ಆಂಬ್ಯುಲೆನ್ಸ್ ನಿರಾಕರಿಸಿದ ಸರ್ಕಾರಿ ಆಸ್ಪತ್ರೆ: ಮಗಳ ಮೃತದೇಹ ಬೈಕ್ ಮೇಲೆ ಸಾಗಿಸಿದ ತಂದೆ
ಭೋಪಾಲ್, ಮೇ. 17: ಮಧ್ಯಪ್ರದೇಶದ ಶಹದೋಲ್‌ನ ಸರ್ಕಾರಿ ಆಸ್ಪತ್ರೆಯೊಂದು ಆಂಬ್ಯುಲೆನ್ಸ್ ನಿರಾಕರಿಸಿದ ಕಾರಣ ತಂದೆಯೊಬ್ಬರು ತಮ್ಮ ಮಗಳ ಮೃತದೇಹವನ್ನು ಬೈಕ್ ಮೇಲೆಯೇ ತಮ್ಮ ಹಳ್ಳಿಗೆ ತೆಗೆದುಕೊಂಡು ಹೋಗಿರುವ ಮನಮಿಡಿಯುವ ಘಟನೆ ವರದಿಯಾಗಿದೆ. ಘಟನೆಗೆ ಸಾಮಾಜಿಕ ಜಾಲತಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಶಹದೋಲ್‌ನಿಂದ 70 ಕಿಮೀ ದೂರದಲ್ಲಿರುವ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಅವರು, ಸೋಮವಾರ ರಾತ್ರಿ ಅವರ 13 ವರ್ಷದ ಮಗಳು ಮಾಧುರಿ ಕುಡಗೋಲು ರಕ್ತಹೀನತೆಯಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ತೆಗೆದುಕೊಂಡು ಹೋಗಲು ಆಸ್ಪತ್ರೆಯ ಅಧಿಕಾರಿಗಳನ್ನು ವಾಹನಕ್ಕಾಗಿ ಕೇಳಿದ್ದೆವು ಆದರೆ 15 ಕಿ.ಮೀಗೂ ಹೆಚ್ಚು ದೂರದ ಸ್ಥಳಗಳಿಗೆ ವಾಹನಗಳು ಲಭ್ಯವಿಲ್ಲ ಎಂದು ತಿಳಿಸಲಾಯಿತು ಎಂದು ಹೇಳಿದ್ದಾರೆ.

"ನಾವು ಆಸ್ಪತ್ರೆಯಲ್ಲಿ ಶವ ವಾಹನವನ್ನು ಕೇಳಿದ್ದೆವು. ಆದರೆ ಅದು 15 ಕಿಮೀಗಿಂತ ಹೆಚ್ಚು ಲಭ್ಯವಿರುವುದಿಲ್ಲ ಎಂದು ಅವರು ಹೇಳಿದರು. ತಾವೇ ವ್ಯವಸ್ಥೆ ಮಾಡುವಂತೆ ಹೇಳಿದರು. ಹಣದ ಕೊರತೆಯಿಂದಾಗಿ ನಾವು ನಮ್ಮ ಮಗಳ ಮೃತ ದೇಹವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದೇವೆ" ಎಂದು ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.
ಶಹದೋಲ್ ಜಿಲ್ಲಾಧಿಕಾರಿ ವಂದನಾ ವೈದ್ಯ ಅವರು ತಮ್ಮ ಗ್ರಾಮದಿಂದ ಸುಮಾರು 20 ಕಿಮೀ ದೂರದಲ್ಲಿದ್ದರು. ಮತ್ತೊಂದು ಗ್ರಾಮಕ್ಕೆ ತೆರಳುತ್ತಿದ್ದ ಜಿಲ್ಲಾಧಿಕಾರಿ ವಂದನಾ ವೈದ್ಯ ಅವರು ಮಗಳ ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಸಹಾಯ ಮಾಡಿದ್ದಾರೆ. ಹೀಗಾಗಿ ಅಂತಿಮ ವಿಧಿಗಳಿಗಾಗಿ ಮಗಳ ದೇಹವನ್ನು ಮನೆಗೆ ಕೊಂಡೊಯ್ಯಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ

ಶಹದೋಲ್ ಜಿಲ್ಲಾಧಿಕಾರಿ ವಂದನಾ ವೈದ್ಯ ಕುಟುಂಬಕ್ಕೆ ಸ್ವಲ್ಪ ಆರ್ಥಿಕ ಸಹಾಯವನ್ನು ಒದಗಿಸಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications