Arvind Kejriwal: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಆಘಾತ ನೀಡಿದ ‘ಇಡಿ’!
ನವದೆಹಲಿ: ಪಂಚ ರಾಜ್ಯಗಳ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿರುವ ಸಮಯದಲ್ಲೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಭಾರಿ ದೊಡ್ಡ ಆಘಾತ ಸಿಕ್ಕಿದೆ. ಈಗಾಗಲೇ ಸಾಲು ಸಾಲು ಆರೋಪ ಎದುರಿಸುತ್ತಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ, ಮತ್ತೊಂದು ಶಾಕ್ ಸಿಕ್ಕಿದೆ. ನವೆಂಬರ್ 2 ರಂದು ವಿಚಾರಣೆಗಾಗಿ ಬರಲು, ಕೇಜ್ರಿವಾಲ್‌ಗೆ ಇಡಿ ದಿಢೀರ್ ಸಮನ್ಸ್ ನೀಡಿದೆ. ಹಾಗಾದರೆ ಅರವಿಂದ್ ಕೇಜ್ರಿವಾಲ್ ವಿರುದ್ಧ 'ಇಡಿ' ಕೆಂಗಣ್ಣು ಏಕೆ?
ಅಂದಹಾಗೆ ದೆಹಲಿ ಅಬಕಾರಿ ಪ್ರಕರಣ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ, ಸಮನ್ಸ್ ನೀಡಿದೆ 'ಇಡಿ'. ಅಷ್ಟಕ್ಕೂ ಕೆಲ ವರ್ಷಗಳ ಹಿಂದೆ ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿ ರೂಪಿಸಿತ್ತು. ಇದಕ್ಕೆ ಭಾರಿ ವಿರೋಧವು ವ್ಯಕ್ತವಾಗಿತ್ತು ಕೂಡ. ಇದರ ಜೊತೆಗೆ ಅವ್ಯವಹಾರ ಕೂಡ ನಡೆದಿದೆ ಎಂದು ಆರೋಪಿಸಿ ಈ ವಿಚಾರವಾಗಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಪ್ರತ್ಯೇಕವಾಗಿ ಕೇಸ್ ದಾಖಲಿಸಿತ್ತು. ಇದೀಗ 'ಇಡಿ' ಈ ವಿಚಾರದಲ್ಲಿ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿರುವುದು ದೇಶದ ಗಮನ ಸೆಳೆದಿದೆ.

ಏನಿದು ಕೇಸ್? ಯಾಕಿಷ್ಟು ಸಂಚಲನ?
ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ನವೆಂಬರ್ 17, 2021 ರಂದು ಈ ನೀತಿ ಜಾರಿಗೆ ತಂದಿತ್ತು, ಆದರೆ ಭ್ರಷ್ಟಾಚಾರ ಆರೋಪ ನಡುವೆ ಸೆಪ್ಟೆಂಬರ್ 2022 ರ ಕೊನೆಯಲ್ಲಿ ಅದನ್ನು ರದ್ದುಗೊಳಿಸಿತ್ತು. ತನಿಖಾ ಸಂಸ್ಥೆಗಳ ಪ್ರಕಾರ, ಹೊಸ ನೀತಿ ಅನುಷ್ಠಾನದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಲಾಗಿತ್ತು. ಸಗಟು ವ್ಯಾಪಾರಿಗಳ ಲಾಭ ಶೇಕಡಾ 5 ರಿಂದ 12 ಕ್ಕೆ ಹೆಚ್ಚಿಸಲು ಈ ನೀತಿ ಅನುವು ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿ ದೇಶಾದ್ಯಂತ ಸದ್ದು ಮಾಡಿ, ಸುದ್ದಿಯಾಗಿತ್ತು.
ಸಾಲು ಸಾಲು ಆರೋಪಗಳು
ಇಷ್ಟೇ ಅಲ್ಲದೆ, ಇದರ ಜತೆಗೆ ಹೊಸ ನೀತಿ ಮೂಲಕ ಆರ್ಥಿಕ ಲಾಭ ಪಡೆಯುವ ಸಲುವಾಗಿ ಮದ್ಯದ ಲೈಸೆನ್ಸ್‌ನ ನೀಡುವಲ್ಲಿ ಅನರ್ಹರಿಗೂ ಅವಕಾಶ ನೀಡಲು ಮುಂದಾಗಿದ್ದ ಆರೋಪ ಕೇಳಿಬಂದಿತ್ತು. ಈ ಎಲ್ಲಾ ಆರೋಪಗಳನ್ನು ದೆಹಲಿ ಸರ್ಕಾರ ಮತ್ತು ಸಿಸೋಡಿಯಾ ಅವರು ನಿರಾಕರಿಸಿದ್ದರು. ಇದೀಗ 'ಇಡಿ' ಮತ್ತೊಂದು ಹೆಜ್ಜೆ ಮುಂದಿಟ್ಟು ಖುದ್ದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ನೀಡಿದೆ.
ಒಟ್ನಲ್ಲಿ ಇನ್ನೇನು ಪಂಚರಾಜ್ಯ ಚುನಾವಣೆ ಬರಲಿದ್ದು, ನಂತರ ಲೋಕಸಭೆ ಚುನಾವಣೆಗೆ ಕೂಡ ಕೌಂಟ್‌ಡೌನ್ ಶುರುವಾಗಲಿದೆ. ಆದರೆ ಇದೇ ಸಮಯದಲ್ಲಿ ಕೇಜ್ರಿವಾಲ್‌ಗೆ ಸಂಕಷ್ಟ ಎದುರಾಗಿದೆ. ಈ ಬಗ್ಗೆ ವಿರೋಧ ಪಕ್ಷಗಳ ನಾಯಕರು ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ? ಹಾಗೇ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಈ ಘಟನೆ ಯಾವ ರೀತಿಯ ತಿಕ್ಕಾಟಕ್ಕೆ ವೇದಿಕೆ ಒದಗಿಸುತ್ತದೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications