ಪೊಲೀಸರು ಸುತ್ತುವರೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ರೌಡಿಗಳು
ತಮ್ಮ ಅಡಗುದಾಣ ಸುತ್ತುವರಿದ ಪೊಲೀಸರಿಗೆ ಸಿಕ್ಕಿಬೀಳುವ ಭಯದಲ್ಲಿ ಮೂವರು ರೌಡಿಗಳ ಆತ್ಮಹತ್ಯೆ. ಹರ್ಯಾಣದ ಗ್ರಾಮವೊಂದರಲ್ಲಿ ನಡೆದ ಘಟನೆ. ಮೊದಲು ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದ್ದ ರೌಡಿಗಳು.
ಚಂಡೀಗಢ, ಜೂನ್ 13: ತಮ್ಮನ್ನು ಬಂಧಿಸಲು ಬಂದಿದ್ದ ಪೊಲೀಸರ ಪಡೆಯೊಂದು ತಮ್ಮ ಅಡಗುದಾಣವನ್ನು ಸುತ್ತುವರಿದ ಹಿನ್ನೆಲೆಯಲ್ಲಿ ಮೂವರು ಕುಖ್ಯಾತ ರೌಡಿಗಳು ತಮಗೆ ತಾವೇ ಗುಂಡು ಹಾರಿಸಿಕೊಂಡು ಸತ್ತು ಹೋಗಿರುವ ಘಟನೆ ಮಂಗಳವಾರ ಬೆಳಗ್ಗೆ ಹರ್ಯಾಣದ ಸಿರ್ಸಾ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.
ಫರೀದಾಕೋಟ್‍ನ ಜಸ್‍ಪ್ರೀತ್ ಸಿಂಗ್ ಅಲಿಯಾಸ್ ಜಂಪಿ, ಬಂಟಿ ದಿಲ್ಲೋನ್ ಹಾಗೂ ನಿಶಾನ್ ಸಿಂಗ್ ಮೃತರು.
ಈ ಮೂವರು ಗ್ರಾಮವೊಂದರ ಮನೆಯಲ್ಲಿ ಅಡಗಿದ್ದರು. ಖಚಿತ ಮಾಹಿತಿಯ ಮೇರೆಗೆ ಇವರ ಅಡಗುದಾಣದ ಮೇಲೆ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದರು. ಹರ್ಯಾಣ ಮತ್ತು ಪಂಜಾಬ್ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಪೊಲೀಸರು ರೌಡಿಗಳಿದ್ದ ಮನೆಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದ್ದರು. ಆದರೆ, ರೌಡಿಗಳು ಪೊಲೀಸರ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರಿಂದಲೂ ಗುಂಡು ಹಾರಿದವು. ಇದರಿಂದಾಗಿ, ಕೆಲಕಾಲ ಗುಂಡಿನ ಚಕಮಕಿ ನಡೆಯಿತು.
ಆದರೆ, ಬರಬರುತ್ತಾ ರೌಡಿಗಳ ಬಳಿಯಿದ್ದ ಗುಂಡುಗಳ ದಾಸ್ತಾನು ಖಾಲಿಯಾಗತೊಡಗಿತು. ಇನ್ನು, ತಮ್ಮಲ್ಲಿನ ಗುಂಡು ಖಾಲಿಯಾದರೆ, ತಾವು ಪೊಲೀಸರ ಬಲೆಗೆ ಬೀಳುವುದು ಖಚಿತ ಎಂದು ತಿಳಿದ ಆ ರೌಡಿಗಳು ತಮ್ಮ ಪಿಸ್ತೂಲುಗಳನ್ನು ಉಪಯೋಗಿಸಿ ತಾವೇ ತಾವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯೊಳಗಿದ್ದ ರೌಡಿಗಳು ತಮಗೆ ತಾವೇ ಗುಂಡಿಟ್ಟುಕೊಂಡಿದ್ದನ್ನು ಗಮನಿಸಿದ ಪೊಲೀಸರು ತಕ್ಷಣ ಮನೆಯ ಬಾಗಿಲು ಒಡೆದು ಒಳ ಪ್ರವೇಶಿದ್ದಾರೆ. ಆದರೆ, ಅಷ್ಟರಲ್ಲಿ ಬಂಟಿ ಮತ್ತು ಜಸ್‍ಪ್ರೀತ್ ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಬ್ಬ ರೌಡಿ, ನಿಶಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾನೆ.












Click it and Unblock the Notifications