ದು, ಇದು ದೇವಾಲಯವಲ್ಲ ಎಂದು ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ (ಎಐಐ) ನ್ಯಾಯಾಲಯಕ್ಕೆ ತಿಳಿಸಿದೆ. ತಾಜ್ ಮಹಲ್ ಬಗ್ಗೆ ನ್ಯಾಯಾಲಯಕ್ಕೆ ಸರ್ಕಾರದಿಂದ ಇಂಥದ್ದೊಂದು ಸ್ಪಷ್ಟನೆ ಸಲ್ಲಿಕೆಯಾಗಿರುವುದು ಇದೇ ಮೊದಲು.
ತಾಜ್ ಮಹಲ್ ಇರುವ ಜಾಗದಲ್ಲಿ ಹಿಂದೆ ಶಿವಾಲಯವಿತ್ತು. ಆಗ ಅದನ್ನು ತೇಜೋ ಮಹಲ್ ಎಂದು ಕರೆಯಲಾಗುತ್ತಿತ್ತು. ಹೀಗಾಗಿ, ಈಗಿರುವ ತಾಜ್ ಮಹಲ್ ನಲ್ಲಿ ಶಿವನ ಆರಾಧನೆಗೂ ಅನುಕೂಲ ಮಾಡಿಕೊಡಬೇಕೆಂದು ಕೋರಿ 2015ರ ಏಪ್ರಿಲ್ ನಲ್ಲಿ ಆರು ಮಂದಿ ವಕೀಲರ ತಂಡವೊಂದು ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಈ ವಿಚಾರ, ಆಗ ಲೋಕಸಭೆಯಲ್ಲೂ ಚರ್ಚೆಗೊಳಗಾಗಿತ್ತಲ್ಲದೆ, ಆಗಿನ ಸಂಸ್ಕೃತಿ ಸಚಿವರು ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿ, ತಾಜ್ ಮಹಲ್ ಒಂದು ಸಮಾಧಿಯಷ್ಟೇ, ದೇಗುಲವಲ್ಲ ಎಂದು ಹೇಳಿದ್ದರು. ಇದೀಗ, ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯೂ ಇದನ್ನೇ ಪುನರುಚ್ಛರಿಸಿದೆ.
ಇದಿಷ್ಟೇ ಅಲ್ಲ, ವಕೀಲರಿಂದ ಸಲ್ಲಿಸಲಾಗಿರುವ ಅರ್ಜಿಯನ್ನು ಕೂಡಲೇ ವಜಾ ಮಾಡಬೇಕೆಂದು ಕೋರಿರುವ ಇಲಾಖೆ, ತಾಜ್ ಮಹಲ್ ವಿಚಾರದ ಚರ್ಚೆ ಅನಗತ್ಯ ಎಂದಿದೆ.












Click it and Unblock the Notifications