ಕಾಸರಗೋಡು ಉತ್ಸವದ ವೇಳೆ ಪಟಾಕಿ ಸಿಡಿದು ಬೆಂಕಿ ಅವಘಡ- 8 ಮಂದಿ ಗಂಭೀರ, 150ಕ್ಕೂ ಹೆಚ್ಚು ಜನರಿಗೆ ಗಾಯ
ದೇವಸ್ಥಾನದ ಉತ್ಸವದ ವೇಳೆ ಏಕಾಏಕಿ ಪಟಾಕಿ ಸಿಡಿದ ಪರಿಣಾಮ ಎಂಟು ಜನರ ಸ್ಥಿತಿ ಗಂಭೀರವಾಗಿದ್ದು 150ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ನೀಲೇಶ್ವರಂನ ವೀರರ್ಕಾವು ದೇವಸ್ಥಾನದ ಬಳಿಯ ಪಟಾಕಿ ಸಂಗ್ರಹಗಾರಕ್ಕೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು, ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸೋಮವಾರ ಮಧ್ಯರಾತ್ರಿ ಈ ಅವಘಡ ಸಂಭವಿಸಿದ್ದು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಉತ್ಸವಕ್ಕಾಗಿ ಅಪಾರ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಈ ವೇಳೆ ಪಟಾಕಿ ಸಿಡಿಸಿದ ಕಿಡಿ ಪಟಾಕಿ ಸಂಗ್ರಹಗಾರಕ್ಕೆ ತಗುಲಿ ಏಕಾಏಕಿ ಪಟಾಕಿಗಳು ಸಿಡಿದಿದೆ. ಇದರಿಂದ ನೂರಾರು ಜನರಿಗೆ ಗಾಯಗಳಾಗಿವೆ. ತಕ್ಷಣ ಸ್ಥಳಿಯರು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಧಿಕಾರಿಗಳು ಬೆಂಕಿಯ ಕಾರಣ ತಿಳಿಯಲು ತನಿಖೆ ನಡೆಸುತ್ತಿದ್ದಾರೆ.
#Kasargod Firecracker room caught fire at veerakaav temple https://t.co/3tqCteOJXf pic.twitter.com/4TU0dkLZOb
— 𝖆𝖓𝖚𝖕 (@anupr3) October 28, 2024
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿರುವ ಮೂಲಂಕುಳಿ ಚಾಮುಂಡಿ ತೆಯ್ಯಂ ಉತ್ಸವದಲ್ಲಿ ಪಟಾಕಿ ಸಿಡಿಸುವ ವೇಳೆ ಪಟಾಕಿ ಸಂಗ್ರಹಾಗಾರಕ್ಕೆ ಸಿಡಿದ ಸಿಡಿಮದ್ದಿನಿಂದಾಗಿ ಪಟಾಕಿಗಳು ಏಕಾಏಕಿ ಸಿಡಿದಿವೆ. ಪರಿಣಾಮವಾಗಿ ಸ್ಫೋಟ ದೊಡ್ಡ ಮಟ್ಟದಲ್ಲಿ ಆಗಿದೆ. ಇದರಿಂದ ಭಾರೀ ಗಾತ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದಾಗಿ ತೆಯ್ಯಂ ಪ್ರದರ್ಶನವನ್ನು ವೀಕ್ಷಿಸಲು ಹತ್ತಿರದಲ್ಲಿ ನೆರೆದಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಮಂದಿ ಗಾಯಗೊಂಡರು.
ಕಾನ್‌ಹಂಗಡ್ (Kanhangad) ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 33 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. 19 ಮಂದಿಯನ್ನು ಕಾನ್‌ಹಂಗಡ್ ನ ಐಶಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, 12 ಮಂದಿಯನ್ನು ಅರಿಮಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ 40 ಮಂದಿಯನ್ನು ಸಂಜೀವನಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚುವರಿಯಾಗಿ 11 ಮಂದಿಯನ್ನು ನೀಲೇಶ್ವರ ತಾಲೂಕು ಆಸ್ಪತ್ರೆಗೆ ಮತ್ತು ಐವರನ್ನು ಕಣ್ಣೂರಿನ ಆಸ್ಟರ್ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಡಳಿತದ ಪ್ರಕಾರ, ಹೆಚ್ಚಿನ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗಳು ಮತ್ತು ಕಣ್ಣೂರಿನ ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹರಿಯಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಬೆಂಕಿ, ಕೆಲವರಿಗೆ ಗಾಯ
ಹರಿಯಾಣದ ರೋಹ್ಟಕ್ ಬಳಿ ಸೋಮವಾರ ಸಂಜೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರೈಲು ಜಿಂದ್‌ನಿಂದ ಸಂಪ್ಲಾ ಮತ್ತು ಬಹದ್ದೂರ್‌ಗಢ್ ಮೂಲಕ ದೆಹಲಿಗೆ ತೆರಳುತ್ತಿತ್ತು. ರೈಲಿನ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಶೀಘ್ರದಲ್ಲೇ ರೈಲಿಗೆ ಹೊಗೆ ಆವರಿಸಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಎರಡರಿಂದ ಮೂರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications