ಮೇವು ಹಗರಣ: ಲಾಲೂ ಯಾದವ್ ಗೆ ಜಾಮೀನು
ನವದೆಹಲಿ, ಡಿ.13: ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿಯಾಗಿ ಜೈಲುವಾಸಿಯಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಸುಪ್ರೀಂಕೋರ್ಟಿನಿಂದ ಜಾಮೀನು ಮಂಜೂರಾಗಿದೆ. ಆರ್ ಜೆಡಿ ಮುಖ್ಯಸ್ಥ ಲಾಲೂ ಅವರಿಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯ ಲಾಲು 5 ವರ್ಷ ಕಾಲ ಜೈಲುಶಿಕ್ಷೆ ವಿಧಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 37 ಇತರೆ ಅಪರಾಧಿಗಳು ಈಗಾಗಲೇ ಜಾಮೀನು ಪಡೆದು ಹೊರಗಿರುವುದನ್ನು ಪರಿಗಣಿಸಿದ ಸುಪ್ರೀಂಕೋರ್ಟಿನ ನ್ಯಾಯಪೀಠ ಲಾಲೂ ಅವರಿಗೆ ಶುಕ್ರವಾರ (ಡಿ.13) ಜಾಮೀನು ಮಂಜೂರು ಮಾಡಿದೆ. ಆದರೆ, ಲಾಲೂ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ತಿಳಿದು ಬಂದಿದೆ. ಆರ್ ಜೆ ಡಿ ಹಾಗೂ ಕಾಂಗ್ರೆಸ್ ನಾಯಕರು ಲಾಲೂ ಅವರಿಗೆ ಬೇಲ್ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ನಂತರ 65 ವರ್ಷದ ಲಾಲು ಬಿರ್ಸಾ ಮುಂಡಾ ಜೈಲಿನಲ್ಲಿದ್ದರು. ಸಂಸತ್ ಸ್ಥಾನವನ್ನು ಕಳೆದುಕೊಂಡಿದ್ದು, ಈ ಹಿಂದೆ ರೈಲ್ವೆ ಸಚಿವರಾಗಿದ್ದ ಲಾಲು ಇನ್ನು 11 ವರ್ಷ ಸಂಸತ್ತಿನತ್ತ ಸುಳಿದಾಡುವಂತೆಯೂ ಇಲ್ಲ.
ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್ ಯಾದವ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಮೊದಲ ತೀರ್ಪು ಪ್ರಕಟವಾಗಿದೆ.

ಛಾಯ್ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ. ಬಿಹಾರದ ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 20 ವರ್ಷಗಳ ಕಾಲ ನಡೆದ ಈ ಲೂಟಿ ತಡವಾಗಿ ಬೆಳಕಿಗೆ ಬಂದಿತ್ತು.
ಈ ಹಗರಣದಿಂದಾಗಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದ ಲಾಲು ಪ್ರಸಾದ್ ಯಾದವ್ ಜೈಲಿಗೂ ಹೋಗಿಬಂದಿದ್ದರು. ಲಾಲು ವಿರುದ್ಧ ದಾಖಲಾಗಿರುವ ಆರು ಪ್ರಕರಣಗಳ ಪೈಕಿ ಐದರ ವಿಚಾರಣೆ ಜಾರ್ಖಂಡ್‌ನಲ್ಲಿ, ಒಂದು ಪ್ರಕರಣದ ವಿಚಾರಣೆ ಬಿಹಾರದಲ್ಲೂ ನಡೆಯುತ್ತಿದೆ. ಜಾರ್ಖಂಡ್ ರಚನೆಯಾದ ಬಳಿಕ ಬಹುತೇಕ ಪ್ರಕರಣಗಳ ವಿಚಾರಣೆಯನ್ನು ಆ ರಾಜ್ಯಕ್ಕೆ ವರ್ಗಾಯಿಸಲಾಗಿತ್ತು.












Click it and Unblock the Notifications