ಮಧುರೈ ರೈಲಿನಲ್ಲಿ ಬೆಂಕಿ; ಸಿಲಿಂಡರ್ ತಂದಿದ್ದ ಟೂರ್ ಅಪರೇಟರ್!
ಚೆನ್ನೈ, ಆಗಸ್ಟ್ 27: ಮಧುರೈ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದ ಪ್ರವಾಸಿ ರೈಲು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಕಾರಣ ಬಹಿರಂಗವಾಗಿದೆ. ಈ ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ 9 ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದರು.
ಪ್ರವಾಸಿ ರೈಲು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಟೂರ್ ಅಪರೇಟರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಕ್ರಮವಾಗಿ ರೈಲಿನಲ್ಲಿ ಎಲ್‌ಪಿಜಿ ಸಿಲಿಂಡರ್ ಸಾಗಣೆ ಮಾಡಿದ ಆರೋಪದ ಮೇಲೆ ಕೇಸು ದಾಖಲಿಸಲಾಗಿದೆ.

ದಕ್ಷಿಣ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಅಕ್ರಮವಾಗಿ ರೈಲಿನಲ್ಲಿ ಎಲ್‌ಪಿಜಿ ಸಿಲಿಂಡರ್ ಸಾಗಣೆ ಮಾಡುತ್ತಿದ್ದ ಕಾರಣಕ್ಕೆ ಕ್ರಿಮಿನಲ ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಬೆಂಕಿ ದುರಂತರದಲ್ಲಿ ಸಾವನ್ನಪ್ಪಿದ ಉತ್ತರ ಪ್ರದೇಶ ಮೂಲದ 9 ಯಾತ್ರಾರ್ಥಿಗಳ ಶವಗಳನ್ನು ಲಕ್ನೋಗೆ ವಿಮಾನದ ಮೂಲಕ ಸಾಗಣೆ ಮಾಡಲು ದಕ್ಷಿಣ ರೈಲ್ವೆ ವ್ಯವಸ್ಥೆಯನ್ನು ಮಾಡಿದೆ. ಶನಿವಾರ ಮುಂಜಾನೆ ಪ್ರವಾಸಿಗರ ರೈಲಿನ ಸರಕು ಸಾಗಣೆ ಬೋಗಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು.
ಶನಿವಾರ ನಡೆದ ದುರಂತ; ಶನಿವಾರ ಮುಂಜಾನೆ ಮಧುರೈ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡಿದ್ದ ಪ್ರವಾಸಿ ರೈಲು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ ಮೃತಪಟ್ಟ ಎಲ್ಲಾ ಯಾತ್ರಾರ್ಥಿಗಳು ಉತ್ತರ ಪ್ರದೇಶ ಮೂಲದವರು. ಲಕ್ನೋ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಸೇರಿದ ಎಲ್ಲರೂ ವಾರದ ಹಿಂದೆ ತಮಿಳುನಾಡಿನ ರಾಮೇಶ್ವರಂಗೆ ಪ್ರತ್ಯೇಕ ಬೋಗಿಯಲ್ಲಿ ತೀರ್ಥಯಾತ್ರೆ ಆರಂಭಿಸಿದ್ದರು. ಭಾನುವಾರ ಚೆನ್ನೈಗೆ ತಲುಪಿ ಅಲ್ಲಿಂದ ಹುಟ್ಟೂರಿಗೆ ವಾಪಸ್ ಆಗುವ ಆಲೋಚನೆಯಲ್ಲಿದ್ದರು.
ಆಹಾರ ತಯಾರು ಮಾಡುವ ಬೋಗಿಯಲ್ಲಿ ಅಕ್ರಮವಾಗಿ ತರಲಾಗಿದ್ದ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ದಕ್ಷಿಣ ರೈಲ್ವೆ ವಿಭಾಗ ಪ್ರಾಥಮಿಕ ತನಿಖೆಯಲ್ಲಿ ಅಂದಾಜಿಸಿದೆ. ಬೆಳಗ್ಗೆ ತಿಂಡಿ ಅಥವ ಚಹಾ ತಯಾರು ಮಾಡುವಾಗ ಗ್ಯಾಸ್ ಸೋರಿಕೆಯಾಗಿರುವ ಸಾಧ್ಯತೆ ಇದೆ.
ಬೆಂಕಿ ನಂದಿಸಿದ ಬಳಿಕ ಬೋಗಿಯಲ್ಲಿ ಎಲ್‌ಪಿಜಿ ಸಿಲಿಂಡರ್, ಆಲೂಗೆಡ್ಡೆ ಚೀಲ, ಸುಟ್ಟು ಕರಕಲಾಗಿರುವ ಪಾತ್ರೆಗಳು ಸಿಕ್ಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ಕಾಣಿಸಿಕೊಂಡ ಬಳಿಕ ಬಲವಾರು ಬಾಗಿಲುಗಳನ್ನು ಮುರಿದು ಹೊರಗೆ ಓಡಿ ಬಂದರು. ಆದ್ದರಿಂದ ಹೆಚ್ಚಿನ ಜೀವಹಾನಿಯಾಗಿಲ್ಲ.
ಘಟನೆಯ ಕುರಿತು ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಧುರೈ ಜಿಲ್ಲಾಧಿಕಾರಿ ಎಂ. ಎಸ್. ಸಂಗೀತಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆಯನ್ನು ಮಾಡಿದ್ದಾರೆ.
ಬೆಂಕಿಗೆ ಆಹುತಿಯಾದ ಬೋಗಿಯನ್ನು ಆಗಸ್ಟ್ 25ರಂದು ಪುಣಲೂರು-ಮಧುರೈ ಎಕ್ಸ್‌ಪ್ರೆಸ್‌ಗೆ ಅಳವಡಿಕೆ ಮಾಡಲಾಗಿತ್ತು. ಅದು ಮಧುರೈ ನಿಲ್ದಾಣ ತಲುಪಿದಾಗ ಅದನ್ನು ಇಂಜಿನ್‌ನಿಂದ ಪ್ರತ್ಯೇಕಿಸಿ, ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಶನಿವಾರ ಮುಂಜಾನೆ 5.15ರ ಸುಮಾರಿಗೆಈ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. 7.15ರ ಸುಮಾರಿಗೆ ಬೆಂಕಿಯನ್ನು ನಂದಿಸಲಾಯಿತು.
ತಮಿಳುನಾಡು ರಾಜ್ಯಪಾಲರು, ಮುಖ್ಯಮಂತ್ರಿ ಸ್ಟಾಲಿನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವಾರು ನಾಯಕರು ಅಗ್ನಿ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬದಕ್ಕೆ ತಮಿಳುನಾಡು ಸರ್ಕಾರ 3 ಮತ್ತು ಉತ್ತರ ಪ್ರದೇಶ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.












Click it and Unblock the Notifications