ವಂಚನೆ ಆರೋಪ : ನಟ ರಣಬೀರ್ ವಿರುದ್ಧ ಎಫ್ ಐಆರ್
ಮುಂಬೈ, ಸೆ. 22: 'ಮ್ಯಾಗಿ ತಿನ್ನಿ' ಎಂದು ಹೇಳಿದ ಬಾಲಿವುಡ್ ನಟ, ನಟಿಯರ ವಿರುದ್ಧ ಪ್ರಕರಣಗಳು ದಾಖಲಾದ ಸುದ್ದಿ ಈ ಹಿಂದೆ ಓದಿರಬಹುದು. ಈಗ ಆನ್ ಲೈನ್ ಶಾಪಿಂಗ್ ಪರ ಪ್ರಚಾರ ಮಾಡಿದ ನಟ ರಣಬೀರ್ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಬ್ಬರ ಮಾತು ಕೇಳಿ ನಾನು ಮೋಸ ಹೊದೆ ಎಂದು ಗ್ರಾಹಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಹಕರನ್ನು ವಂಚಿಸಿದ ಆರೋಪದ ಮೇಲೆ ಆನ್‌ಲೈನ್ ಶಾಪಿಂಗ್ ಸೈಟ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಹಾಗೂ ನಿರ್ದೇಶಕ ಫರ್ಹಾನ್ ಅಖ್ತರ್, ರಣಬೀರ್ ಕಪೂರ್ ವಿರುದ್ಧ ಕೇಶವ್ ನಗರದ ಮಡಿಯಾನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. [ನನಗೂ ಮ್ಯಾಗಿಗೂ ಯಾವುದೇ ಸಂಬಂಧವಿಲ್ಲ : ಬಚ್ಚನ್]

'ಆಸ್ಕ್ ಮಿ ಬಜಾರ್ ಡಾಟ್ ಕಾಮ್ ಆನ್ ಲೈನ್ ಶಾಪಿಂಗ್ ಜಾಲತಾಣಕ್ಕೆ ಈ ಇಬ್ಬರು ನಟರು ಪ್ರಚಾರದ ರಾಯಭಾರಿಗಳಾಗಿದ್ದರು. ಆದರೆ, ಸಂಸ್ಥೆ ಮೂಲಕ ಉತ್ಪನ್ನಗಳನ್ನು ಖರೀದಿಸಲು ಯತ್ನಿಸಿದ ವಕೀಲ ರಜತ್ ಬನ್ಸಾಲ್ ಅವರು ಮೋಸಕ್ಕೊಳಗಾಗಿದ್ದಾರೆ. ಗ್ರಾಹಕರಿಗೆ ವಂಚಿಸಿದ್ದರಿಂದ ವೆಬ್ ಸೈಟ್ ಹಾಗೂ ಇಬ್ಬರು ಸೆಲೆಬ್ರಿಟಿಗಳ ಮೇಲೆ ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಕ್ ಮಿ ಬಜಾರ್ ಡಾಟ್ ಕಾಮ್ ಆನ್ ಲೈನ್ ಶಾಪಿಂಗ್ ತಾಣದ ನಿರ್ದೇಶಕರಾದ ಸಂಜೀವ್ ಗುಪ್ತಾ, ಪಿಯೂಷ್ ಪಂಕಜ್, ಕಿರಣ್ ಕುಮಾರ್ ಶ್ರೀನಿವಾಸ್ ಮೂರ್ತಿ, ಮಾರ್ಕೆಟಿಂಗ್ ಅಧಿಕಾರಿ ಪೂಜಾ ಗೋಯಾಲ್ ಅವರನ್ನು ಸಹ ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ.
ಆನ್‌ಲೈನ್ ಶಾಪಿಂಗ್ ಜಾಲತಾಣವಾದ 'ಆಸ್ಕ್ ಮಿ ಬಜಾರ್ ಡಾಟ್ ಕಾಮ್ನಲ್ಲಿ ಬನ್ಸಾಲ್ ಅವರು 40 ಇಂಚಿನ ಎಲ್ ಇಡಿ ಟಿ.ವಿ.ಯೊಂದನ್ನು ಆಗಸ್ಟ್ 23ರಂದು ಆರ್ಡರ್ ಮಾಡಿದ್ದರು. ಇದಕ್ಕಾಗಿ 29,999 ರೂ.ಗಳನ್ನು ಡೆಬಿಟ್ ಕಾರ್ಡ್ ಬಳಸಿ ಪಾವತಿಸಿದ್ದರು. ಆದರೆ 10 ದಿನ ಕಳೆದರು ಟಿ.ವಿ. ಬರಲಿಲ್ಲ. ಈ ಬಗ್ಗೆ ಸಂಸ್ಥೆಯನ್ನು ವಿಚಾರಿಸಿದಾಗ ಸಮರ್ಪಕ ಉತ್ತರ ಸಿಗಲಿಲ್ಲ. ಹೀಗಾಗಿ ಸಂಸ್ಥೆ ವಿರುದ್ಧ ಹಾಗೂ ಸಂಸ್ಥೆಯ ಉತ್ಪನ್ನಗಳಿಗೆ ಜಾಹೀರಾತು ನೀಡಿದ್ದ ಫರ್ಹಾನ್ ಮತ್ತು ರಣಬೀರ್ ವಿರುದ್ಧ ದೂರು ದಾಖಲಿಸಲಾಗಿದೆ. (ಪಿಟಿಐ)












Click it and Unblock the Notifications