ನನಗೂ ಮ್ಯಾಗಿಗೂ ಯಾವುದೇ ಸಂಬಂಧವಿಲ್ಲ : ಬಚ್ಚನ್
ಮುಂಬೈ, ಜೂ. 03 : ಸದ್ಯಕ್ಕೆ ನನಗೂ ಮ್ಯಾಗಿ ಜಾಹೀರಾತಿಗೂ ಯಾವುದೇ ಸಂಬಂಧವಿಲ್ಲ. ಎರಡು ವರ್ಷಗಳ ಹಿಂದೆಯೇ ಮ್ಯಾಗಿ ಉತ್ಪನ್ನವನ್ನು ಬೆಂಬಲಿಸುವುದನ್ನು ಬಿಟ್ಟಿದ್ದೇನೆ ಎಂದು ವಿವಾದದ ಕೇಂದ್ರಬಿಂದುವಾಗಿರುವ ಹಿಂದಿ ಚಿತ್ರನಟ ಅಮಿತಾಭ್ ಬಚ್ಚನ್ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಮ್ಯಾಗಿ ಜಾಹೀರಾತನ್ನು ಎಂಡಾರ್ಸ್ ಮಾಡುವುದನ್ನು ಬಿಟ್ಟಿದ್ದು ಮಾತ್ರವಲ್ಲ, ಇನ್ನೆಂದೂ ಅದರ ಪ್ರಚಾರದಲ್ಲಿ ಕಾಣಿಸಿಕೊಳ್ಳಬಾರದೆಂದು ನಿರ್ಧರಿಸಿದ್ದೆ ಎಂದು ಬುಧವಾರ ಸ್ಪಷ್ಟೀಕರಣ ನೀಡಿದ್ದಾರೆ.
ಮ್ಯಾಗಿಯಲ್ಲಿ ಅತ್ಯಧಿಕ ಪ್ರಮಾಣದ ಮೊನೊಸೋಡಿಯಂ ಗ್ಲುಟಮೇಟ್ ಮತ್ತು ಸೀಸ ಇರುವುದು ಪತ್ತೆಯಾಗಿರುವುದು ಹಲವಾರು ಪರೀಕ್ಷೆಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮ್ಯಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರೀತಿ ಜಿಂಟಾ ವಿರುದ್ಧ ಹರ್ಯಾಣ ಕೋರ್ಟ್ ನೋಟೀಸ್ ಜಾರಿಗೊಳಿಸಿದೆ. [ಮ್ಯಾಗಿ ಕೆಟ್ಟದ್ದು ಎಂಬ ವಿವಾದದ ಬಗ್ಗೆ ಟ್ವಿಟ್ಟಿಗರು ಏನನ್ನುತ್ತಾರೆ?]

ಕಂಪನಿಯೊಂದಿಗೆ ಮಾಡಿಕೊಳ್ಳುವ ಒಪ್ಪಂದದಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟರನ್ನು ರಕ್ಷಿಸುವ ನಿಯಮವಿದ್ದರೂ, ಇನ್ನು ಮುಂದೆ ಯಾವುದೇ ಉತ್ಪನ್ನವನ್ನು ಬೆಂಬಲಿಸಿ ಅದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಾಗ ಎಚ್ಚರದಿಂದಿರುತ್ತೇನೆ ಎಂದು ಅಮಿತಾಭ್ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮ್ಯಾಗಿ ನಿರಾಳ : ಉತ್ತರಪ್ರದೇಶದಲ್ಲಿ ಮ್ಯಾಗಿ ಆಹಾರ ಸುರಕ್ಷತಾ ಸ್ಟಾಂಡರ್ಡನ್ನು ಉಲ್ಲಂಘಿಸಿದೆ ಎಂಬ ವರದಿ ಬಂದಿದ್ದರೂ ಮಹಾರಾಷ್ಟ್ರದಲ್ಲಿ ಮ್ಯಾಗಿ ಸುರಕ್ಷಿತವಾಗಿದೆ. ಅಲ್ಲಿ ನಡೆಸಿರುವ ಪರೀಕ್ಷೆಯಲ್ಲಿ ಆರೋಗ್ಯ ಕೆಡಿಸುವ ಅಂಶಗಳು ಮ್ಯಾಗಿಯಲ್ಲಿ ಪತ್ತೆಯಾಗಿಲ್ಲ ಎಂದು ಕಂಡುಬಂದಿರುವುದು ನೆಸ್ಲೆ ಕಂಪನಿಗೆ ನಿರಾಳತೆ ತಂದಿದೆ.
ಈ ನಡುವೆ ಗೋವಾದಲ್ಲಿಯೂ ಮ್ಯಾಗಿ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಮ್ಯಾಗಿಯಲ್ಲಿ ಸೀಸವಾಗಲಿ, ಮೊನೊಸೋಡಿಯಂ ಗ್ಲುಟಮೇಟ್ ಅತ್ಯಧಿಕ ಪ್ರಮಾಣದಲ್ಲಿಲ್ಲ ಎಂದು ಆಹಾರ ಮತ್ತು ಔಷಧಿ ಆಡಳಿತಾಧಿಕಾರಿ ಪ್ರಮಾಣಪತ್ರ ನೀಡಿದ್ದಾರೆ. ಕೇರಳದಲ್ಲಿಯೂ ಮ್ಯಾಗಿ ಪರೀಕ್ಷೆ ಪಾಸ್ ಮಾಡಿದೆ.
ಕರ್ನಾಟಕದಲ್ಲಿ ಫಲಿತಾಂಶಕ್ಕೆ ಕಾದಿರುವ ಮ್ಯಾಗಿ : ಕರ್ನಾಟಕದಲ್ಲಿ ಕೂಡ ಆರೋಗ್ಯ ಸಚಿವ ಡಾ. ಯುಟಿ ಖಾದರ್ ಅವರು ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ ಎಂದು ನುಡಿದಿದ್ದಾರೆ. ಅಂಕ ಏರುಪೇರಿನಿಂದ ಕಂಗಾಲಾಗಿರುವ ಪಿಯುಸಿ ವಿದ್ಯಾರ್ಥಿಗಳಂತೆ ಮ್ಯಾಗಿ ಕೂಡ ಇನ್ನೆರಡು ದಿನ ಫಲಿತಾಂಶಕ್ಕಾಗಿ ಕಾಯಬೇಕಿದೆ.












Click it and Unblock the Notifications